ಕುಟುಂಬಕ್ಕೊಬ್ಬ ಸದಸ್ಯ, ಊರಿಗೊಬ್ಬ ಕಾರ್ಯಕರ್ತ

KannadaprabhaNewsNetwork |  
Published : Oct 27, 2024, 02:09 AM IST
ಚಿತ್ರದುರ್ಗ ನಾಲ್ಕನೇ ಪುಟದ ಲೀಡ್  | Kannada Prabha

ಸಾರಾಂಶ

ಚಿತ್ರದುರ್ಗ: ಕುಟುಂಬಕ್ಕೊಬ್ಬ ಸದಸ್ಯ, ಊರಿಗೊಬ್ಬ ಕಾರ್ಯಕರ್ತ ಎಂಬ ವಿನೂತನ ಆಶಯ ಇಟ್ಟುಕೊಂಡು ರೈತ ಸಂಘ ರಾಜ್ಯವ್ಯಾಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುತ್ತಿದೆ ಎಂದು ಸಂಘದ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಚಿತ್ರದುರ್ಗ: ಕುಟುಂಬಕ್ಕೊಬ್ಬ ಸದಸ್ಯ, ಊರಿಗೊಬ್ಬ ಕಾರ್ಯಕರ್ತ ಎಂಬ ವಿನೂತನ ಆಶಯ ಇಟ್ಟುಕೊಂಡು ರೈತ ಸಂಘ ರಾಜ್ಯವ್ಯಾಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುತ್ತಿದೆ ಎಂದು ಸಂಘದ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದ ತರಾಸುರಂಗಮಂದಿರದಲ್ಲಿ ಶನಿವಾರ ನಡೆದ ಪೂರ್ಣ ರಾಜ್ಯ ಸಮಿತಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಸಂಘ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೋಮುವಾದಿಗಳಿಗೆ ಬೆಂಬಲಿಸಲ್ಲ. ಕುಲಾಂತರಿ ನಿಷೇಧ ಸೇರಿದಂತೆ ಹನ್ನೆರಡು ಅಂಶಗಳ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತೇವೆ ಎಂದರು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈತ ವಿರೋಧಿ ಕಾನೂನುಗಳು ಜಾರಿಯಾಗುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಹದಿನೆಂಟು ನಿರ್ಣಯಗಳನ್ನು ಕೈಗೊಂಡು ರಾಜ್ಯ ಸಮಿತಿಯನ್ನು ಪುನರ್ ರಚಿಸಿದ್ದೇವೆ. ಯುವ ನಾಯಕತ್ವವನ್ನು ಹೊರ ಹೊಮ್ಮಿಸಲು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳುತ್ತೇವೆ. ಪೂರ್ಣ ರಾಜ್ಯ ಸಮಿತಿ ಸಭೆಯಲ್ಲಿ 28 ಜಿಲ್ಲೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ತಾಲೂಕು ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಪಾಲ್ಗೊಂಡಿದ್ದು, ಸಂಪೂರ್ಣ ಚರ್ಚೆಯಾಗಿದೆ. ಮೂರು ವರ್ಷಕ್ಕೊಮ್ಮೆ ಪುನರ್ ರಚನೆ ಆಗುತ್ತದೆ ಎಂದರು. ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ಕುಲಾಂತರಿ ಬೀಜಗಳನ್ನು ಮಾರಾಟ ಮಾಡಿ ಬಹುರಾಷ್ಟ್ರೀಯ ಕಂಪನಿಗಳಿಗೆ ಲಕ್ಷಾಂತರ ಕೋಟಿ ರು. ಲಾಭ ಮಾಡಿಕೊಡಲು ಹೊರಟಿರುವ ಸರ್ಕಾರಗಳ ವಿರುದ್ಧ ರಾಜ್ಯವ್ಯಾಪಿ ಚಳುವಳಿ ಆರಂಭಿಸಲಾಗುವುದು ಎಂದರು. ರೈತರು ಬಿಕ್ಕಟ್ಟಿನಲ್ಲಿ ಸಿಲುಕಿರುವುದರಿಂದ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕುಲಾಂತರಿ ಬೀಜಗಳನ್ನು ಕೃಷಿ ಕ್ಷೇತ್ರಕ್ಕೆ ತರುವ ಹುನ್ನಾರ ನಡೆಯುತ್ತಿರುವುದರಿಂದ ಫಲವತ್ತಾದ ಭೂಮಿ ನಾಶವಾಗುತ್ತಿರುವುದಲ್ಲದೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಪ್ರಾಣಿ-ಪಕ್ಷಿಗಳಿಗೂ ತೊಂದರೆಯಾಗುತ್ತಿದೆ ಎಂದು ಹೇಳಿದರು. ಫಸಲ್ ಭೀಮ ಯೋಜನೆಯಡಿ ರೈತರ ಜೇಬಿಗೆ ಕತ್ತರಿ ಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಚಳುವಳಿಗೆ ಪ್ರಜಾಸತ್ತಾತ್ಮಕವಾಗಿ ಕಾರ್ಯಕರ್ತರನ್ನು ತಯಾರು ಮಾಡುತ್ತಿದ್ದೇವೆ. ಶಾಸಕರು, ಸಚಿವರು, ಸಂಸದರು ಯಾರು ರೈತರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಹಾಗಾಗಿ ನಾವುಗಳು ವಿರೋಧ ಪಕ್ಷದವರಾಗಿ ಕೆಲಸ ಮಾಡಲು ತೀರ್ಮಾನಿಸಿದ್ದೇವೆ ಎಂದರು. ಮೂರು ವರ್ಷಕ್ಕೊಮ್ಮೆ ರಾಜ್ಯ ಸಮಿತಿಯನ್ನು ಪುನರ್ ರಚಿಸುವ ಪದ್ಧತಿ ರೈತ ಸಂಘದಲ್ಲಿದೆ. ಪ್ರತಿ ಜಿಲ್ಲೆಗಳಲ್ಲಿ ಅಧ್ಯಯನ ಶಿಬಿರ ನಡೆಸಿ ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಯುವ ಜನಾಂಗಕ್ಕೆ ಆಳುವ ಸರ್ಕಾರಗಳು ರೈತರಿಗೆ ಯಾವ ರೀತಿ ಮೋಸ ಮಾಡುತ್ತಿವೆ ಎನ್ನುವುದನ್ನು ತಿಳಿಸುವುದು ನಮ್ಮ ಮುಂದಿರುವ ಸವಾಲು. ಕೃಷಿ ಭೂಮಿ ಮಾರುಕಟ್ಟೆಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದರು. ಪ್ರೊ.ನಂಜುಂಡಸ್ವಾಮಿ, ಟಿ.ನುಲೇನೂರು ಎಂ.ಶಂಕರಪ್ಪ ಅವರ ಸ್ಮರಣೆ, ಲೋಕಸಭೆ ಚುನಾವಣೆ ಖರ್ಚುವೆಚ್ಚಗಳಿಗೆ ಸಂಬಂಧಿಸಿದಂತೆ ರಾಜ್ಯ ಸಮಿತಿಯಲ್ಲಿ ವರದಿ ಮಂಡಿಸಲಾಯಿತು. ರೈತ ಸಂಘದ ಮುಖಂಡರಾದ ಶಿವಾನಂದ ಕುಗ್ವೆ, ಎನ್.ಡಿ.ವಸಂತಕುಮಾರ್, ಎ.ಗೋವಿಂದರಾಜು, ಮಂಜುಳ ಎಸ್.ಅಕ್ಕಿ, ವನಶ್ರಿ, ಗುರುಶಾಂತಪ್ಪ, ಕಲ್ಪನ, ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕೆಸಿ ಹೊರಕೇರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...