ಜೆಡಿಎಸ್‌ ಶಾಸಕರ ಅವಧಿಯಲ್ಲೇ ಕಸಕ್ಕೆ ಭೂಮಿ ಮಂಜೂರು

KannadaprabhaNewsNetwork | Published : Oct 19, 2023 12:46 AM

ಸಾರಾಂಶ

ರಾಮನಗರ: ಜೆಡಿಎಸ್‌ ಶಾಸಕರು ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಹರೀಸಂದ್ರ ಗ್ರಾಮದಲ್ಲಿ ಜಮೀನು ಮಂಜೂರಾಗಿದೆ. ಇದಕ್ಕೆ ಕಾಂಗ್ರೆಸ್‌ ಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡಲು ಜೆಡಿಎಸ್‌ ಮುಖಂಡರು ಪ್ರಯತ್ನಿಸುತ್ತಿದ್ದಾರೆ ಎಂದು ಹರೀಸಂದ್ರ ಗ್ರಾಪಂ ಉಪಾಧ್ಯಕ್ಷ ಕೆ.ಎನ್‌. ವೀರಭದ್ರ ಸ್ವಾಮಿ ಕಿಡಿಕಾರಿದರು.
ರಾಮನಗರ: ಜೆಡಿಎಸ್‌ ಶಾಸಕರು ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಹರೀಸಂದ್ರ ಗ್ರಾಮದಲ್ಲಿ ಜಮೀನು ಮಂಜೂರಾಗಿದೆ. ಇದಕ್ಕೆ ಕಾಂಗ್ರೆಸ್‌ ಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡಲು ಜೆಡಿಎಸ್‌ ಮುಖಂಡರು ಪ್ರಯತ್ನಿಸುತ್ತಿದ್ದಾರೆ ಎಂದು ಹರೀಸಂದ್ರ ಗ್ರಾಪಂ ಉಪಾಧ್ಯಕ್ಷ ಕೆ.ಎನ್‌. ವೀರಭದ್ರ ಸ್ವಾಮಿ ಕಿಡಿಕಾರಿದರು. ಸುದ್ದಿಗೋಷ್ಠಿಯಲ್ಲಿ ಕಸ ವಿಲೇವಾರಿ ಘಟಕಕ್ಕೆ ಭೂಮಿ ಮಂಜೂರಾಗಿರುವ ದಾಖಲೆ ಪ್ರದರ್ಶಿಸಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ರವರ ಜನಪ್ರಿಯತೆಯನ್ನು ಸಹಿಸದೆ ಹತಾಶರಾಗಿರುವ ಜೆಡಿಎಸ್‌ ಮುಖಂಡರು ತಮ್ಮ ಶಾಸಕರು ಮಾಡಿರುವ ತಪ್ಪಿಗೆ ಕಾಂಗ್ರೆಸ್‌ ಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು. ಜೆಡಿಎಸ್‌ ಮುಖಂಡರು ಹರೀಸಂದ್ರ ಗ್ರಾಮದಲ್ಲಿ ಭೂಮಿ ಗುರುತಿಸುವಾಗ ಯಾರು ಶಾಸಕರಾಗಿದ್ದರು, ಯಾವ ಪಕ್ಷ ಅಧಿಕಾರದಲ್ಲಿತ್ತು. ಯಾವಾಗ ಪ್ರಸ್ತಾವನೆ ಸಲ್ಲಿಕೆಯಾಗಿ ಮಂಜೂರಾತಿ ದೊರಕಿತು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿಲ್ಲ. ಅಷ್ಟಕ್ಕೂ ಜಮೀನನ್ನು ಗ್ರಾಮ ಪಂಚಾಯಿತಿ ಮಂಜೂರು ಮಾಡಿಲ್ಲ. ಹಾಗಾಗಿ ಪಂಚಾಯಿತಿ ಬದಲಿಗೆ ಕಂದಾಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲವಾಗಿದೆ ಎಂದು ವ್ಯಂಗ್ಯವಾಡಿದರು. ರಾಮನಗರ ಮತ್ತು ಬಿಡದಿ ಭಾಗದ 40 ಟನ್‌ ಕಸ ವಿಲೇವಾರಿ ಮಾಡುವ ಉದ್ದೇಶದಿಂದ 2020ರಲ್ಲಿಯೇ ಹರೀಸಂದ್ರ ಗ್ರಾಮದ ಸರ್ವೆ ನಂಬರ್‌ 166ರಲ್ಲಿ 23 ಎಕರೆ ಜಮೀನನ್ನು ಘನತ್ಯಾಜ್ಯ ವಿಲೇವಾರಿ ನೆಲಭರ್ತಿ ಉದ್ದೇಶಕ್ಕಾಗಿ ಕಾಯ್ದಿರಿಸುವಂತೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದರಲ್ಲಿ ಸಂಸದ ಡಿ.ಕೆ.ಸುರೇಶ್‌ ಹಾಗೂ ಶಾಸಕ ಇಕ್ಬಾಲ್‌ ಹುಸೇನ್‌ ರವರ ಪಾತ್ರವಿಲ್ಲ. ಆಗ ಶಾಸಕರಾಗಿದ್ದ ಅನಿತಾ ಅವರನ್ನು ಪ್ರಶ್ನಿಸದ ಜೆಡಿಎಸ್‌ ಮುಖಂಡರು ಕಾಂಗ್ರೆಸ್‌ ಪ್ರತಿನಿಧಿಗಳನ್ನು ಜನರ ದೃಷ್ಟಿಯಲ್ಲಿ ತಪ್ಪಿತಸ್ಥರನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಜನರು ನೀಡಿದ ಮತ ಭಿಕ್ಷೆಯಿಂದಲೇ ಡಿ.ಕೆ.ಶಿವಕುಮಾರ್ ರವರು ಉಪಮುಖ್ಯಮಂತ್ರಿ ಆಗಿದ್ದಾರೆ. ಇಕ್ಬಾಲ್ ಹುಸೇನ್ ರವರು ಪ್ರತಿನಿತ್ಯ ಜನರ ನೋವುಗಳಿಗೆ ಸ್ಪಂದಿಸಿ ಮಾದರಿ ಶಾಸಕ ಎನಿಸಿಕೊಂಡಿದ್ದಾರೆ. ಇದನ್ನು ಸಹಿಸದೆ ಜೆಡಿಎಸ್ ಮುಖಂಡರು ಹೊಟ್ಟೆ ಕಿಚ್ಚು ಪಡುತ್ತಿದ್ದು, ಅದಕ್ಕೆ ಔಷಧಿ ಇಲ್ಲವಾಗಿದೆ. ನೀವು 5 ವರ್ಷ ಮನೆಯಲ್ಲಿಯೇ ಇರಲೆಂದು ಮತದಾರರು ನಿಮ್ಮನ್ನು ತಿರಸ್ಕರಿಸಿದ್ದಾರೆ. ನಾಲಿಗೆ ಹರಿಬಿಟ್ಟರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ನರಸಿಂಹ ಮೂರ್ತಿ ಹಿನ್ನಲೆ ಏನು? ಯುವ ಕಾಂಗ್ರೆಸ್ ಘಟಕ ಜಿಲ್ಲಾಧ್ಯಕ್ಷ ಗುರುಪ್ರಸಾದ್ ಮಾತನಾಡಿ, ಹರೀಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಿಬಿಎಂಪಿ ಕಸ ವಿಲೇವಾರಿ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಜೆಡಿಎಸ್‌ನ ವಿ.ನರಸಿಂಹಮೂರ್ತಿ, ರೈಡ್ ನಾಗರಾಜ್ ಮತ್ತಿತರು ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಜೆಡಿಎಸ್ ಕಾರ್ಯಕರ್ತರೇ ನರಸಿಂಹಮೂರ್ತಿಯನ್ನು ಜಿಲ್ಲೆಯಿಂದ ಓಡಿಸಿದ್ದರು. ಆತನ ಹಿನ್ನೆಲೆ ಏನೆಂದು ಜನರಿಗೂ ಗೊತ್ತಿದೆ. ಇಂತಹ ರೋಲ್‌ ಕಾಲ್‌ ಮತ್ತು ಪೇಮೆಂಟ್‌ ಗಿರಾಕಿಯನ್ನು ಕರೆತಂದು ಜೆಡಿಎಸ್‌ ಮುಖಂಡರು ತಮ್ಮ ಗೌರವ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇನ್ನಾದರು ಜೆಡಿಎಸ್‌ ನವರು ಎಚ್ಚೆತ್ತುಕೊಂಡು ತಮ್ಮಲ್ಲಿರುವ ನಾಯಕರಿಗೆ ಪ್ರಾತಿನಿಧ್ಯ ಕೊಟ್ಟು ಗೌರವ ಕಾಪಾಡಿಕೊಳ್ಳಬೇಕು ಎಂದರು. ನರಸಿಂಹಮೂರ್ತಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಶಾಸಕ ಇಕ್ಬಾಲ್ ಹುಸೇನ್‌ರನ್ನು ಏಕವಚನದಲ್ಲಿ ಸಂಬೋಧಿಸಿದ್ದಾರೆ. ಅಲ್ಲದೆ, ಬಿಬಿಎಂಪಿ ಲಾರಿಗಳಿಗೆ ಬೆಂಕಿ ಹಾಕುವುದಾಗಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಈ ವಿಚಾರದಲ್ಲಿ ಪೊಲೀಸರು ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಕಾಂಗ್ರೆಸ್ ನಾಯಕರನ್ನು ಏಕ ವಚನದಲ್ಲಿ ಸಂಬೋಧಿಸುವುದನ್ನು ಬಿಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗುರುಪ್ರಸಾದ್ ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಮುಖಂಡ ನರಸಿಂಹಯ್ಯ ಮಾತನಾಡಿ, ತಮ್ಮ ಪಕ್ಷದ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ಏಕವಚನದಲ್ಲಿ ಸಂಬೋಧಿಸುವುದನ್ನು ಜೆಡಿಎಸ್‌ನ ನರಸಿಂಹಮೂರ್ತಿ ಬಿಡಬೇಕು. ಇಲ್ಲದಿದ್ದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ವಿಜಯ ಕುಮಾರಿ, ಮಾಜಿ ಅಧ್ಯಕ್ಷ ಲೋಹಿತ್ , ಸುಗ್ಗನಹಳ್ಳಿ ಗ್ರಾಪಂ ಅಧ್ಯಕ್ಷೆ ಅರ್ಪಿತಾ, ಮುಖಂಡರಾದ ಲೋಕೇಶ್, ರವಿ, ಬೈರೇಗೌಡ ಇದ್ದರು. ಕೋಟ್ ........... ಹರೀಸಂದ್ರ ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ನಮ್ಮ ವಿರೋಧವೂ ಇದೆ. ಗ್ರಾಮದಲ್ಲಿ 23 ಎಕರೆ ಭೂಮಿ ಗುರುತಿಸಿರುವುದನ್ನು ಶಾಸಕ ಇಕ್ಬಾಲ್ ಹುಸೇನ್ ರವರ ಗಮನಕ್ಕೆ ತಂದಿದ್ದೇವೆ. ಅವರು ಕೇವಲ 4 ಎಕರೆ ಭೂಮಿಯಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಯೋಜನೆ ರೂಪಿಸುತ್ತಿದ್ದಾರೆ. ಹಾಗಾಗಿ ಜನವಸತಿ ಪ್ರದೇಶದಿಂದ ದೂರ ಘಟಕ ಸ್ಥಾಪನೆ ಮಾಡಲು ಒತ್ತಾಯಿಸುತ್ತೇವೆ. ಡಿಸಿಎಂ, ಸಂಸದರು ಹಾಗೂ ಶಾಸಕರು ಸಾಧಕ ಬಾಧಕ ಚರ್ಚಿಸಿ ಸೂಕ್ತ ತೀರ್ಮಾನ ಮಾಡುತ್ತಾರೆಂಬ ವಿಶ್ವಾಸವಿದೆ. -ಕೆ.ಎನ್.ವೀರಭದ್ರಸ್ವಾಮಿ, ಉಪಾಧ್ಯಕ್ಷರು, ಹರೀಸಂದ್ರ ಗ್ರಾಪಂ 18ಕೆಆರ್ ಎಂಎನ್ 2.ಜೆಪಿಜಿ ಹರೀಸಂದ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಎನ್‌. ವೀರಭದ್ರ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ------------------------------

Share this article