ಇಳಕಲ್ಲನ ವಿಜಯಮಹಾಂತೇಶ್ವರ ಸಂಸ್ಥಾನಮಠದ ಡಾ.ಗುರುಮಹಾಂತ ಸ್ವಾಮಿಗಳನ್ನು ರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಗೌರವ ಸಲಹೆಗಾರರಾಗಿ ಗೌರವಪೂರ್ವಕವಾಗಿ ನೇಮಕ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಗುರಿ ಹಾಗೂ ಧ್ಯೇಯೋದ್ದೇಶಗಳನ್ನು ಪರಿಣಾಮಕಾರಿಯಾಗಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಸಮಾಜಮುಖಿ ಚಿಂತಕರು, ಅನುಭವಿಗಳ ಮಾರ್ಗದರ್ಶನ ಮತ್ತು ಸಹಕಾರ ಅತ್ಯಗತ್ಯವಾಗಿದೆ. ಈ ಹಿನ್ನೆಲೆ ಇಳಕಲ್ಲನ ವಿಜಯಮಹಾಂತೇಶ್ವರ ಸಂಸ್ಥಾನಮಠದ ಡಾ.ಗುರುಮಹಾಂತ ಸ್ವಾಮಿಗಳನ್ನು ರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಗೌರವ ಸಲಹೆಗಾರರಾಗಿ ಗೌರವಪೂರ್ವಕವಾಗಿ ನೇಮಕ ಮಾಡಲಾಗಿದೆ ಎಂದು ಮಂಡಳಿ ಅಧ್ಯಕ್ಷರಾದ ಶರಣಪ್ಪ ಸಲಾದಪುರ ತಿಳಿಸಿದ್ದಾರೆ.

ಚಿತ್ತರಗಿಯಲ್ಲಿ ಜರುಗಿದ ಪರಮತಪಸ್ವಿ ಲಿಂ.ವಿಜಯಮಹಾಂತ ಶಿವಯೋಗಿಗಳ 115ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣದ ಮಹದಾಶಯದೊಂದಿಗೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಡಾ.ಗುರುಮಹಾಂತ ಸ್ವಾಮಿಗಳು ನೀಡುತ್ತಿರುವ ಅಮೂಲ್ಯ ಸಲಹೆ, ಮಾರ್ಗದರ್ಶನ ಹಾಗೂ ಸಹಕಾರಕ್ಕೆ ಮಂಡಳಿ ಕೃತಜ್ಞವಾಗಿದೆ. ಮಹಾತ್ಮ ಗಾಂಧೀಜಿಯವರ ಗ್ರಾಮಸ್ವರಾಜ್ಯ ಮತ್ತು ವ್ಯಸನಮುಕ್ತ ಸಮಾಜದ ಪರಿಕಲ್ಪನೆಗೆ ಪೂರಕವಾಗಿ ಸ್ವಾಮೀಜಿಯವರು ಸಮಾಜಮುಖಿಯಾಗಿ ಸಲ್ಲಿಸುತ್ತಿರುವ ಸೇವೆ ಅತ್ಯಂತ ಸ್ಫೂರ್ತಿದಾಯಕವಾಗಿದೆ. ಇದೇ ಆಶಯ ಹಾಗೂ ಧ್ಯೇಯೋದ್ದೇಶ ಹೊಂದಿರುವ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಗೆ ಅವರ ಮಾರ್ಗದರ್ಶನ ಮತ್ತಷ್ಟು ಬಲ ನೀಡಲಿದೆ ಎಂದು ಶರಣಪ್ಪ ಸಲಾದಪುರ ತಿಳಿಸಿದರು.

ಸಮಾಜದಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದು, ಯುವಜನರನ್ನು ವ್ಯಸನದಿಂದ ದೂರವಿಡುವುದು ಹಾಗೂ ಆರೋಗ್ಯಕರ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ಜನಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಡಾ. ಗುರುಮಹಾಂತ ಸ್ವಾಮಿಗಳ ಮಾರ್ಗದರ್ಶನ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಮಂಡಳಿಯ ಕಾರ್ಯದರ್ಶಿ ಪಿ. ಕೌಸಲ್ಯ, ಕಾನೂನು ಸಲಹೆಗಾರರಾದ ಎಚ್.ಬಿ. ವೆಂಟೇಶ, ನಂದೀಶ ಮತ್ತಿತರರು ಉಪಸ್ಥಿತರಿದ್ದರು.