ಹಸುವನ್ನು ಸಾಕುವ ಧ್ಯೇಯ ನಮ್ಮದಾಗಲಿ

KannadaprabhaNewsNetwork |  
Published : May 28, 2025, 12:26 AM IST
ಜ್ಞಾನಸತ್ರ ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು. | Kannada Prabha

ಸಾರಾಂಶ

ಸೂರ್ಯನ ಕಿರಣ ಪರಾವರ್ತಿಸಿ ಭೂಮಿಯನ್ನು ತಂಪಾಗಿರುವ ಶಕ್ತಿ ಹಸುವಿನ ಸಗಣಿಯಲ್ಲಿದೆ. ಹಿಂದೆ 120 ಕೋಟಿಗಳನ್ನು ಮೀರಿದ ಹಸುಗಳು ಇಂದು 4 ಕೋಟಿಗೆ ಇಳಿಕೆ ಕಂಡಿದ್ದು ಅಪಾಯಕಾರಿ ಸಂಕೇತ

ಅಂಕೋಲಾ: ನಮ್ಮ ಪೂರ್ವಿಕರು ವಿಜ್ಞಾನವನ್ನು ಧರ್ಮದಲ್ಲಿ ಜೋಡಣೆಗೊಳಿಸಿ ಮಹತ್ವದ ವಿಷಯ ಸಾರಿದ್ದಾರೆ. ಹಸುವಿನ ದೇಹದಿಂದ ಹೊರಸೂಸುವ ತರಂಗಗಳು ನಕಾರಾತ್ಮಕ ಶಕ್ತಿ ನಿಗ್ರಹಿಸಬಲ್ಲ ಅದ್ಭುತ ವೈಶಿಷ್ಠ್ಯ ಹೊಂದಿದೆ ಎಂದು ಕೊಲ್ಲಾಪುರ ಕನೇರಿಯ ಸಿದ್ಧಗಿರಿಯ ಮಹಾ ಸಂಸ್ಥಾನದ ಮಠಾಧಿಪತಿ ಶ್ರೀಕಾಡ ಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ತಾಲೂಕಿನ ಬಾಸಗೋಡದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ಸ್ವಾತಂತ್ರ್ಯ ಸೇನಾನಿ ಬಾಸಗೋಡದ ದಿ. ಮಾಣಿ ನಾಯಕರ ಸ್ಮರಣಾರ್ಥ ಏರ್ಪಡಿಸಿದ್ದ ಜ್ಞಾನಸತ್ರ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ಭೂಮಿ ಮತ್ತು ಮನುಷ್ಯನ ಆರೋಗ್ಯಕ್ಕೆ ಗೋವು ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ ಹಸುವಿನ ಕುರಿತು ಸಹಾನುಭೂತಿ ತಳೆದರೆ ಮಾತ್ರವೇ ಸಾಲದು. ಹಸುವನ್ನು ಸಾಕುವ ಧ್ಯೇಯ ನಮ್ಮ ಜೀವನಾದರ್ಶವಾಗಬೇಕಿದೆ ಎಂದರು.

ಸೂರ್ಯನ ಕಿರಣ ಪರಾವರ್ತಿಸಿ ಭೂಮಿಯನ್ನು ತಂಪಾಗಿರುವ ಶಕ್ತಿ ಹಸುವಿನ ಸಗಣಿಯಲ್ಲಿದೆ. ಹಿಂದೆ 120 ಕೋಟಿಗಳನ್ನು ಮೀರಿದ ಹಸುಗಳು ಇಂದು 4 ಕೋಟಿಗೆ ಇಳಿಕೆ ಕಂಡಿದ್ದು ಅಪಾಯಕಾರಿ ಸಂಕೇತವಾಗಿದೆ. ಹಸುಗಳ ಸಂಖ್ಯೆಯು ಕ್ಷೀಣಿಸುತ್ತಿರುವ ಪರಿಣಾಮ ಮಣ್ಣು ಸಾರ ಕಳೆದುಕೊಳ್ಳುವಂತಾಗಿದೆ. ಮಿತಿ ಮೀರಿದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣು ವಿಷಯುಕ್ತವಾಗತೊಡಗಿದ್ದು ಬೆಳೆದ ಬೆಳೆಗಳನ್ನು ಸೇವಿಸಿದ ಮನುಷ್ಯ ಅನಾರೋಗ್ಯಕ್ಕಿಡಾಗುತ್ತಿರುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ.ಆದರೆ ಎದುರಾಗಿರುವ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಯುವ ಜನಾಂಗ ಹಸು ಬೆಳೆಸಿ ಪೋಷಿಸುವ ಕಾರ್ಯವಾಗಬೇಕಿದೆ. ಜ್ಞಾನಸತ್ರದ ಸಂಚಾಲಕ ನಾಗರಾಜ ನಾಯಕ ಅವರು ಕಳೆದ 18 ವರ್ಷಗಳಿಂದ ವಿದಾಯಕ ಕಾರ್ಯಕ್ರಮ ಆಯೋಜಿಸುವ ಮೂಲಕ ದೇಶದ ಭವ್ಯ ಭವಿಷ್ಯತ್ತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಸನಾತನ ಧಾರ್ಮಿಕ ಟ್ರಸ್ಟ್ನಅಧ್ಯಕ್ಷ ಡಾ.ಎಚ್.ಎಸ್.ಶೆಟ್ಟಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರ ಕುಬ್ಜವಾಗುತ್ತಿರುವ ಪ್ರಮಾಣ ಅಧಿಕ ಎನ್ನಬಹುದು. ದೇಶೀಯ ಹಸುಗಳನ್ನು ಕುಲಾಂತರಿ ತಳಿಗಳನ್ನಾಗಿಸುತ್ತಿರುವುದು ಅಪಾಯಕಾರಿ ಸಂಗತಿಯಾಗಿದೆ. ಅಧಿಕ ಹಾಲಿನ ದುರಾಸೆಗೆ ಕುಲಾಂತರಿ ಹಸು ಸಾಕುತ್ತಿದ್ದು ಮನುಷ್ಯರು ವ್ಯತಿರಿಕ್ತ ಪರಿಣಾಮ ಎದುರಿಸುವಂತಾಗಿದೆ. 18 ಹಸುಗಳಿಂದ ಆರಂಭಗೊಂಡ ಹೈನುಗಾರಿಕೆ ಇಂದು 150 ಹಸುಗಳನ್ನು ಮೀರಿ ಸಾಕಣೆ ಮಾಡಲಾಗುತ್ತಿದ್ದು ಗೋವಿನ ಉತ್ಪನ್ನಗಳ ಮೂಲಕ ಲಾಭದಾಯಕ ಉದ್ಯಮವನ್ನಾಗಿಸಿಕೊಂಡಿರುವುದಾಗಿ ತಿಳಿಸಿದರು.

ನಿವೃತ್ತ ಪೋಲಿಸ್ ವರಿಷ್ಠಾಧಿಕಾರಿ ವಿನಯ ಎ.ಗಾಂವಕರ ಮಾತನಾಡಿ, ನಿಸರ್ಗದ ಮೇಲೆ ಎಸಗುತ್ತಿರುವ ದೌರ್ಜನ್ಯದಿಂದ ಪ್ರಕೃತಿ ಮುನಿಸಿಕೊಳ್ಳುವಂತಾಗಿದೆ. ಇನ್ನಾದರೂ ಮನುಷ್ಯ ಎಚ್ಚೆತ್ತುಕೊಳ್ಳದೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಹೇಳಿದರು.

ಜ್ಞಾನಸತ್ರದ ಸಂಚಾಲಕ ನ್ಯಾಯವಾದಿ ನಾಗರಾಜ ನಾಯಕ ಮಾತನಾಡಿ, ಕಳೆದ 18 ವರ್ಷಗಳಿಂದ ಆಯೋಜಿಸುತ್ತಿರುವ ಜ್ಞಾನಯಜ್ಞದಲ್ಲಿ ಅನುಭವಿ, ಅನುಭಾವ, ಅನುಭೂತಿ ಹೊಂದಿದ ಮಹನೀಯರ ಹಿತನುಡಿಗಳ ಪುಣ್ಯಫಲ ಆಸ್ವಾದಿಸುವಂತಾಗಿದೆ ಎಂದರು.

ವೇದಿಕೆಯಲ್ಲಿ ವೆಂಕಣ್ಣ ಮಾಣಿ ನಾಯಕ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು.ಆನಂದು ಭಾಗವತ ಹಾಗೂ ಸಂಗಡಿಗರು ಯಕ್ಷಗಾನದ ಹಾಡುಗಳನ್ನು ಪ್ರಸ್ತುತ ಪಡಿಸಿದರು. ರಾಜೇಶ ಮಾಸ್ತರ ಸೂರ್ವೆ ನಿರೂಪಿಸಿದರು. ಜಗದೀಶ ನಾಯಕ ಹೊಸ್ಕೇರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ