ಕನ್ನಡಪ್ರಭ ವಾರ್ತೆ ಪಾಂಡವಪುರ
ಮರಿದೇವರು ಶ್ರೀಗಳ ಹೆಸರಿನಲ್ಲಿ ನನಗೆ ನೀಡಿದ ಜೀವನದಿ ಪುರಸ್ಕಾರದೊಂದಿಗೆ ನೀಡಿರುವ 50 ಸಾವಿರ ರು. ಜತೆಗೆ ನನ್ನ ತಂದೆ-ತಾಯಿ ಹೆಸರಿನಲ್ಲಿ 50 ಸಾವಿರ ಸೇರಿಸಿ ಬೇಬಿಗ್ರಾಮದ ಡಿಎಂಎಸ್ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ 1 ಲಕ್ಷ ರು. ನೀಡುವುದಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪ್ರಕಟಿಸಿದರು.ತಾಲೂಕಿನ ಬೇಬಿಗ್ರಾಮದ ದುದಂಡೇಶ್ವರ ಮಠದಿಂದ ಮಂಗಳವಾರ ನಡೆದ ಲಿಂಗೈಕ್ಯ ಶ್ರೀಮರೀದೇವರುಸ್ವಾಮಿಗಳ 16ನೇ ವರ್ಷದ ಪುಣ್ಯಸ್ಮರಣೆ ಹಾಗೂ 4ನೇ ವರ್ಷದ ಮಹಾ ರಥೋತ್ಸವದಲ್ಲಿ ಮಹಾಚೇತನ ಶ್ರೀಮರಿದೇವರು ಶಿವಯೋಗಿ ಜೀವನದಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದರು.
ಮರೀದೇವರು ಸ್ವಾಮೀಜಿಗಳು ನನ್ನ ಗುರು ಶಿಷ್ಯಸಂಬಂಧ. 2004ರಲ್ಲಿ ಮೊದಲ ಬಾರಿಗೆ ಶಾಸಕನಾದ ಸಂದರ್ಭದಲ್ಲಿ ಶ್ರೀಗಳು ಆಶೀರ್ವಾದ ಮಾಡಿ ಮೊದಲ ಬಾರಿಗೆ ಬಂದು ನನಗೆ ಮತಚಲಾಯಿಸಿದ ಫಲವಾಗಿ ನಾನು ಶಾಸಕನಾದೆ ಎಂದರು.ಕಳೆದ ಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ, ಮರಿದೇವರ ಶ್ರೀಗಳ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತದೆ. ಜೀವನದಿ ಪುರಸ್ಕಾರದೊಂದಿಗೆ ನೀಡಿರುವ 50 ಸಾವಿರಕ್ಕೆ ನನ್ನ ತಂದೆ-ತಾಯಿ ಹೆಸರಿನಲ್ಲಿ 50 ಸಾವಿರ ಸೇರಿಸಿ ಬೇಬಿಗ್ರಾಮದ ಡಿಎಂಎಸ್ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಒಂದು ಲಕ್ಷ ನೀಡಲಾಗುವುದು ಎಂದು ಘೋಷಿಸಿದರು.
ಮಠದ ಪೀಠಾಧ್ಯಕ್ಷ ಡಾ.ತ್ರಿನೇತ್ರಮಹಂತಸ್ವಾಮೀಜಿ ಮಾತನಾಡಿ, ಮಹಾತ್ಮರು, ಗುರುಗಳನ್ನು ಸ್ಮರಣೆಮಾಡಿಕೊಳ್ಳುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಯಾರು ಸ್ಮರಣೆ ಮಾಡಿಕೊಳ್ಳುವುದಿಲ್ಲವೋ ಅವರಿಗೆ ಜೀವನದಲ್ಲಿ ಮುಕ್ತಿ ಇರೋದಿಲ್ಲ ಎಂದರು.ಸಿ.ಎಸ್.ಪುಟ್ಟರಾಜು ಅವರಿಗೆ ಎಲ್ಲಾ ಪ್ರಶಸ್ತಿಗಳು ಸಿಗಬಹುದು. ಆದರೆ, ಜೀವನದಿ ಪ್ರಶಸ್ತಿ ಶ್ರೀಮರೀದೇವರು ಶಿವಯೋಗಿಗಳ ಪೂಜಾನುಷ್ಠಾನದ, ಅನುಗ್ರಹದ ಆಶೀರ್ವಾದ ಫಲವಾಗಿ ನೀಡುವ ಪ್ರಶಸ್ತಿಯಾಗಿದೆ ಎಂದರು.
ಸಿ.ಎಸ್.ಪುಟ್ಟರಾಜು ಅವರು ಶೈಕ್ಷಣಿಕ, ರಾಜಕೀಯ, ಧಾರ್ಮಿಕವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಸಮಾಜಕಟ್ಟುವ ನಾಯಕತ್ವದ ಗುಣವನ್ನು ಹೊಂದಿದ್ದಾರೆ. ಜತೆಗೆ ಶ್ರೀಗಳೊಂದಿಗೆ ಅಪಾರ ಗುರುಶಿಷ್ಯರ ಬಾಂಧವ್ಯಹೊಂದಿದ್ದರು. ಅವರು ಮಾಡುವ ಕೆಲಸಕ್ಕೆ ಇನ್ನಷ್ಟು ಆಶೀರ್ವಾದ ಸಿಗಲಿ ಎಂಬ ಉದ್ದೇಶದಿಂದ ಜೀವನದಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು.