ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಕಳೆದ 4-5 ವರ್ಷಗಳ ಭಾರಿ ಮಳೆಯಿಂದ ಹಲವು ಭಾಗಗಳಲ್ಲಿ ಭೂಕುಸಿತವಾಗಿದ್ದು, ಜೀವಹಾನಿಯೊಂದಿಗೆ ಭಾರಿ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ ಹಾನಿಯಾಗಿದೆ. ಕೊಡಗು ಜಿಲ್ಲೆಯ ರಸ್ತೆಗಳು ಭಾರಿ ತಿರುವುಗಳು ಹಾಗೂ ಏರಿಳಿತದಿಂದ ಕೂಡಿರುತ್ತದೆ. ಪ್ರಸ್ತುತ ಮುಂಗಾರು ಪ್ರಾರಂಭವಾಗಿದ್ದು, ಮಳೆಯ ಪ್ರಮಾಣ ಹೆಚ್ಚಿದಂತೆ ನೆಲದಲ್ಲಿ ತೇವಾಂಶ ಹೆಚ್ಚಾಗಿ, ಅಧಿಕ ಭಾರದ ವಾಹನಗಳು ಸಂಚರಿಸಿದಲ್ಲಿ ಭೂಕುಸಿತ ಉಂಟಾಗಿ ಅನಾಹುತಗಳಾಗುವ ಸಾಧ್ಯತೆ ಹೆಚ್ಚಿದೆ.
ಆದ್ದರಿಂದ ಜಿಲ್ಲೆಯ ರಸ್ತೆಗಳು, ಸಾರ್ವಜನಿಕ ಆಸ್ತಿ-ಪಾಸ್ತಿಗಳ ರಕ್ಷಣೆ ಹಾಗೂ ಪ್ರಯಾಣಿಕರ ಮತ್ತು ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963 ರ ವಿಧಿ 31, ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಆಕ್ಟ್ 2005ರ ಕಲಂ 33, ಮೋಟಾರು ವಾಹನಗಳ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989 ರ(ತಿದ್ದುಪಡಿ ನಿಯಮಾವಳಿ 1990) ನಿಯಮ 221-ಎ(5) ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರಡಿ ದತ್ತವಾದ ಅಧಿಕಾರದಂತೆ ಆದೇಶಿಸಿದ್ದಾರೆ.ನಿರ್ಬಂಧಿತ ವಾಹನಗಳು: ಎಲ್ಲಾ ರೀತಿಯ ಮರದ ದಿಮ್ಮಿ ಮತ್ತು ಮರಳು ಸಾಗಾಣಿಕೆ ವಾಹನಗಳು, ವಾಹನದ ನೋಂದಣಿ ತೂಕ 18, 500 ಕೆ.ಜಿ.ಗಿಂತ ಹೆಚ್ಚಿನ ಸರಕು ಸಾಗಾಣೆ ಮಾಡುವ ಸರಕು ಸಾಗಾಣಿಕೆ ವಾಹನಗಳು, ಭಾರಿ ವಾಹನಗಳಾದ ಬುಲೆಟ್ ಟ್ಯಾಂಕರ್ಸ್ , ಶಿಪ್ ಕಾರ್ಗೋ ಕಂಟೈರ್ಸ್, ಲಾಂಗ್ ಚಾಸಿಸ್ (ಮಲ್ಟಿ ಆಕ್ಸಿಲ್) ವಾಹನಗಳು, ರ‍್ಟಿಕ್ಯೂಲೇಟೆಡ್ ವಾಹನಗಳು.
ಕೊಡಗು ಜಿಲ್ಲೆಯ ಮುಖಾಂತರ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275 ರ ಜಿಲ್ಲೆಯ ಗಡಿಭಾಗಗಳಾದ ಕುಶಾಲನಗರ ಮತ್ತು ಸಂಪಾಜೆಯಲ್ಲಿ ವ್ಯವಸ್ಥಿತ ಚೆಕ್‌ಪೋಸ್ಟ್ ನಿರ್ಮಿಸಿ, ದಿನದ 24 ಗಂಟೆಯೂ ನಿಗಾ ವಹಿಸಲು ಸಿಬ್ಬಂದಿ ನಿಯೋಜಿಸಲು, ಮೊಬೈಲ್ ಪ್ಯಾಟ್ರೋಲಿಂಗ್ ನಡೆಸಲು ಹಾಗೂ ಈ ಆದೇಶ ಉಲ್ಲಂಘನೆಯಾಗದಂತೆ ಮತ್ತು ಆದೇಶ ಉಲ್ಲಂಘಿಸಿದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲು ಆರಕ್ಷಕ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಆದೇಶದಲ್ಲಿ ತಿಳಿಸಿದ್ದಾರೆ.