ಕನ್ನಡಪ್ರಭ ವಾರ್ತೆ ಮಡಿಕೇರಿ ಬ್ರಹ್ಮಗಿರಿ ತಪ್ಪಲಿನಲ್ಲಿರುವ ತಲಕಾವೇರಿ ಕ್ಷೇತ್ರದಲ್ಲಿ ನಾಡಿನ ಜೀವನದಿ ಕಾವೇರಿ ತೀರ್ಥೋದ್ಭವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕರ್ಕಾಟಕ ಲಗ್ನದಲ್ಲಿ ಜರುಗಿತು. ಬುಧವಾರ ನಸುಕಿನ ಜಾವ 1 ಗಂಟೆ 26 ನಿಮಿಷಕ್ಕೆ ಸರಿಯಾಗಿ ಪುಟ್ಟ ಕುಂಡಿಕೆಯಲ್ಲಿ ಕಾವೇರಿ ತನ್ನ ತೀರ್ಥ ರೂಪವನ್ನು ತೋರಿದಳು. ಜೈ ಜೈ ಮಾತಾ ಕಾವೇರಿ ಮಾತಾ ಎಂಬ ಹರ್ಷೋದ್ಘಾರದೊಂದಿಗೆ ಕಾವೇರಿ ತೀರ್ಥೋದ್ಭವವನ್ನು ತಲಕಾವೇರಿ ಕ್ಷೇತ್ರದಲ್ಲಿ ಸೇರಿದ್ದ ಭಕ್ತರು ವೀಕ್ಷಿಸಿ ಪುನೀತರಾದರು. ತೀರ್ಥೋದ್ಭವ ನೆರವೇರುತ್ತಿದ್ದಂತೆಯೇ ಅರ್ಚಕರು ಪವಿತ್ರ ತೀರ್ಥವನ್ನು ಭಕ್ತರ ಮೇಲೆ ಪ್ರೋಕ್ಷಣೆ ಮಾಡಿದರು. ತೀರ್ಥೋದ್ಭವಕ್ಕೆ ಅರ್ಧ ಗಂಟೆ ಮುಂಚೆಯೇ ಭಕ್ತರು ಬ್ಯಾರಿಕೇಡ್ ತೆಗೆದು ಕಾವೇರಿಯ ಪವಿತ್ರ ಕಲ್ಯಾಣಿಗೆ ಧುಮುಕಿದರು. ತೀರ್ಥೋದ್ಭವ ಸಂದರ್ಭ ಪವಿತ್ರ ತೀರ್ಥವನ್ನು ಬಿಂದಿಗೆಯಲ್ಲಿ ತುಂಬಿಸಿಕೊಂಡರು. ಕಾವೇರಿ ತೀರ್ಥೋದ್ಭವಕ್ಕೆ ಕೊಡಗಿನ ವಿವಿಧೆಡೆಗಳಿಂದ ನಡುರಾತ್ರಿಯ ಕೊರೆಯುವ ಚಳಿಯಲ್ಲಿಯೂ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಜಿಲ್ಲಾಡಳಿತದ ವತಿಯಿಂದ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಭಾಗಮಂಡಲದಿಂದ ತಲಕಾವೇರಿಗೆ ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ತಲಕಾವೇರಿ ಕ್ಷೇತ್ರದಲ್ಲಿ ಕೊಡಗು ಏಕೀಕರಣ ರಂಗದಿಂದ ಸಹಸ್ರಾರು ಭಕ್ತರಿಗೆ ಇನ್ನು ಒಂದು ತಿಂಗಳು ಅನ್ನಸಂತರ್ಪಣೆ ನಡೆಯಲಿದೆ. ಬುಧವಾರ ಜಿಲ್ಲೆಯ ವಿವಿಧೆಡೆಗಳಿಂದ ಮಾತ್ರವಲ್ಲದೇ ರಾಜ್ಯದ ಹಲವೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಾವೇರಿ ಕ್ಷೇತ್ರಕ್ಕೆ ಬಂದು ಪುಣ್ಯ ತೀರ್ಥವನ್ನು ಸ್ವೀಕರಿಸಿದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂಥರ್ ಗೌಡ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ವೆಂಕಟರಾಜ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು. ಸಿನಿಮಾ ರಂಗದ ನವ ಜೋಡಿ ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ ಕೂಡ ಹಾಜರಿದ್ದರು. ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಅವರು ಭಾಗಮಂಡಲದಿಂದ ತಲಕಾವೇರಿ ವರೆಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮಂಗಳವಾರ ರಾತ್ರಿ ಕಾಲು ನಡಿಗೆ ಮೂಲಕ ಪಾದಯಾತ್ರೆ ನಡೆಸಿದರು. ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಕೊಡವರು ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಅವರು ಭಾಗಮಂಡಲದಿಂದ ತಲಕಾವೇರಿ ವರೆಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮಂಗಳವಾರ ರಾತ್ರಿ ಕಾಲು ನಡಿಗೆ ಮೂಲಕ ಪಾದಯಾತ್ರೆ ನಡೆಸಿದರು. ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಕೊಡವರು ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.