ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೊಡಗು ಸೇರಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಜುಲೈ 31 ಮತ್ತು ಆಗಸ್ಟ್ 1 ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇದರಿಂದ ಹೆಚ್ಚಿನ ನೀರು ಕೆಆರ್ ಎಸ್ ಗೆ ಹರಿದು ಬರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಲಕ್ಷಾಂತರ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ.
ತಾಲೂಕಿನ ಪ್ರವಾಸಿ ತಾಣಗಳಾದ ಕೆಆರ್‌ಎಸ್ ಬೃಂದಾವನ, ಬಲಮುರಿ, ಎಡಮುರಿ, ರಂಗನತಿಟ್ಟು ಪಕ್ಷಿಧಾಮ, ಘೋಸಾಯಿಘಾಟ್, ಸಂಗಮ, ಪಶ್ಚಿಮ ವಾಹಿನಿ, ನದಿ ತೀರದ ಅಜುಬಾಜು ಸೇರಿ ಹಲವು ತಾಣಗಳಿಗೆ ಪ್ರವಾಸಿಗರು, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.ಕೊಡಗು ಮತ್ತು ಕೇರಳದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕಾವೇರಿ, ಕಪಿಲಾ ನದಿ ಉಕ್ಕಿ ಹರಿಯುತ್ತಿವೆ. ಕೆಆರ್ ಎಸ್ ಜಲಾಶಯಕ್ಕೆ ಭಾರೀ ಪ್ರಮಾಣದ ಒಳ ಹರಿವು ಹೆಚ್ಚಾಗಿದ್ದು, ಅಣೆಕಟ್ಟೆಯಿಂದ ನದಿಗೆ 1,72,161 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ನದಿ ಪಾತ್ರದ ಕೆಳ ಭಾಗದ ರೈತರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ತಾಲೂಕು ಹಾಗೂ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಮುಳುಗುವ ಬೀತಿಯಲ್ಲಿ ವೆಲ್ಲೆಸ್ಲಿ ಸೇತುವೆ:
ಪಟ್ಟಣದ ನಿಮಿಷಾಂಭ ದೇವಸ್ಥಾನ, ಸಂಗಮ, ಸಾಯಿ ಆಶ್ರಮ ಸೇರಿ ಹಲವು ಪ್ರವಾಸಿತಾಣಗಳು ಪಟ್ಟಣದಲ್ಲಿ ಮುಳುಗಡೆ ಹಂತ ತಲುಪಿವೆ. ಇಂದು ಅಥವಾ ನಾಳೆ ಯಾವುದೇ ಕ್ಷಣದಲ್ಲಾದರೂ 2 ಲಕ್ಷಕ್ಕೂ ಅಧಿಕ ನೀರನ್ನು ಹೊರ ಬಿಡಲಾಗುವುದು ಎಂದು ಜಿಲ್ಲಾಡಳಿತ, ಕೆಆರ್ ಎಸ್ ಅಧೀಕ್ಷಕರು ತಿಳಿಸಿರುವುದರಿಂದ ತಾಲೂಕಿನ ತಗ್ಗು ಪ್ರದೇಶಗಳು ಮತಷ್ಟು ಮುಳುಗಡೆ ಭೀತಿ ಎದುರಿಸುತ್ತಿವೆ.