ಗರ್ಭ, ಪ್ರಸವಪೂರ್ವ ಅಕ್ರಮ ಲಿಂಗ ಪತ್ತೆ ನಡೆಯದಿರಲಿ: ಜಿಲ್ಲಾಧಿಕಾರಿ

KannadaprabhaNewsNetwork |  
Published : May 28, 2025, 12:26 AM IST
ಸಭೆ ನಡೆಸಿದರು  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ 77 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಆರೋಗ್ಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ

ಕಾರವಾರ: ಜಿಲ್ಲೆಯ ಯಾವುದೇ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಅಕ್ರಮವಾಗಿ ಗರ್ಭ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಪ್ರಕರಣಗಳು ನಡೆಯದಂತೆ ನಿರಂತರವಾಗಿ ನಿಗಾ ವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚಿಸಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನಗಳ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ 77 ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಆರೋಗ್ಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಈ ಸೆಂಟರ್‌ಗಳು ಕಾನೂನು ಪ್ರಕಾರ ಎಲ್ಲ ಆದೇಶಗಳನ್ನು ಪಾಲಿಸಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತಪಾಸಣೆ ನಡೆಸಬೇಕು. ಈ ಎಲ್ಲ ಕೇಂದ್ರಗಳಿಗೆ ಪ್ರತೀ ಕೇಂದ್ರಗಳಿಗೆ ವಾರ್ಷಿಕ ಕನಿಷ್ಠ 4 ಬಾರಿ ಭೇಟಿ ನೀಡಿ ತಪಾಸಣೆ ನಡೆಸಬೇಕು. ತಪಾಸಣಾ ವರದಿಯಲ್ಲಿ ತಪಾಸಣೆಯ ಸಂಪೂರ್ಣ ವಿವರಗಳನ್ನು ದಾಖಲಿಸಬೇಕು ಎಂದರು.

ತಪಾಸಣೆ ಸಂದರ್ಭದಲ್ಲಿ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಅಕ್ರಮ ಗರ್ಭ ಮತ್ತು ಪ್ರಸವ ಪೂರ್ವಲಿಂಗ ಪತ್ತೆ ನಿಷೇಧ ಕುರಿತು ಎಚ್ಚರಿಕೆ ಫಲಕ ಅಳವಡಿಸಿರುವ ಬಗ್ಗೆ ಮತ್ತು ಪ್ರತಿ ರೋಗಿಯ ಕುರಿತ ಸಂಪೂರ್ಣ ದಾಖಲೆಗಳನ್ನು ಇಟ್ಟಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ರೋಗಿಗಳಿಂದ ನಿಗದಿತ ದರದಂತೆ ಶುಲ್ಕ ಪಡೆದಿರುವ ಬಗ್ಗೆ ಪರಿಶೀಲಿಸಿ ಅಕ್ರಮ ಗರ್ಭ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿ 2023ರಂತೆ ಲಿಂಗಾನುಪಾತದ ಪ್ರಮಾಣ 974 ಇದ್ದು ಇದು ಇನ್ನಷ್ಟು ಉತ್ತಮಗೊಳ್ಳಬೇಕು. ಒಂದು ವರ್ಷದ ಅವಧಿಯಲ್ಲಿ ಸಂಭವಿಸಿರುವ ಗರ್ಭಪಾತ ಪ್ರಕರಣಗಳ ಕುರಿತಂತೆ ಮಾಹಿತಿ ಸಂಗ್ರಹಿಸಿ ಈ ಗರ್ಭಪಾತಕ್ಕೆ ಕಾರಣಗಳು ಮತ್ತು ಅದನ್ನು ತಡೆಯಬಹುದಾದ ಕ್ರಮಗಳ ಬಗ್ಗೆ ವರದಿ ಸಿದ್ಧಪಡಿಸುವ ಮೂಲಕ ಮುಂದಿನ ದಿನಗಳಲ್ಲಿ ಲಿಂಗಾನುಪಾತ ಪ್ರಮಾಣ ಇನ್ನಷ್ಟು ಉತ್ತಮಪಡಿಸುವಂತೆ ನಿರ್ದೇಶನ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್, ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತರಕರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಿನಿ ಬೋರಕರ, ಜಿಲ್ಲಾ ಸಲಹಾ ಸಮಿತಿ ಸದಸ್ಯ ಶ್ರೀಕಾಂತ ಮಹಾದೇವ ನಾಯ್ಕ್, ಜಿಲ್ಲಾ ಸವೇಕ್ಷಣಾಧಿಕಾರಿ ಡಾ. ಅರ್ಚನಾ ನಾಯಕ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ