ಜನೌಷಧಿ ಕೇಂದ್ರ ಮುಚ್ಚುವ ಆದೇಶ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : May 31, 2025, 12:35 AM ISTUpdated : May 31, 2025, 12:36 AM IST
4 | Kannada Prabha

ಸಾರಾಂಶ

ಸರ್ಕಾರ ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕೆ ಹೊರತು, ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಬಾರದು

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಖಂಡಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಕೆ.ಆರ್. ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ರಾಜ್ಯ ಸರ್ಕಾರದ ವಿರುದ್ಧ ವಿವಿಧ ಫಲಕಗಳನ್ನು ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಅವರು, ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಈ ಕೂಡಲೇ ರದ್ದುಗೂಳಿಸಬೇಕು. ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ಮುಚ್ಚಲು ರಾಜ್ಯ ಸರ್ಕಾರದಿಂದ ಆದೇಶ ನೀಡಿರುವುದು ದುರ್ದೈವ ಸಂಗತಿಯಾಗಿದ್ದು, ಅತಿ ಕಡಿಮೆ ದರದಲ್ಲಿ ಔಷಧಿಗಳನ್ನು ಖರೀದಿಸುತ್ತಿದ್ದ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಭಾರಿ ಸಮಸ್ಯೆಯಾಗಿದೆ. ಅಲ್ಲದೆ ಹೊಸ ಕೇಂದ್ರಗಳನ್ನು ಪ್ರಾರಂಭಿಸಲು ಸಲ್ಲಿಸಿದ ಅರ್ಜಿಗಳಿಗೂ ತಡೆಯಾಜ್ಞೆ ನೀಡಲಾಗಿದೆ. ಜೊತೆಗೆ ಅರ್ಜಿ ತಿರಸ್ಕರಿಸಲು ಆದೇಶಿಸಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಸರ್ಕಾರ ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕೆ ಹೊರತು, ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಬಾರದು. ಸರ್ಕಾರಿ ಆಸ್ಪತ್ರೆಯಲ್ಲಿ ನಾವು ಉಚಿತವಾಗಿ ಔಷಧ ನೀಡುತ್ತಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಔಷಧಗಳ ಪೂರೈಕೆಯೇ ಆಗುತ್ತಿಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಆರೋಗ್ಯ ಸಚಿವರು ಸಮರ್ಪಕವಾದ ಉತ್ತರ ನೀಡಿಲ್ಲ. ಸರ್ಕಾರ ಈ ಕೂಡಲೇ ಜನೌಷಧ ಕೇಂದ್ರಗಳನ್ನು ಮುಚ್ಚುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.ಬಿಜೆಪಿ ನಗರಾಧ್ಯಕ್ಷ ಮಾಜಿ ಶಾಸಕ ಎಲ್. ನಾಗೇಂದ್ರ ಮಾತನಾಡಿ, ರಾಜ್ಯ ಸರ್ಕಾರ ಜನಔಷಧಿ ಕೇಂದ್ರಗಳನ್ನು ಮುಚ್ಚಲು ಆದೇಶ ನೀಡಿರುವುದು ಸರಿಯಲ್ಲ. ಸರ್ಕಾರ ಈ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು. ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ಬೆಲೆಗೆ 800 ಹೆಚ್ಚು ಔಷಧಗಳು ಸಿಗುತ್ತಿವೆ. ಈ ಕೇಂದ್ರಗಳು ಬಡವರಿಗಾಗಿ ಇದ್ದು, ಸರ್ಕಾರ ತನ್ನ ನಿರ್ಧಾರ ಬದಲಿಸಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು.ಮಾಜಿ ಉಪ ಮೇಯರ್ ಡಾ.ಜಿ. ರೂಪಾ, ಮುಖಂಡರಾದ ಬಿ.ಪಿ. ಮಂಜುನಾಥ್, ಎಚ್.ಜಿ. ಗಿರಿಧರ್, ಡಾ. ಅನಿಲ್ ಥಾಮಸ್, ರೇಣುಕಾ ರಾಜ್, ರಘು, ಗೋಕುಲ್ ಗೋವರ್ಧನ್, ಶಂಕರ್ ಇದ್ದರು.----ಕೋಟ್...ಪ್ರಧಾನಿ ಮೋದಿ ಅವರ ಫೋಟೋ ಇರುವ ಕಾರಣ ಜನೌಷಧಿ ಕೇಂದ್ರ ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದೆಯಾ? ರಾಜ್ಯದಲ್ಲಿರುವ ಇಂದಿರಾ ಕ್ಯಾಂಟೀನ್‌ ನಲ್ಲಿ ಯಾರ ಫೋಟೋ ಹಾಕಿದ್ದೀರಾ? ಬಸ್ ಮೇಲೆ ಯಾಕೆ ನಿಮ್ಮ ಫೋಟೋ ಹಾಕಿಕೊಂಡಿದ್ದೀರಾ? ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಬಿಡಬೇಕು.- ಟಿ.ಎಸ್. ಶ್ರೀವತ್ಸ, ಶಾಸಕ

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್