ಬೊಜ್ಜಿಳಿಸಲು ರಾಜ್ಯ ಸಶಸ್ತ್ರ ಮೀಸಲು ಪಡೆ ಪೊಲೀಸ್ರಿಗೆ ಒಂದು ತಿಂಗಳು ವಿಶೇಷ ತರಬೇತಿ

KannadaprabhaNewsNetwork |  
Published : Dec 24, 2024, 12:50 AM ISTUpdated : Dec 24, 2024, 11:15 AM IST
Koramangala KSRP ground

ಸಾರಾಂಶ

ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ)ಗೆ ನವೋಲ್ಲಾಸ ತುಂಬಲು ಮುಂದಾಗಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಈಗ ದೇಹ ಭಾರ ಹೊತ್ತಿರುವ ಸಿಬ್ಬಂದಿಯ ಬೊಜ್ಜು ಕರಗಿಸಲು ತರಬೇತಿ ಶಾಲೆಗಳಲ್ಲಿ ಒಂದು ತಿಂಗಳ ವಿಶೇಷ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದಾರೆ.

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು : ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ)ಗೆ ನವೋಲ್ಲಾಸ ತುಂಬಲು ಮುಂದಾಗಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಈಗ ದೇಹ ಭಾರ ಹೊತ್ತಿರುವ ಸಿಬ್ಬಂದಿಯ ಬೊಜ್ಜು ಕರಗಿಸಲು ತರಬೇತಿ ಶಾಲೆಗಳಲ್ಲಿ ಒಂದು ತಿಂಗಳ ವಿಶೇಷ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದಾರೆ.

ಈ ತರಬೇತಿಗೆ ಡಯಟಿಶಿಯನ್‌ (ಆಹಾರ ತಜ್ಞರು) ರಿಂದ ಹೊಸ ಪಠ್ಯ ಹಾಗೂ ಆಹಾರ ಪದ್ಧತಿ ಜಾರಿಗೊಳಿಸಿದ್ದು, ಮೊದಲ ಹಂತದಲ್ಲಿ ಕೆಎಸ್‌ಆರ್‌ಪಿ ಪಡೆಯ 140 ಪೊಲೀಸರು 8 ರಿಂದ 12 ಕೆಜಿ ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದಾರೆ.

ರಾಜ್ಯದಲ್ಲಿ ಪ್ರತಿಭಟನೆ, ಗಲಭೆ ಹಾಗೂ ಗೋಲಿಬಾರ್‌ ಹೀಗೆ ಕಾನೂನು ಮತ್ತು ಸುವ್ಯವಸ್ಥೆ ಭಂಗದಂತಹ ಪ್ರಕ್ಷುಬದ್ಧ ಪರಿಸ್ಥಿತಿ ನಿರ್ವಹಣೆ, ಚುನಾವಣೆ ಹಾಗೂ ಗಣ್ಯಾತಿಗಣ್ಯರು ಭಾಗವಹಿಸುವ ಸಮಾರಂಭಗಳ ಭದ್ರತೆ ಕಾರ್ಯಗಳಲ್ಲಿ ಕೆಎಸ್‌ಆರ್‌ಪಿ ಪಡೆಗಳು ಮಹತ್ವದ ಹೊಣೆಗಾರಿಕೆ ನಿರ್ವಹಿಸುತ್ತವೆ. ಬಂದೋಬಸ್ತ್ ಕೆಲಸಗಳಿಗೆ ನಿಯೋಜನೆಗೊಳ್ಳುವ ಕೆಎಸ್‌ಆರ್‌ಪಿ ಪಡೆ ಸಿಬ್ಬಂದಿ ವಾರಗಟ್ಟಲೆ ವಾಹನದಲ್ಲೇ ವಾಸ್ತವ್ಯ ಹೂಡುತ್ತಾರೆ. ಇದರಿಂದ ದೇಹ ದಂಡಿಸುವ ಕಾರ್ಯಗಳಿಲ್ಲದೆ ಕೆಎಸ್‌ಆರ್‌ಪಿ ಸಿಬ್ಬಂದಿ ದೇಹಾರೋಗ್ಯದ ಮೇಲಾದ ದುಷ್ಪರಿಣಾಮದಿಂದ ಅವರು ಬೊಜ್ಜುಧಾರಿಗಳಾಗಲು ಕಾರಣವಾಗಿದೆ.

ಆರೋಗ್ಯ ದೃಷ್ಟಿ ಮಾತ್ರವಲ್ಲದೆ ಪಡೆಯಲ್ಲಿ ಉತ್ಸಾಹ ತುಂಬಲು ತಮ್ಮ ಸಿಬ್ಬಂದಿಯನ್ನು ಯಂಗ್‌ ಆಂಡ್ ಎನರ್ಜಿಟಿಕ್ ಆಗಿ ಕಾಣುವಂತೆ ಮಾಡಲು ಯೋಜಿಸಿದ ಎಡಿಜಿಪಿ ಉಮೇಶ್‌ ಕುಮಾರ್ ಅವರು, ಇದಕ್ಕಾಗಿ ಆಹಾರ ತಜ್ಞರ ನೆರವು ಪಡೆದು ವಿಶೇಷ ತರಬೇತಿ ಕಾರ್ಯಕ್ರಮ ಜಾರಿಗೊಳಿಸಿದರು ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಪ್ರತಿ ಬ್ಯಾಚ್‌ಗೆ 140 ಸಿಬ್ಬಂದಿ ಆಯ್ಕೆ :  ಈ ವಿಶೇಷ ತರಬೇತಿಗೆ ಕೆಎಸ್‌ಆರ್‌ಪಿಯ 14 ಬೆಟಾಲಿಯನ್‌ಗಳಿಗೆ ಕಡ್ಡಾಯಗೊಳಿಸಲಾಗಿದೆ. ಪ್ರತಿ ಬ್ಯಾಚ್‌ಗೆ 1 ಬೆಟಾಲಿಯನ್‌ನಿಂದ ತಲಾ 10 ಮಂದಿಯಂತೆ 140 ಸಿಬ್ಬಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ಮೊದಲ ಬ್ಯಾಚ್‌ ತರಬೇತಿ ಮುಗಿದಿದ್ದು, ಪೊಲೀಸರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ತಿಂಗಳಲ್ಲಿ ಕೆಲ ಸಿಬ್ಬಂದಿ 5 ರಿಂದ 12 ಕೆಜಿ ವರೆಗೆ ತೂಕ ಇಳಿಸಿಕೊಂಡಿದ್ದಾರೆ ಎಂದು ಎಡಿಜಿಪಿ ಉಮೇಶ್ ಕುಮಾರ್ ತಿಳಿಸಿದರು.

ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ವಯಸ್ಸು ಹಾಗೂ ಎತ್ತರಕ್ಕೆ ಅನುಗುಣವಾಗಿ ದೇಹ ತೂಕವಿರಬೇಕು. ಈ ನಿಯಮ ಮೀರಿದ ಸಿಬ್ಬಂದಿಯನ್ನು ವಿಶೇಷ ತರಬೇತಿಗೆ ನಿಯೋಜಿಸಲಾಗುತ್ತದೆ. ಬೆಳಗಾವಿ ಹಾಗೂ ಮುನಿರಾಬಾದ್‌ನಲ್ಲಿ ಕೆಎಸ್‌ಆರ್‌ ತರಬೇತಿ ಶಾಲೆಗಳಲ್ಲೇ ಈ ತೂಕ ಇಳಿಸುವ ತರಬೇತಿ ನೀಡಲಾಗುತ್ತದೆ. ಸಿಬ್ಬಂದಿಗೆ ಊಟ-ವಸತಿ ಸಹ ಇರುತ್ತದೆ. ಈ ಅವಧಿಯಲ್ಲಿ ಪೌಷ್ಟಿಕಾಂಶವುಳ್ಳ ಆಹಾರ ನೀಡಲಾಗುತ್ತಿದೆ ಎಂದು ಎಡಿಜಿಪಿ ಹೇಳಿದರು.---ಕೋಟ್‌-----ಕೆಎಸ್‌ಆರ್‌ಪಿ ಸಿಬ್ಬಂದಿ ಆರೋಗ್ಯದ ಕುರಿತು ಕಾಳಜಿವಹಿಸಲಾಗಿದ್ದು, ಶಿಕ್ಷೆ ನೀಡಿ ಯಾರಿಗೂ ಬೊಜ್ಜು ಕರಗಿಸುವ ಟಾಸ್ಕ್‌ ಕೊಟ್ಟಿಲ್ಲ. ಒಂದು ತಿಂಗಳ ತರಬೇತಿ ಮುಗಿದ ಬಳಿಕ ಮತ್ತೆ ಬೊಜ್ಜು ಬಂದರೆ ಆಗಲೂ ವಿಶೇಷ ತರಬೇತಿಗೆ ಸಿಬ್ಬಂದಿ ಬರಬಹುದು. ಆರೋಗ್ಯ ಚೆನ್ನಾಗಿದ್ದರೆ ಕೆಲಸಗಳು ಸುಗಮವಾಗಿ ನಡೆಯುತ್ತವೆ. ಪಡೆಯಲ್ಲೂ ಉತ್ಸಾಹ ಇರುತ್ತದೆ. ----ಉಮೇಶ್ ಕುಮಾರ್, ಎಡಿಜಿಪಿ, ಕೆಎಸ್‌ಆರ್‌ಪಿ

ಜನವರಿಗೆ ಎರಡನೇ ಬ್ಯಾಚ್‌

ಬೊಜ್ಜು ಕರಗಿಸುವ ವಿಶೇಷ ತರಬೇತಿಗೆ ಮೊದಲ ಬ್ಯಾಚ್‌ನಲ್ಲಿದ್ದ 140 ಸಿಬ್ಬಂದಿ ತೂಕ ಇಳಿಸಿಕೊಂಡಿದ್ದು, ಎರಡನೇ ಬ್ಯಾಚ್ ಜನವರಿಯಲ್ಲಿ ತರಬೇತಿ ಶುರುವಾಗಲಿದೆ. ಬೆಳಗಾವಿ ಅಧಿವೇಶನದ ಭದ್ರತೆಗೆ ಕೆಎಸ್‌ಆರ್‌ಪಿ ತುಕಡಿಗಳು ನಿಯೋಜಿತರಾಗಿದ್ದರಿಂದ ಬೊಜ್ಜು ಇಳಿಸುವ ಕಾರ್ಯಕ್ರಮ ಮುಂದೂಡಿಕೆಯಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಎಸ್‌ಆರ್‌ಪಿ ಸುದ್ದಿಗಳಿಗೆ ಮಾಸಿಕ ಪತ್ರಿಕೆ

ತಮ್ಮ ಪಡೆಯ ಸುದ್ದಿ ಸಮಾಚಾರಗಳ ಪ್ರಚಾರಕ್ಕೆ ಮಾಸಿಕ ಪತ್ರಿಕೆಯನ್ನು ಕೆಎಸ್‌ಆರ್‌ಪಿ ಆರಂಭಿಸಿದೆ. ಮುಂಬಡ್ತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಪ್ರತಿಯೊಂದು ಸುದ್ದಿಗಳನ್ನು ‘ವಾರ್ತಾ ಪತ್ರಿಕೆ’ ಹೆಸರಿನಲ್ಲಿ ಪ್ರಕಟಿಸುತ್ತಿದೆ. ಎಡಿಜಿಪಿ ಉಮೇಶ್ ಕುಮಾರ್‌, ಐಜಿಪಿ ಸಂದೀಪ್ ಪಾಟೀಲ್‌ ಹಾಗೂ ಡಿಐಜಿ ಬಸವರಾಜ ಜಿಳ್ಳೆ ಸೇರಿ ಹಿರಿಯ ಅಧಿಕಾರಿಗಳು ಸಂಪಾದಕೀಯ ಮಂಡಳಿಯಲ್ಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''