ರೈತರ ಜಮೀನುಗಳಿಗೆ ಸಮರ್ಪಕ ನೀರು: ಶರಣಬಸಪ್ಪಗೌಡ ದರ್ಶನಾಪೂರ್

KannadaprabhaNewsNetwork |  
Published : Oct 19, 2023, 12:46 AM IST
ಸುರಪುರ ತಾಲೂಕಿನ ಕೆಂಭಾವಿ ಸಮೀಪ ಮಲ್ಲಾ (ಬಿ) ಗ್ರಾಮದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ಅವರು ಜನತೆಯ ಅಹವಾಲು ಸ್ವೀಕರಿಸಿದರು. | Kannada Prabha

ಸಾರಾಂಶ

ರೈತರ ಜಮೀನುಗಳಿಗೆ ಸಮರ್ಪಕ ನೀರು: ಶರಣಬಸಪ್ಪಗೌಡ ದರ್ಶನಾಪೂರ್ಮಲ್ಲಾ (ಬಿ)ಯಲ್ಲಿ ಜನತೆಯ ಕುಂದುಕೊರತೆ ಅಹಲವಾಲು ಸ್ವೀಕರಿಸಿ ಜಿಲ್ಲಾ ಉಸ್ತುವಾರಿ ಸಚಿವರ ಭರವಸೆ

ಮಲ್ಲಾ (ಬಿ)ಯಲ್ಲಿ ಜನತೆಯ ಕುಂದುಕೊರತೆ ಅಹಲವಾಲು ಸ್ವೀಕರಿಸಿ ಜಿಲ್ಲಾ ಉಸ್ತುವಾರಿ ಸಚಿವರ ಭರವಸೆ ಕನ್ನಡಪ್ರಭ ವಾರ್ತೆ ಸುರಪುರ ಪ್ರಸಕ್ತ ಸಾಲಿನಲ್ಲಿ ಬರಗಾಲದ ಛಾಯೆ ಆವರಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ರೈತರ ಜಮೀನುಗಳಿಗೆ ಸಮರ್ಪಕವಾಗಿ ಹರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ತಿಳಿಸಿದರು. ತಾಲೂಕಿನ ಕೆಂಭಾವಿ ಸಮೀಪದ ಮಲ್ಲಾ (ಬಿ) ಗ್ರಾಮದಲ್ಲಿ ಬುಧವಾರ ಜನತೆಯ ಕುಂದುಕೊರತೆ ಅಹಲವಾಲು ಸ್ವೀಕರಿಸಿ ಮಾತನಾಡಿದ ಅವರು, ರೈತರಿಗೆ ನೀರೊದಗಿಸುವ ನಾರಾಯಣಪೂರ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಸಂಪೂರ್ಣ ಕುಸಿದಿದ್ದು, ಇದರಿಂದ ಕೃಷ್ಣಾ ಕಾಲುವೆಯಲ್ಲಿ ಹರಿಯುವ ನೀರಿನ ಪ್ರಮಾಣ ಗಣನೀಯ ಇಳಿಮುಖ ಕಂಡಿದೆ. ವಾರಾಬಂದಿ ಮೂಲಕ ರೈತರಿಗೆ ನೀರು ಒದಗಿಸಲು ಇಲಾಖೆ ನಿರ್ಧರಿಸಿದ್ದರೂ ನೀರಿನ ಕೊರತೆ ಹಿನ್ನೆಲೆಯಲ್ಲಿ ಕಾಲುವೆಗೆ ಹರಿಯುವ ನೀರಿನಲ್ಲಿ ವ್ಯತ್ಯಾಸ ಕಂಡು ಬರಬಹುದು. ಇದ್ದ ಅಲ್ಪ ನೀರಿನಲ್ಲಿಯೇ ರೈತರು ತಮ್ಮ ಬಳೆ ಬೆಳೆದು ಈ ಬಾರಿ ಸರ್ಕಾರದ ಜೊತೆ ಸಹಾಯ ಹಸ್ತ ಚಾಚಬೇಕು ಎಂದು ಮನವಿ ಮಾಡಿದರು. ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದ್ದು, ನೀರಿನ ಕೊರತೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮತ್ತು ಇನ್ನಿತರೆ ಮೂಲಗಳಿಂದ ಜನತೆಗೆ ನೀರು ಒದಗಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ವಿದ್ಯುತ್ ಸಮಸ್ಯೆ: ರೈತರ ಜಮೀನುಗಳಿಗೆ ನೀರು ಹರಿಸಲು ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದು, ಇದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ ಎಂದು ಹಲವು ರೈತರು ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದರ್ಶನಾಪುರ, ಮಳೆಯ ಅಭಾವದಿಂದ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಯೂ ಹೆಚ್ಚಾಗಿದೆ. ಬೇಡಿಕೆ ಪ್ರಮಾಣ ಜಾಸ್ತಿಯಾಗಿದ್ದು, ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ರೈತರಿಗೆ ಸಮರ್ಪಕ ವಿದ್ಯುತ್ ಒದಗಸಿಲು ಜೆಸ್ಕಾಂ ಇಲಾಖೆ ಸಮಯ ಬದಲಾವಣೆ ಮಾಡಿ ಕೆಲವು ಮಾರ್ಪಾಟುಗಳನ್ನು ಮಾಡಿದೆ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ರೇಣುಕಾ ದೊರೆ, ಉಪಾಧ್ಯಕ್ಷ ಪ್ರಶಾಂತರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಚಿಂಚೋಳಿ, ಮುಖಂಡರಾದ ಶಂಕ್ರಣ್ಣ ವಣಕ್ಯಾಳ, ಎಮ್. ಆರ್. ಪಾಟೀಲ್, ಅಮೀನರೆಡ್ಡಿ ದೇಸಾಯಿ, ರಾಜು ಧಣಿ, ಶರಣಬಸ್ಸು ಪಟ್ಟಣಶೆಟ್ಟಿ, ಮಹೆಬೂಬ ಸುಬಾನಿ, ಗೌಡಪ್ಪಗೌಡ ವಣಕ್ಯಾಳ ಸೇರಿದಂತೆ ಹಲವರಿದ್ದರು. - - - - ಖಾಲಿ ಕೊಡ ಪ್ರದರ್ಶನ: ಅಹವಾಲು ಸ್ವೀಕಾರ ನಂತರ ಗ್ರಾಮದಿಂದ ನಿರ್ಗಮಿಸುತ್ತಿದ್ದ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್‌ರನ್ನು ಮುತ್ತಿಗೆ ಹಾಕಿದ ಮಹಿಳೆಯರು ಹಾಗೂ ಗ್ರಾಮಸ್ಥರು ಕಳೆದ ಹಲವು ದಿನಗಳಿಂದ ನಮಗೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಕೂಡಲೇ ಇದನ್ನು ಬಗೆಹರಿಸಿ ಮುಂದೆ ಸಾಗುವಂತೆ ಪಟ್ಟು ಹಿಡಿದು ಸಚಿವರ ಕಾರನ್ನು ಅಡ್ಡಗಟ್ಟಿದರು. ಮಹಿಳೆಯರ ಖಾಲಿ ಕೊಡಗಳ ಪ್ರದರ್ಶನ ಕಂಡು ತಮ್ಮ ಕಾರಿನಿಂದ ಕೆಳಗಿಳಿದು ಬಂದ ಸಚಿವರು ಇನ್ನೆರಡು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಿ ಎಲ್ಲರಿಗೂ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಮಹಿಳೆಯರು ಸಚಿವರಿಗೆ ದಾರಿ ಮಾಡಕೊಟ್ಟರು. - - - - 18ವೈಡಿಆರ್14 : ಸುರಪುರ ತಾಲೂಕಿನ ಕೆಂಭಾವಿ ಸಮೀಪ ಮಲ್ಲಾ (ಬಿ) ಗ್ರಾಮದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ಅವರು ಜನತೆಯ ಅಹವಾಲು ಸ್ವೀಕರಿಸಿದರು. - - - - 18ವೈಡಿಆರ್15: ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಮಲ್ಲಾ (ಬಿ) ಗ್ರಾಮಲಲಿ ಮಹಿಳೆಯರು ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ಅವರಿಗೆ ಖಾಲಿ ಕೊಡಗಳ ಮೂಲಕ ಘೇರಾವ್‌ ಹಾಕಿ ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿದರು. - - - -

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ