ಗದಗ: ಸಾಮಾನ್ಯವಾಗಿ ಶ್ರೇಷ್ಠತೆಯ ಜೀವನ ನಡೆಸುವುದರ ಹಿಂದೆ ಒಬ್ಬ ಮಹಾಪುರುಷನ ಆಶೀರ್ವಾದ ಕಾರಣವಾಗಿರುತ್ತದೆ. ನಮ್ಮ ಭಾರತದಲ್ಲಿ ಅನೇಕ ಶರಣರು, ಸಾಧು-ಸಂತರು, ಶಿವಯೋಗಿಗಳು, ಮಹಾಪುರುಷರಾಗಿ ಹೋಗಿದ್ದಾರೆ. ಅವರಲ್ಲಿ ತ್ಯಾಗವೀರ ಸಿರಸಂಗಿ ಲಿಂಗರಾಜರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಜ. ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.
ಲಿಂಗರಾಜರು ಸಮಾಜದಲ್ಲಿ ಉತ್ತಮ ಕೆಲಸ-ಕಾರ್ಯಗಳಿಗೆ ಪ್ರೇರಣೆ, ಪ್ರೋತ್ಸಾಹ ನೀಡುತ್ತಾ ಸಮಾಜದ ಅಭಿವೃದ್ಧಿ ಪರವಾಗಿ ದುಡಿಯುತ್ತಿದ್ದರು. ರಾಜನ ಸ್ಥಾನದಲ್ಲಿದ್ದ ಲಿಂಗರಾಜರು ಐಷಾರಾಮಿ ಜೀವನ ನಡೆಸಬಹುದಾಗಿತ್ತು. ಆದರೆ ಅವರು ಕೃಷಿ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದು ಜನಮುಖಿ ಕಾರ್ಯಗಳನ್ನು ಕೈಗೊಂಡು ಜನರ ಪ್ರೀತಿಗೆ ಪಾತ್ರರಾಗಿದ್ದರು. ನಾವು ಮಾಡುವ ದಾನ-ಧರ್ಮ ಮುಂತಾದ ಕೆಲಸ ಕಾರ್ಯಗಳಿಂದ ಸಮಾಜದ ಉದ್ದಾರಕ್ಕೆ ಬಂದಿರುವ ಈ ಶರೀರವನ್ನು ಬಳಸಿಕೊಂಡು ಲೋಕ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂಬ ರಹಸ್ಯವನ್ನು ಅರಿತುಕೊಂಡವರಾಗಿದ್ದರು ಎಂದರು.
ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಸ್.ಪಿ. ಸಂಶಿಮಠ ಮಾತನಾಡಿ, ಸಿರಸಂಗಿ ಲಿಂಗರಾಜರು ಲಿಂಗಾಯತ ಸಮಾಜದ ಅಭಿವೃದ್ಧಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಉತ್ತರ ಕರ್ನಾಟಕದ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಯಲ್ಲಿ ಲಿಂಗರಾಜರ ಹೆಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ ಎಂದರು.ಈ ಸಂದರ್ಭದಲ್ಲಿ ವೈ.ಆರ್.ಸಿ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ೫೬ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ತ್ಯಾಗವೀರ ಸಿರಸಂಗಿ ಲಿಂಗರಾಜರ ಜಯಂತಿ ಅಂಗವಾಗಿ ಆಯೋಜಿಸಿದ್ದ ವಚನಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.