ಕೆಲವು ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಇನ್ನೂ ಕೆಲ ಯೋಜನೆಗಳಿಗೆ ರಾಜ್ಯ ಸರ್ಕಾರದ ಸಹಕಾರ ಬೇಕಿದೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷಗಳಲ್ಲಿ ರೈಲ್ವೆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಉಪನಗರ ರೈಲು ಸೇರಿದಂತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 60 ಕ್ಕೂ ಅಧಿಕ ರೈಲ್ವೆ ಯೋಜನೆಗಳ ಕುರಿತು ಸಂಸದ ಡಾ.ಕೆ.ಸುಧಾಕರ್ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಕೆಲವು ಯೋಜನೆಗಳಿಗೆ ರಾಜ್ಯ ಸರ್ಕಾರದ ಸಹಕಾರ ಬೇಕಿದ್ದು, ಈ ಕುರಿತು ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹೊಸ ರೈಲ್ವೆ ಯೋಜನೆ ಹಾಗೂ ಜಾರಿಯಲ್ಲಿರುವ ಕಾಮಗಾರಿಗಳ ಬಗ್ಗೆ ಚರ್ಚಿಸಲು ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಸಂಸದ ಡಾ.ಕೆ.ಸುಧಾಕರ್ ಪಾಲ್ಗೊಂಡು ಮಾತನಾಡಿದರು.60 ಕ್ಕೂ ಅಧಿಕ ಯೋಜನೆಗಳುಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ಅಭಿವೃದ್ಧಿಯ ಎಂಜಿನ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಡೆಗೆ ಸಾಗುತ್ತಿದ್ದು, ಇದು ಹೊಸ ಬೆಂಗಳೂರಾಗಿ ಪರಿವರ್ತನೆಯಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಂಪರ್ಕ, ಚಿಕ್ಕಬಳ್ಳಾಪುರ-ಪುಟ್ಟಪರ್ತಿ, ಚಿಕ್ಕಬಳ್ಳಾಪುರ-ಗೌರಿಬಿದನೂರು, ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ, ದೇವನಹಳ್ಳಿ-ದೊಡ್ಡಬಳ್ಳಾಪುರ-ಯಲಹಂಕ ಸೇರಿದಂತೆ 60 ಕ್ಕೂ ಅಧಿಕ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು. ಕೆಲವು ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಇನ್ನೂ ಕೆಲ ಯೋಜನೆಗಳಿಗೆ ರಾಜ್ಯ ಸರ್ಕಾರದ ಸಹಕಾರ ಬೇಕಿದೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷಗಳಲ್ಲಿ ರೈಲ್ವೆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಹಿಂದಿನ ಸರ್ಕಾರಗಳು ನೀಡುತ್ತಿದ್ದ ಅನುದಾನಕ್ಕಿಂತ ಏಳು ಪಟ್ಟು ಅಧಿಕ ಅನುದಾನವನ್ನು ಎನ್‌ಡಿಎ ಸರ್ಕಾರ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ನೀಡಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೆ ವಲಯಕ್ಕೆ ಯಾರೂ ಹೆಚ್ಚು ಆದ್ಯತೆ ನೀಡಿರಲಿಲ್ಲ. ತಾವು ಈ ಕುರಿತು ಹೆಚ್ಚು ಗಮನಹರಿಸಿರುವುದಾಗಿ ತಿಳಿಸಿದರು.
ನಿಖಿಲ್‌ಗೆ ಗೆಲುವು ಖಚಿತಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲ್ಲುತ್ತಾರೆ. ನಾಮಪತ್ರದ ವೇಳೆ ಜನರಿಂದ ಉತ್ತಮ ಸ್ಪಂದನೆ, ಉತ್ಸಾಹ ಕಂಡುಬಂದಿದೆ. ಈಗ ಜೆಡಿಎಸ್ ಜೊತೆಗೆ ಬಿಜೆಪಿಯ ಪಾರಂಪರಿಕ ಮತಗಳಿವೆ. ನಿಷ್ಠಾವಂತ ಕಾರ್ಯಕರ್ತರು ನೂರಕ್ಕೆ ನೂರರಷ್ಟು ಒಮ್ಮತದಿಂದ ಕೆಲಸ ಮಾಡಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಆ ಭಾಗಕ್ಕೆ ಉತ್ತಮ ಯೋಜನೆಗಳನ್ನು ನೀಡಿದ್ದಾರೆ. ಅಲ್ಲಿ ಅನುಕಂಪದ ಅಲೆ ಕೂಡ ಇದೆ. ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಆ ಭಾಗಕ್ಕೆ ಉತ್ತಮ ಯೋಜನೆಗಳನ್ನು ನೀಡಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರಿಗೆ ನೋವು ಕೊಡಲು ಜನರು ಕೂಡ ತಯಾರಿಲ್ಲ. ಇಲ್ಲಿ ಭಾವನಾತ್ಮಕ ವಿಚಾರವೂ ಅಡಗಿದೆ. ಆದ್ದರಿಂದ ನಿಖಿಲ್ ಕುಮಾರಸ್ವಾಮಿ ಗೆಲ್ಲುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ ಎಂದರು.
ಸಭೆಯಲ್ಲಿ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ್, ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.