- ಬಂಧಿಖಾನೆಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮ
ಕನ್ನಡಪ್ರಬವಾರ್ತೆ, ಚಿಕ್ಕಮಗಳೂರುಅಪರಾಧವನ್ನು ದ್ವೇಷಿಸಬೇಕು ಹೊರತು, ಅಪರಾಧಿಯನ್ನಲ್ಲ. ಆಕಸ್ಮಿಕವಾಗಿ ಪೆಟ್ಟು ತಿಂದು ಶಿಕ್ಷೆಗೆ ಗುರಿಯಾಗುವ ವ್ಯಕ್ತಿಗಳು, ಬಿಡುಗಡೆ ಬಳಿಕ ಸಾತ್ವಿಕ ಜೀವನದಡಿ ಬಾಳನ್ನು ಮುನ್ನೆಡೆಸಬೇಕು ಎಂದು ಕಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ಪಟೇಲ್ ಪಾಂಡು ಹೇಳಿದರು.ಜಿಲ್ಲಾ ಕಾರಾಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಮಹಿಳಾ ಘಟಕ, ಜಿಲ್ಲಾ ಕೇಂದ್ರ ಕಾರಾಗೃಹ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆಸ್ತಿ, ಅಂತಸ್ತು ಹಾಗೂ ಹಣದ ದುರಾಸೆಗಾಗಿ ಮನುಷ್ಯ ಸನ್ನಿವೇಶನಕ್ಕೆ ಸಿಲುಕಿಕೊಂಡು ಮನಸ್ಸನ್ನು ಹತೋಟಿ ತರಲಾಗದೇ ತಪ್ಪುದಾರಿಯ ಗುಲಾಮರಾಗಿ ಬಿಡುತ್ತಾನೆ. ಹೀಗಾಗಿ ಮನಸ್ಸನ್ನು ಸ್ಥಿಮಿತಗೊಳಿಸಲು ಪುಸ್ತಕ, ಸಂಗೀತ ಹಾಗೂ ಸಾಹಿತ್ಯದ ಅಭ್ಯಾಸಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಅಧರ್ಮದ ದಾರಿಯಲ್ಲಿ ಸಾಗುವ ವ್ಯಕ್ತಿಗಳು ಒಂದಲ್ಲೊಂದು ದಿನ ಶಿಕ್ಷೆ ಒಳಗಾಗುವನು. ಹಾಗಾಗಿ ವಿಶ್ವ ಮಾನವ ಸಂದೇಶ ದಂತೆ ಮೊದಲು ಮಾನವನಾಗು ಎಂಬ ತತ್ವ, ಆಲೋಚನೆಗಳ ಮೌಲ್ಯಗಳನ್ನು ಅರ್ಥೈ ಸಿಕೊಳ್ಳಬೇಕು. ದಾರ್ಶನಿಕರ ಕೀರ್ತನೆ, ವಚನಗಳ ಓದಿನಿಂದ ಜೀವನವು ಬದಲಾವಣೆಗೆ ನಾಂದಿಯಾಗಲಿದೆ ಎಂದು ಹೇಳಿದರು.ಆತ್ಮಶ್ರದ್ಧೆ ಸಾಕ್ಷಿಕರಿಸಿದರೆ, ಅಗಾಧ ಶಕ್ತಿ ಉದ್ಭವವಾಗಲಿದೆ. ಶಕ್ತಿ ಸದ್ಭಳಕೆ ಮಾಡಿಕೊಳ್ಳದೇ, ಸನ್ನಿವೇಶಕ್ಕೆ ಬಲಿಕೊಟ್ಟರೆ, ಬಾಳೆಂಬ ಬಂಡಿಯಲ್ಲಿ ಎಡವಿ ಬೀಳುತ್ತೇನೆ. ಆಸೆಗಳು ದುರಾಸೆಗಳೆಂದು ಭಾವಿಸಿ, ಸುಖ-ದುಃಖವನ್ನು ಸರಿಸಮಾನಾಗಿ ಅರಿತುಕೊಂಡರೆ ಜಗತ್ತಿನಲ್ಲಿ ಸುಲಭದ ಜೀವನದ ಜೊತೆಗೆ ಸಾಧನೆ ಮಾಡಬಹುದು ಎಂದು ತಿಳಿಸಿದರು. ಕಾರಾಬಂಧಿಗಳು ಬಂಧನದಿಂದ ಮುಕ್ತರಾಗುವ ಕಾಲ ಸನ್ನಿಹಿತವಾಗಲಿದೆ. ಈ ನಡುವೆ ಕವಿ ಸಂತರ ಕೃತಿಗಳು, ಗಾಂಧಿ ತತ್ವದ ಅಹಿಂಸಾತ್ಮಕ ಚಿಂತನೆಗಳ ಪುಸ್ತಕಗಳನ್ನು ಓದಬೇಕು. ಮಾನವ ಜನ್ಮ ಎಂಬುದು ಬಹು ದೊಡ್ಡದು. ಹಾಳುಮಾಡಿ ಕೊಂಡರೆ ಕೊನೆಗಳಿಗೆಯಲ್ಲಿ ತೀವ್ರ ಹತಾಸೆಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ಮನಸ್ಸನ್ನು ಹತೋಟಿಯಲ್ಲಿಡಲು ಸಾಹಿತ್ಯಾತ್ಮಕ ಚಟುವಟಿಕೆ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಸಾಹಿತ್ಯ, ಸಂಗೀತ ಮನಸ್ಸನ್ನು ಉಲ್ಲಾಸಗೊಳಿಸಲಿದೆ. ದಾರ್ಶನಿಕರ ಕೃತಿಗಳನ್ನು ಅಭ್ಯಾಸಿಸಿ ಇತರರಿಗೂ ತಿಳಿಸುವಂಥ ಕೆಲಸ ಮಾಡಬೇಕು. ಆದಷ್ಟು ಸಮಯ ಮನಸ್ಸನ್ನು ಸಂತೋಷದಿಂದ ಕಳೆಯಲು ಪ್ರಯತ್ನಿಸಬೇಕು. ಆಕಸ್ಮಿಕ ಜರುಗಿದ ಘಟನೆಗಳಿಗೆ ಶಿಕ್ಷೆ ಅನುಭವಿಸಿ ಹೊಸ ಮನುಷ್ಯನಾಗಿ ಹೊರಹೊಮ್ಮಬೇಕು ಎಂದರು.ಪೊಲೀಸ್, ಕಾರಾಗೃಹ ಸಿಬ್ಬಂದಿ ಹಾಗೂ ಕಾರಾಬಂಧಿಗಳಿಗೆ ಸಾಹಿತ್ಯಾಭಿರುಚಿ ಬೆಳೆಸಲು ಪರಿಷತ್ತಿನಿಂದ ಕವಿಗೋಷ್ಠಿ ಹಮ್ಮಿ ಕೊಳ್ಳುವ ಚಿಂತನೆಯಿದೆ. ಅಧಿಕಾರಿಗಳ ಅಪ್ಪಣೆ ಮೇರೆಗೆ ಮುಂದಿನ ದಿನದಲ್ಲಿ ಕಾರಾಗೃಹದಲ್ಲಿ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡು ಕವಿ ವೇದಿಕೆ ಸೃಷ್ಟಿಸುವ ಗುರಿಯಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರಾಗೃಹ ಅಧೀಕ್ಷಕ ಮಂಜುನಾಥ್, ಸದ್ಯದಲ್ಲೇ ನಾಡಿನ ಭವ್ಯ ವಾದ ಹಬ್ಬ ಕನ್ನಡ ರಾಜ್ಯೋತ್ಸವ ಆಚರಿಸಲು ಕಾಲ ಕೂಡಿ ಬರುತ್ತಿದೆ. ಜೊತೆಗೆ ಜಿಲ್ಲಾ ಕಸಾಪದಿಂದ ಸಂಗೀತ ಸಂಜೆ ಏರ್ಪಡಿಸಿ ಕಾರಾಬಂಧಿಗಳಿಗೆ ಸಾಮಾಜಿಕ ಬದ್ಧತೆ ಅರಿವು ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಇದೇ ವೇಳೆ ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಹುಲಿಕೆರೆ ಪುಲಿಕೇಶಿ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. ತಾಲೂಕು ನಿಕಟಪೂರ್ವ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಜಿಲ್ಲಾ ಕಸಾಪ ಮಹಿಳಾ ಜಿಲ್ಲಾಧ್ಯಕ್ಷೆ ನಿರ್ಮಲ ಮಂಚೇಗೌಡ, ಪ್ರಧಾನ ಕಾರ್ಯದರ್ಶಿ ರೂಪನಾಯ್ಕ್, ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ, ಕಸಬಾ ಹೋಬಳಿ ಅಧ್ಯಕ್ಷ ವೀಣಾ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು. 19 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮವನ್ನು ಕಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ಪಟೇಲ್ ಪಾಂಡು ಅವರು ಉದ್ಘಾಟಿಸಿದರು. ಸೂರಿ ಶ್ರೀನಿವಾಸ್, ಎಸ್.ಎಸ್. ವೆಂಕಟೇಶ್, ಮಂಜುನಾಥ್, ಸೋಮಶೇಖರ್, ರೂಪಾ ನಾಯ್ಕ್ ಇದ್ದರು.