ಕನ್ನಡಪ್ರಭ ವಾರ್ತೆ ಸಿಂದಗಿ
ಪಟ್ಟಣದ ಕಲಕೇರಿ ರಸ್ತೆಯಲ್ಲಿನ ಎಲೈಟ್ ವಿಜ್ಞಾನ ಪದವಿ ಪೂರ್ವ ಮತ್ತು ಎಲೈಟ್ ಬಾಲಕಿಯರ ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ಭಾಗದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಯೋಗ್ಯ ಸಂಸ್ಕಾರ ನೀಡುವ ಉದ್ದೇಶದಿಂದ ಎಲೈಟ್ ಶಿಕ್ಷಣ ಸಂಸ್ಥೆಯ ಕೊಡುಗೆ, ದೂರದೃಷ್ಟಿಗೆ ನಾವೆಲ್ಲ ಹೆಮ್ಮೆ ಪಡಬೇಕು. ಕೇವಲ 10 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಈ ಸಂಸ್ಥೆಯು, ತನ್ನ ಗುಣಾತ್ಮಕ ಶಿಕ್ಷಣದಿಂದ ಪ್ರಸ್ತುತ 2000 ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದೆ. ಇದೇನು ಸಾಮಾನ್ಯ ಮಾತಲ್ಲ. ಸಂಸ್ಥೆಯನ್ನು ಕಟ್ಟುವುದು ಸುಲಭ. ಆದರೆ, ಅದನ್ನು ಬೆಳೆಸಿ ಎಲ್ಲ ಮೂಲಸೌಕರ್ಯಗಳನ್ನು ಕೊಡುವುದೇ ದೊಡ್ಡ ಸವಾಲು ಎಂದರು.ಈ ಸಂಸ್ಥೆ ಈಗ ಉತ್ತರ ಕರ್ನಾಟಕದಲ್ಲಿಯೇ ಹೆಮ್ಮರವಾಗಿ ಬೆಳೆದಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ಮಕ್ಕಳ ಹಿತದೃಷ್ಟಿಯಿಂದ ಅವರ ಕಲಿಕೆಗೆ ಪ್ರೇರಣೆಯಾಗಲು ಸರ್ಕಾರದಿಂದ ₹25 ಲಕ್ಷ ಅನುದಾನ ನೀಡಲು ಮುಂದಾಗುತ್ತೇನೆ ಎಂದು ಭರವಸೆ ನೀಡಿದ ಅವರು, ವಿಪ ಮಾಜಿ ಸದಸ್ಯ ಅರುಣ ಶಹಾಪೂರ ಅವರು ಸಿಂದಗಿ ಅಭಿವೃದ್ಧಿಗೆ, ಅನೇಕ ಶಾಶ್ವತ ಯೋಜನೆಗಳ ನಿರ್ಮಾಣಕ್ಕೆ ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳನ್ನು ವಿನಮ್ರವಾಗಿ ಸ್ವೀಕರಿಸಿ, ಆದಷ್ಟು ಬೇಗ ನಗರಕ್ಕೆಅತಿ ಅವಶ್ಯ ಇರುವ ಶಾಶ್ವತ ಸೌಲಭ್ಯಗಳನ್ನು ಸರ್ಕಾರದಿಂದ ಮಂಜೂರು ಮಾಡಲು ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ಸಿಂದಗಿ ನಗರ ಶಿಕ್ಷಣ ಕಾಶಿಯಾಗಿ ಬೆಳೆಯುತ್ತಿರುವುದು ಸಂತಸ. ಎಲೈಟ್ ಶಿಕ್ಷಣ ಸಂಸ್ಥೆ ಭ್ರಾತೃತ್ವ ಮತ್ತು ಭಾವೈಕ್ಯತೆಯಿಂದ ಕೂಡಿರುವ ಅಪರೂಪದ ಸಂಸ್ಥೆ. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುವುದು ಕಷ್ಟ ಸಾಧ್ಯ. ಅಂತಹ ಕಾಲ ಘಟ್ಟದಲ್ಲಿ ಎಲೈಟ್ ಎಲ್ಲ ರೀತಿಯ ಸೌಲಭ್ಯಗಳನ್ನು ಮಕ್ಕಳಿಗೆ ನೀಡಿ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಇಂದು ಮಕ್ಕಳಿಗೆ ಶಿಕ್ಷಣದ ಉತ್ತಮ ವ್ಯವಸ್ಥೆ ನೀಡುವುದು ಎಷ್ಟು ಮುಖ್ಯವಾಗಿದೆಯೋ ಅಷ್ಟೇ ಶಿಕ್ಷಣ ಸಂಸ್ಥೆಗಳನ್ನು ಪಾಲನೆ ಪೋಷಣೆ ಮಾಡುವುದು ಮುಖ್ಯವಾಗಿದೆ. ನಗರದಲ್ಲಿ ಈ ರೀತಿಯ ಶಿಕ್ಷಣ ಸಂಸ್ಥೆ ನಿರ್ಮಾಣವಾಗಿ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ನೆರವಾಗಿರುವುದು ಶ್ಲಾಘನೀಯ ಎಂದರು.ಎಲೈಟ್ ಶಿಕ್ಷಣ ಸ್ಥಂಸ್ಥೆಯ ಕಾರ್ಯದರ್ಶಿ ಮಹಿಬೂಬ್ ಅಸಂತಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಸಂಸ್ಥೆಯನ್ನು ಕಟ್ಟಲು ಮೊದಲು ಪ್ರೇರಣಾದಾಯಕರು ದಿ.ಎಚ್.ಟಿ.ಕುಲಕರ್ಣಿ ಗುರುಗಳು ಮತ್ತು ನನ್ನ ತಂದೆ ದಿ.ಮಲಿಕಪಾಷಾ ಅಸಂತಾಪೂರ ಅವರು. ಮುಂದಿನ 10 ವರ್ಷಗಳಲ್ಲಿ ಈ ಸಂಸ್ಥೆ ಅಡಿಯಲ್ಲಿ ಅನೇಕ ರೀತಿಯ ಕೋರ್ಸ್‌ಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ ಎಂದರು.ಈ ವೇಳೆ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎ.ಉಪ್ಪಾರ, ತಹಸೀಲ್ದಾರ್ ಕರೆಪ್ಪ ಬೆಳ್ಳಿ, ಬಿಇಒ ವಿ.ಎಸ್.ಆಲಗೂರ, ಮಹಮ್ಮದ್ ಪಟೇಲ ಬಿರಾದಾರ, ಪಿಎಸೈ ಶ್ರೀಕಾಂತ ಕಾಂಬಳೆ, ಸಂಗನಗೌಡ ಪಾಟೀಲ ಕೆರುಟಗಿ, ಮುಸ್ತಾಫ್ ಅಸಂತಾಪೂರ, ಐ.ಎ.ಜುಮನಾಳ, ಟಿ.ಎಂ.ಕೆಂಭಾವಿ ಸೇರಿದಂತೆ ಇತರರು ಇದ್ದರು. ಶಿಕ್ಷಕ ಸಿದ್ದಲಿಂಗ ಚೌಧರಿ ನಿರೂಪಿಸಿ, ವಂದಿಸಿದರು.