ಅಮಿತ್ ಶಾ ಹೇಳಿಕೆ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Dec 24, 2024 12:50 AM

ಸಾರಾಂಶ

ಕಮಲನಗರ ಪಟ್ಟಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ ಶಾ ವಿರುದ್ಧ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಕಮಲನಗರ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಕಮಲನಗರ ಪಟ್ಟಣದ ಮಿನಿ ಬಸ್ ನಿಲ್ದಾಣದಿಂದ ಸೋಮವಾರ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.

ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಉತ್ತಮ್ ಸುತಾರ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದು ತೀವ್ರವಾಗಿ ಖಂಡಿಸಿ, ಅಮಿತ್ ಶಾ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ರಾಷ್ಟ್ರಪತಿಯವರು ಈ ಕೂಡಲೇ ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸಿ, ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಮುಖಂಡ ಅಮೂಲ ಸೂರ್ಯವಂಶಿ ಮಾತನಾಡಿ, ದೇಶದ ಕೋಟ್ಯಂತರ ದಲಿತರು ಮತ್ತು ವಂಚಿತ ವರ್ಗಗಳಿಗೆ ಡಾ.ಅಂಬೇಡ್ಕರ್‌ ದೇವರಾಗಿದ್ದಾರೆ. ಅಂಬೇಡ್ಕರ್ ಅವರು ಹಕ್ಕುಗಳನ್ನು ನೀಡಿದ್ದರಿಂದ ಇಂದು ಕೋಟಿಗಟ್ಟಲೆ ವಂಚಿತರು ನೆಮ್ಮದಿಯಿಂದ ಕಾನೂನು ರಕ್ಷಣೆಯಲ್ಲಿ ಬದುಕಿದ್ದಾರೆ. ಅಂಬೇಡ್ಕ‌ರ್ ಅವರನ್ನು ಇಡೀ ವಿಶ್ವವೇ ಪ್ರತಿನಿತ್ಯವು ಸ್ಮರಿಸುತ್ತದೆ. ಆದರೆ, ದೇಶದ ಆಡಳಿತ ನಡೆಸುತ್ತಿರುವ ಕೋಮುವಾದಿಗಳು ಅವರನ್ನೇ ಅಪಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರವೀಣ್ ಕದಂ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಸಂವಿಧಾನ ವಿರುದ್ಧವಾಗಿದೆ. ಅವರು ಆರ್‌ಎಸ್‌ಎಸ್ ನವರ ಇಚ್ಛೆಯಿಂತೆ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಮನುಸ್ಮೃತಿ ತರುವ ತವಕದಲ್ಲಿದ್ದಾರೆ. ಅದಕ್ಕಾಗಿ ಯಾವಾಗಲೂ ಡಾ.ಅಂಬೇಡ್ಕರ್‌ ಮತ್ತು ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಗೋವಿಂದ ರಾವ್ ತಾಂದಳೆ, ಶಾಲಿವನ ಡೋಂಗರೆ, ಕಾಂಬಳೆ ಗ್ಯಾನೋಬಾ, ಶ್ರೀರಂಗ ಗೋಖೆಲೆ, ನರಸಿಂಗ್ ನಿರ್ಮಳೆ, ಭಗವಂತ ಭುತಾಳೆ, ಬಾಲಾಜಿ ಕಾಲೇಕರ್, ಸುಭಾಷ್ ಗಾಯಕವಾಡ, ನಾರಾಯಣ ವಾಗ್ಮಾರೆ, ವಿಶ್ವನಾಥ್ ಮೋರೆ, ಅವಿನಾಶ್ ಶಿಂಧೆ, ದಿಲೀಪ್ ಸೋಮವಂಶಿ, ಸಾಯಿನಾಥ್ ಕಾಂಬ್ಳೆ, ವಿಜಯಾನಂದ ವಾನಖೇಡೆ, ಜಾಕೀರ್ ಪಠಾನ್, ರಾಜನ್ ಸೂರ್ಯವಂಶಿ, ಸಮೀರ್ ಶೇಕ್ ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಿಪಿಐ ಅಮರಪ್ಪ ಶಿವಬಲ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಚಂದ್ರಶೇಖರ್ ನಿರ್ಣೆ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ ಮಾಡಲಾಯಿತು.

Share this article