ದೇಶದಲ್ಲಿ ಸಂವಿಧಾನದ ಜಾರಿಯಿಂದಾಗಿ ಎಲ್ಲ ಸಮಾಜಗಳು ಸಮಾನವಾಗಿ ಮತ್ತು ಸಾಮರಸ್ಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಸಂವಿಧಾನ ರಕ್ಷಣೆ ಎಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಹಿಂದುಳಿದ ಸಮುದಾಯಗಳು ಸಂವಿಧಾನದ ಕುರಿತು ಜಾಗೃತಿ ಹೊಂದಿ ರಕ್ಷಣೆಗೆ ಮುಂದಾಗಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ಹಿಂದುಳಿದ ವರ್ಗಗಳು ತಮ್ಮ ಹಕ್ಕುಗಳನ್ನು ಪಡೆಯಲು ಸಂವಿಧಾನ ಪ್ರಜ್ಞೆ ಹೊಂದಿ ಹೋರಾಡಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಕರೆ ನೀಡಿದರು.
ತಾಲೂಕಿನ ಕೊಪ್ಪ ಗ್ರಾಮದ ಶಾಶ್ವತಿ ಕಲ್ಯಾಣ ಮಂಟಪದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಆಯೋಜಿಸಿದ್ದ ಅರಸು ಜನ್ಮ ದಿನಾಚರಣೆ ಮತ್ತು ನಾಯಕತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಸಂವಿಧಾನದ ಜಾರಿಯಿಂದಾಗಿ ಎಲ್ಲ ಸಮಾಜಗಳು ಸಮಾನವಾಗಿ ಮತ್ತು ಸಾಮರಸ್ಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಸಂವಿಧಾನ ರಕ್ಷಣೆ ಎಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಹಿಂದುಳಿದ ಸಮುದಾಯಗಳು ಸಂವಿಧಾನದ ಕುರಿತು ಜಾಗೃತಿ ಹೊಂದಿ ರಕ್ಷಣೆಗೆ ಮುಂದಾಗಬೇಕು ಎಂದರು.
ಹಿಂದುಳಿದ ಜಾತಿಗಳ ಪ್ರತ್ಯೇಕತೆಯಿಂದಾಗಿ ದುರ್ಬಲಗೊಳಂಡು ಹಲವು ಸವಾಲು ಮತ್ತು ಸಮಸ್ಯೆ ಎದುರಿಸುವಂತಾಗಿದೆ. ಎಲ್ಲ ಸಮಾಜಗಳು ಹಿಂದುಳಿದ ವರ್ಗದ ಅಡಿಯಲ್ಲಿ ಒಗ್ಗೂಡುವುದರಿಂದ ಬಲಗೊಳ್ಳಲು ಮತ್ತು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪ್ರತಿಪಾದಿಸಿದರು.
ಜಿಲ್ಲೆಯ ಎಲ್ಲ ತಾಲೂಕು ಮತ್ತು ಹೋಬಳಿ ಕೇಂದ್ರದಲ್ಲಿ ಕಳೆದ ಎರಡು ತಿಂಗಳಿನಿಂದಲೂ ನಿರಂತರವಾಗಿ ಹಿಂದುಳಿದ ವರ್ಗಗಳ ನಾಯಕತ್ವ ಅಭಿಯಾನ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಪಂ ಮಟ್ಟದಲ್ಲಿ ಹಿಂದುಳಿದ ಮುಖಂಡರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುವುದು ಎಂದರು.
ತಾಪಂ ಮಾಜಿ ಅಧ್ಯಕ್ಷ ಎಚ್.ಜಿ.ರಾಮಚಂದ್ರು ಮಾತನಾಡಿ, ಹಿಂದುಳಿದ ವರ್ಗಗಳಿಗೆ ಅಧಿಕಾರದ ಅವಕಾಶ ಸಿಕ್ಕರೆ ಉತ್ತಮ ಆಡಳಿತ ನಡೆಸುತ್ತಾರೆ. ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ನೀಡಿದ ಬಳುವಳಿಗಳು ಇದಕ್ಕೆ ಸಾಕ್ಷಿ ಎಂದು ಬಣ್ಣಿಸಿದರು.
ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಹುರುಗಲವಾಡಿ ರಾಮಯ್ಯ ಸಂವಿಧಾನ ಪ್ರತಿಜ್ಞಾವಿಧಿ ಬೋಧಿಸಿದರು. ಸಾಮಾಜಿಕ ಚಿಂತಕ ಎಂ.ಮಂಚಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಬಿ.ಎಂ.ರವಿ, ಗಿರೀಶ್ ಕೊಪ್ಪ, ಶಶಿಕುಮಾರ್, ಪುಟ್ಟಸ್ವಾಮಿ, ಪರ್ವೀಜ್, ಶಶಿಕುಮಾರ್, ಕೆ.ಟಿ. ಶಿವಕುಮಾರ್, ರಾಮಕೃಷ್ಣ, ವೆಂಕಟೇಶಾಚಾರಿ, ಗುರುಸ್ವಾಮಿ, ರಾಚಪ್ಪಾಜಿ, ಶ್ರೀನಿವಾಸ್ ಕೊಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.