ಗದಗ: ನಿಯಮಿತ ಪೌಷ್ಟಿಕ ಆಹಾರ ಸೇವನೆ, ವಾಯುವಿಹಾರ, ಯೋಗ, ಧ್ಯಾನದ ಮೂಲಕ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳುವ ಮೂಲಕ ಎಲುವಿನ ಸಾಂದ್ರತೆ ಕಾಪಾಡಿಕೊಳ್ಳಬಹುದು ಎಂದು ಡಾ. ಪ್ರಕಾಶ ಸಂಕನೂರ ತಿಳಿಸಿದರು.ನಗರದ ಅಕ್ಕನ ಬಳಗದಲ್ಲಿ ಮಾಸಿಕ ಕಾರ್ಯಕ್ರಮ ಮಾಲಿಕೆಯಲ್ಲಿ ನಡೆದ ಎಲವುಗಳ ಸಾಂದ್ರತೆ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಸಾಮಾನ್ಯವಾಗಿ ಎಲ್ಲರೂ ಯಾಂತ್ರಿಕ ಜೀವನ ನಡೆಸುತ್ತಿದ್ದು, ಇದರ ಪರಿಣಾಮವಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ದೈಹಿಕ ಶ್ರಮವಿಲ್ಲ, ಓಡಾಟವಿಲ್ಲ, ಮನೆಗೆಲಸಕ್ಕೆ ಆಳು, ಉಳಿದ ಕೆಲಸಗಳೆಲ್ಲ ಯಂತ್ರೋಪಕರಣಗಳಿಂದಾಗಿ ಮನುಷ್ಯ ಆಲಸಿಯಾಗುತ್ತಿದ್ದಾನೆ. ವಿಶೇಷವಾಗಿ ಮಹಿಳೆಯರು ಶ್ರಮವಿಲ್ಲದೆ ಮೊಣಕಾಲು ನೋವು ಇತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.ಮಹಿಳೆಯರು ಪ್ರತಿ ತಿಂಗಳು ಋತುಚಕ್ರ ಸಹಜ ಕ್ರಿಯೆ ಎದುರಿಸುವುದರಿಂದ ರಕ್ತದ ಅಂಶ ಕಡಿಮೆಯಾಗುವುದು. ಮಹಿಳೆಯರು ಉಪಾಹಾರ, ಊಟವನ್ನು ಸರಿಯಾದ ಸಮಯಕ್ಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಮೊಟ್ಟೆ, ತೊಪ್ಪಲು ಪಲ್ಯೆ, ತರಕಾರಿ, ನೆನೆಸಿದ ಕಾಳು ಸೇವಿಸಬೇಕು. ನಿಯಮಿತ ಪೌಷ್ಟಿಕ ಆಹಾರ ಸೇವನೆ, ವಾಯುವಿಹಾರ, ಯೋಗ, ಧ್ಯಾನ ಮಾಡಿದರೆ ಆರೊಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು. ಜತೆಗೆ ಎಲುವಿನ ಸಾಂದ್ರತೆ, ಸವಕಳಿ ಪ್ರಮಾಣ ಕಡಿಮೆಯಾಗುವುದು ಎಂದರು.ಡಾ. ಚಂದ್ರಯ್ಯ ಹೊಸಮಠ ಮಾತನಾಡಿ, 40 ವರ್ಷ ದಾಟಿದ ಮಹಿಳೆಯರಲ್ಲಿ ಎಲವು ಮೊಣಕಾಲು ನೋವು ಸಮಸ್ಯೆಗಳು ಉದ್ಭವಿಸುವುವು. ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾದಾಗ ಆಯಾಸ ಕಾಣುವುದು. ಆದ್ದರಿಂದ ಸರಿಯಾಗಿ ಊಟ ಮಾಡಬೇಕು. ಪೌಷ್ಟಿಕ ಅಂಶವಿರುವ ಆಹಾರ ಸೇವಿಸಬೇಕು. ವಾಕಿಂಗ್ ಮಾಡಬೇಕು. ವೈದ್ಯರ ಸಲಹೆ ಇಲ್ಲದೆ ಯಾವುದೇ ಗುಳಿಗೆ, ಔಷಧ ತೆಗೆದುಕೊಳ್ಳಬಾರದು ಎಂದರು.ಅಧ್ಯಕ್ಷತೆ ವಹಿಸಿದ್ದ ಅಕ್ಕನ ಬಳಗದ ಅಧ್ಯಕ್ಷೆ ಜಯಶ್ರೀ ಹುಬ್ಬಳ್ಳಿ ಮಾತನಾಡಿದರು. ಶಿಬಿರದಲ್ಲಿ ಎಲುವಿನ ಸಾಂದ್ರತೆಯನ್ನು ಪರೀಕ್ಷಿಸುವ ತಜ್ಞರಾದ ರಘು ಮೇರವಾಡೆ, ನಾಗರಾಜ ನೀಲಗುಂದ ಹಾಗೂ ಶಬ್ಬೀರ ತಂಡದವರು ಅತ್ಯಾಧುನಿಕ ಯಂತ್ರೋಪಕರಣದಿಂದ ಎಲುವಿನ ಸಾಂದ್ರತೆಯನ್ನು ಪರೀಕ್ಷಿಸಿ ಸಲಹೆ ನೀಡಿದರು. ಅಗತ್ಯವಿದ್ದವರಿಗೆ ಉಚಿತ ಔಷಧ ನೀಡಲಾಯಿತು.ಟ್ರಸ್ಟಿ ಅಧ್ಯಕ್ಷೆ ಕಸ್ತೂರಿ ಹಿರೇಗೌಡ್ರ, ಶೈಲಜಾ ನಾಲ್ವಾಡ ಉಪಸ್ಥಿತರಿದ್ದರು. ಶಕುಂತಲಾ ಮುದಗಣ್ಣವರ ಪ್ರಾರ್ಥಿಸಿದರು. ಸುನೀತಾ ತಡಸದ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಯಶ್ರೀ ಪಾಟೀಲ ವಂದಿಸಿದರು.