ಸಿಎನ್‌ಸಿಯಿಂದ ಟಿ.ಶೆಟ್ಟಿಗೇರಿಯಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ

KannadaprabhaNewsNetwork |  
Published : May 28, 2025, 12:24 AM ISTUpdated : May 28, 2025, 12:25 AM IST
ರ್ತ್ರ :  21ಎಂಡಿಕೆ1 : ಸಿಎನ್‌ಸಿಯಿಂದ ಟಿ.ಶೆಟ್ಟಿಗೇರಿಯಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ  ನಡೆಯಿತು.  | Kannada Prabha

ಸಾರಾಂಶ

ರಾಷ್ಟ್ರೀಯ ಜನಗಣತಿ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್‌ ಮತ್ತು ಕಾಲಮ್‌ ಅನ್ನು ಸೇರಿಸಬೇಕು. ಸಂಸತ್‌ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಜನಜಾಗೃತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಷ್ಟ್ರೀಯ ಜನಗಣತಿಯ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಸೇರಿಸಬೇಕು, ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಟಿ.ಶೆಟ್ಟಿಗೇರಿಯಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಸಿತು.

ಧಾರಾಕಾರ ಮಳೆಯ ನಡುವೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಟಿ.ಶೆಟ್ಟಿಗೇರಿ ಜಂಕ್ಷನ್ ನಲ್ಲಿ ಮಾನವ ಸರಪಳಿ ನಿರ್ಮಿಸಿದ ಸದಸ್ಯರು ಜನಗಣತಿಯ ಸಂದರ್ಭ ಪ್ರತ್ಯೇಕ ಕಾಲಮ್ ಮತ್ತು ಕೋಡ್ ಅಳವಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಹಕ್ಕೊತ್ತಾಯ ಮಂಡಿಸಿದರು.

ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಪ್ರಸ್ತುತ ಜನಗಣತಿ ಸಂದರ್ಭ ಕೊಡವರಿಗೆ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಸೇರಿಸಿದರೆ ಕೊಡವ ಸಮುದಾಯದ ನಿಖರವಾದ ಪ್ರಾತಿನಿಧ್ಯವನ್ನು ಖಚಿತಪಡಿಸಬಹುದು. ಸರ್ಕಾರ ಕೊಡವ ಸಮುದಾಯದ ನಿರ್ದಿಷ್ಟ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸೋಶಿಯಲ್ ಇಂಜಿನಿಯರಿಂಗ್ ಮೂಲಕ ಅವರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಉದ್ದೇಶಿತ ನೀತಿಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ. ಕೊಡವ ಸಮುದಾಯದ ವಿಶಿಷ್ಟ ಗುರುತನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದರು.

2025-26ರ ರಾಷ್ಟ್ರೀಯ ಜನಗಣತಿಯಲ್ಲಿ ಆದಿಮಸಂಜಾತ ಕೊಡವರಿಗೆ ಪ್ರತ್ಯೇಕ "ಕೋಡ್ ಮತ್ತು ಕಾಲಮ್ " ಅನ್ನು ಸೇರಿಸಲು ಕೇಂದ್ರ ಗೃಹ ಮಂತ್ರಾಲಯ ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯೋಗ ನಮ್ಮ ಬೇಡಿಕೆಯನ್ನು ಪರಿಗಣಿಸಬೇಕೆಂದು ಒತ್ತಾಯಿಸಿದರು.

ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಗಾಗಿ ಕಳೆದ 35 ವರ್ಷಗಳಿಂದ ನಿರಂತರ ಮತ್ತು ಶಾಂತಿಯುತವಾಗಿ ಸಿಎನ್‌ಸಿ ಸಂಘಟನೆ ಹೋರಾಟ ನಡೆಸುತ್ತಾ ಬಂದಿದೆ. ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಈ ಬೇಡಿಕೆ ಪರ ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದು, ಅದರ ವಿಚಾರಣೆ ಮುಂದುವರೆಯುತ್ತಿದೆ ಎಂದರು.

ಜನಗಣತಿಯ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಅಳವಡಿಸಬೇಕೆಂದು ಒತ್ತಾಯಿಸಿ ಜೂ.2 ರಂದು ಬೆಳಗ್ಗೆ 10.30 ಗಂಟೆಗೆ ಬಾಳೆಲೆಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.

ಈ ಸಂದರ್ಭ ಅಜ್ಜಮಾಡ ಸಾವಿತ್ರಿ, ಅಪ್ಪಚಂಗಡ ಮೋಟಯ್ಯ, ಚೊಟ್ಟೆಯಂಡಮಾಡ ಉದಯ, ಬೊಟ್ಟಂಗಡ ಗಿರೀಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಅಜ್ಜಮಾಡ ಚಿಮ್ಮ, ಚಟ್ಟಂಗಡ ರೇಣು, ಕಾಳಿಮಾಡ ಕಿರಣ್, ಉಳುವಂಗಡ ಉದಯ, ಚಟ್ಟಂಗಡ ಸೋಮಣ್ಣ, ಮಾಣಿರ ಮನು, ಚೊಟ್ಟೆಯಂಡಮಾಡ ಸತೀಶ್, ಮಾಣಿರ ಪ್ರವೀಣ್, ಆಂಡಮಾಡ ಧನು ಮತ್ತಿತರರು ಪಾಲ್ಗೊಂಡಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್