- ರಾಮಮಂದಿರ ನಿರ್ಮಾಣ ದೇಶದ ಜನರ ನಿರೀಕ್ಷೆಯಾಗಿತ್ತು । ಹೊಸಪೇಟೆಯ ಹನಿ ಡ್ಯೂ ರೆಸಾರ್ಟ್ ಬಳಿ ಹೇಳಿಕೆ
ಶ್ರೀ ರಾಮಮಂದಿರ ಉದ್ಘಾಟನೆ ಭಾರತದ ಹಬ್ಬ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಸಮೀಪದ ಹನಿ ಡ್ಯೂ ರೆಸಾರ್ಟ್ ನಲ್ಲಿ ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರು, ಮುಖಂಡರೊಂದಿಗೆ ವಾಸ್ತವ್ಯ ಹೂಡಿ ಗುರುವಾರ ಬೆಂಗಳೂರಿಗೆ ತೆರಳುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.ನಿಜವಾದ ರಾಮರಾಜ್ಯ ಎಂಬ ಜನಾಭಿಪ್ರಾಯಕ್ಕೆ ನಾನೂ ಧನಿಗೂಡಿಸುತ್ತೇನೆ ಎಂದ ಅವರು, ರಾಮಮಂದಿರ ನಿರ್ಮಾಣ ದೇಶದ ಜನರ ನಿರೀಕ್ಷೆಯಾಗಿತ್ತು ಎಂದು ಹೇಳಿದರು.
ಸಂಕ್ರಾಂತಿ ನಂತರ ಸಿಹಿ ಸುದ್ದಿ: ರಾಜ್ಯದಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಎಚ್. ಡಿ, ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಜೊತೆಗಿನ ಮೈತ್ರಿಗಿಂತ ಬಿಜೆಪಿ ಜೊತೆ ಮೈತ್ರಿಗೆ ಅಜಗಜಾಂತರ ವ್ಯತ್ಯಾಸ ಇದೆ ಎಂದು ಹೇಳಿದರು.
ಸಂಕ್ರಾಂತಿ ನಂತರ ಮೈತ್ರಿಯ ಸಿಹಿ ಸುದ್ದಿಗಳು ಶುರುವಾಗಲಿದೆ ಎಂದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತ ಸ್ಪರ್ಧಿಸಿದರೂ ಗೆಲ್ಲುವ ಸಾಧ್ಯತೆ ಇದೆ. ಆದರೆ, ಕಳೆದ ಬಾರಿ ಕಾಂಗ್ರೆಸ್ ನಮಗೆ ಕೇವಲ 2-3 ಪರ್ಸೆಂಟ್ ಮಾತ್ರ ಸಹಕಾರ ನೀಡಿತ್ತು ಎಂದು ಆರೋಪಿಸಿದರು.
ಸುಮಲತಾ ಸ್ಪರ್ಧೆ ಬಗ್ಗೆ ಕೇಳಿದಾಗ ಬಿಜೆಪಿ ಜೊತೆಗಿನ ಹೊಂದಾಣಿಕೆ ಮುಗಿದ ಮೇಲೆ ಚರ್ಚೆ, ತೀರ್ಮಾನ ಆಗಲಿದೆ ಎಂದು ಉತ್ತರಿಸಿದರು.