ಬರಗಾಲದ ಈ ಸಂದರ್ಭದಲ್ಲಿ ರೈತರಿಗೆ ನೀರಿನ ಸೌಲಭ್ಯ ಕಲ್ಪಿಸಿ ಅವರ ಸಂಕಷ್ಟಕ್ಕೆ ನೆರವಾಗುವುದು ಸರ್ಕಾರದ ಜವಾಬ್ದಾರಿ. ಹೀಗಾಗಿ ನಾಗರಬೆಟ್ಟ ಏತ ನೀರಾವರಿ ಯೋಜನೆಯಡಿ ಕಾಲುವೆ ಮೂಲಕ ನೀರು ಪೂರೈಸಲು ಯೋಜನೆ ರೂಪಿಸಲಾಗಿದ್ದು, ಕೆಬಿಜೆಎನ್ಎಲ್ ಅಧಿಕಾರಿಗಳು ಯಾವುದೇ ವಿಳಂಬ ಮಾಡದೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಕೆಎಸ್ಡಿಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ನಾಲತವಾಡ
ಬರಗಾಲದ ಈ ಸಂದರ್ಭದಲ್ಲಿ ರೈತರಿಗೆ ನೀರಿನ ಸೌಲಭ್ಯ ಕಲ್ಪಿಸಿ ಅವರ ಸಂಕಷ್ಟಕ್ಕೆ ನೆರವಾಗುವುದು ಸರ್ಕಾರದ ಜವಾಬ್ದಾರಿ. ಹೀಗಾಗಿ ನಾಗರಬೆಟ್ಟ ಏತ ನೀರಾವರಿ ಯೋಜನೆಯಡಿ ಕಾಲುವೆ ಮೂಲಕ ನೀರು ಪೂರೈಸಲು ಯೋಜನೆ ರೂಪಿಸಲಾಗಿದ್ದು, ಕೆಬಿಜೆಎನ್ಎಲ್ ಅಧಿಕಾರಿಗಳು ಯಾವುದೇ ವಿಳಂಬ ಮಾಡದೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಕೆಎಸ್ಡಿಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಮೀಪದ ನಾಗರಬೆಟ್ಟದ ಪರಮಾನಂದ ಬೆಟ್ಟದ ದೇವಸ್ಥಾನದಲ್ಲಿ ಮಂಗಳವಾರ ನಡೆದ ರೈತರ ಸಭೆಯಲ್ಲಿ ಮಾತನಾಡಿದರು. ಇದೆ ವೇಳೆ ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಲ್ಲಿ ಅಧಿಕಾರಿಗಳು ತೋರುತ್ತಿರುವ ವಿಳಂಬಕ್ಕೂ ತೀವ್ರ ಕಿಡಿಕಾರಿದ ಶಾಸಕರು, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ಪ್ರಾಯೋಗಿಕ ನೀರು ಹರಿಸುವ ಸಂದರ್ಭದಲ್ಲಿ ಹಲವು ಕಡೆ ಪೈಪ್ಲೈನ್ಗಳಲ್ಲಿ ಸೋರಿಕೆ ಕಂಡುಬಂದಿರುವ ಬಗ್ಗೆ ರೈತರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಸೋರಿಕೆ ಇರುವ ಸ್ಥಳಗಳನ್ನು ಗುರುತಿಸಿ ದುರಸ್ತಿ ಮಾಡಬೇಕು. ಬಳಿಕ ಮತ್ತೊಮ್ಮೆ ನೀರು ಹರಿಸಿ ಸಮರ್ಪಕವಾಗಿ ಪರಿಶೀಲನೆ ನಡೆಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಅವಾರ್ಡ್ ಪ್ರತಿ ನೀಡಲು ತಾಕೀತು:
ಕಾಲುವೆ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡಿರುವ ಹಲವು ರೈತರಿಗೆ ಇದುವರೆಗೂ ಪರಿಹಾರಕ್ಕೆ ಸಂಬಂಧಿಸಿದ ಅವಾರ್ಡ್ ಪ್ರತಿಗಳನ್ನು ನೀಡಿಲ್ಲ ಎಂಬ ವಿಷಯ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಈ ಕುರಿತು ರೈತರು ಅಸಮಾಧಾನ ವ್ಯಕ್ತಪಡಿಸಿದಾಗ, ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಮೀನು ಕಳೆದುಕೊಂಡ ಎಲ್ಲ ರೈತರಿಗೆ ತಕ್ಷಣವೇ ಅವಾರ್ಡ್ ಪ್ರತಿಗಳನ್ನು ವಿತರಿಸುವಂತೆ ಖಡಕ್ ಸೂಚನೆ ನೀಡಿದರು.ಸಭೆಯಲ್ಲಿ ರೈತರು ಎಸ್ಎಲ್ಒ (ವಿಶೇಷ ಭೂಸ್ವಾಧೀನ ಕಚೇರಿ) ಕಚೇರಿಯ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅವಾರ್ಡ್ ಪ್ರತಿ ಪಡೆಯಲು ಕಚೇರಿಗೆ ಅಲೆದಾಡಿ ಸಾಕಾಗಿದೆ. ಪ್ರತಿಬಾರಿ ಅಧಿಕಾರಿಗಳು ಒಂದೊಂದು ದಾಖಲೆ ತರುವಂತೆ ಸೂಚಿಸುತ್ತಾರೆ. ಕೃಷಿ ಕೆಲಸಗಳನ್ನು ಬಿಟ್ಟು ಕಚೇರಿಗೆ ಅಲೆದಾಡಿದರೂ ಕೆಲಸ ಮಾತ್ರ ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಒಟ್ಟು 87 ರೈತರು ಅವಾರ್ಡ್ಗಾಗಿ ಅರ್ಜಿ ಸಲ್ಲಿಸಿದ್ದು, ಈವರೆಗೆ ಕೇವಲ 11 ರೈತರಿಗೆ ಮಾತ್ರ ಅವಾರ್ಡ್ ಪ್ರತಿ ಸಿದ್ಧಪಡಿಸಲಾಗಿದೆ. ಉಳಿದ ರೈತರು ಇನ್ನೂ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ ಎಂದು ಶಾಸಕರ ಗಮನಕ್ಕೆ ತಂದರು.ಇದರಿಂದ ಅಸಮಾಧಾನಗೊಂಡ ಶಾಸಕ ನಾಡಗೌಡರು, ರೈತರು ಪ್ರತಿಯೊಂದು ಕೆಲಸಕ್ಕೂ ಆಲಮಟ್ಟಿಗೆ ಎಷ್ಟು ಬಾರಿ ಅಲೆದಾಡಬೇಕು? ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ವಿಳಂಬ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಇದಕ್ಕೆ ಪರಿಹಾರವಾಗಿ ಮುದ್ದೇಬಿಹಾಳದ ಕಚೇರಿಯಲ್ಲಿಯೇ ಸಂಬಂಧಿಸಿದ ಅಧಿಕಾರಿಗಳು ರೈತರ ದಾಖಲೆಗಳನ್ನು ಸಂಗ್ರಹಿಸಿ, ಆಲಮಟ್ಟಿಯ ಕಚೇರಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ರೈತರಿಗೆ ಅನಗತ್ಯ ಅಲೆದಾಟ ತಪ್ಪಿಸಲು ನಿರ್ದಿಷ್ಟ ದಿನ ನಿಗದಿಪಡಿಸಿ, ಆ ದಿನ ರೈತರು ಮುದ್ದೇಬಿಹಾಳಕ್ಕೆ ಬಂದು ದಾಖಲೆಗಳನ್ನು ಸಲ್ಲಿಸುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು. ಶಾಸಕರ ಸೂಚನೆ ಮೇರೆಗೆ ಅಧಿಕಾರಿಗಳು ಪ್ರತಿ ಶುಕ್ರವಾರ ಮುದ್ದೇಬಿಹಾಳದ ಕಚೇರಿಯಲ್ಲಿ ರೈತರಿಂದ ಅಗತ್ಯ ದಾಖಲೆಗಳನ್ನು ಸ್ವೀಕರಿಸಿ ಮುಂದಿನ ಪ್ರಕ್ರಿಯೆಗೆ ಕಳುಹಿಸುವ ವ್ಯವಸ್ಥೆ ಕಲ್ಪಿಸಲು ಒಪ್ಪಿಕೊಂಡರು.ಕಾಲುವೆ ಕಾಮಗಾರಿ ಸ್ಥಗಿತ:ನಾಲತವಾಡದಲ್ಲಿ ಇಬ್ಬರು ರೈತರಿಗೆ ಜಮೀನಿನ ಅವಾರ್ಡ್ ನೀಡದ ಕಾರಣ ಕಾಲುವೆ ಅಗೆಯುವ ಕಾಮಗಾರಿಗೆ ಅವಕಾಶ ನೀಡುತ್ತಿಲ್ಲ. ಈ ಹಿಂದೆ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸುವ ಪ್ರಯತ್ನ ನಡೆಸಿದ್ದರೂ, ಸಂಬಂಧಿಸಿದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಮಸ್ಯೆ ಮತ್ತೆ ನನೆಗುದಿಗೆ ಬಿದ್ದಿದೆ ಎಂದು ರೈತರು ಅಸಮಾಧಾನ ಹೊರಹಾಕಿದರು.ನಾಲತವಾಡ ಭಾಗದಲ್ಲಿ ಕಾಲುವೆ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ನಾಗರಬೆಟ್ಟ ಏತ ನೀರಾವರಿ ಯೋಜನೆಯ ನೀರು ಟೇಲ್ಎಂಡ್ವರೆಗೆ ತಲುಪುತ್ತಿಲ್ಲ. ಇದರಿಂದ ಕೊನೆ ಭಾಗದ ಹಲವಾರು ರೈತರ ಜಮೀನುಗಳಿಗೆ ನೀರು ಹರಿಯದೆ ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗುವಂತಾಗಿದೆ. ಇಬ್ಬರು ರೈತರ ಅವಾರ್ಡ್ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ, ಸ್ಥಗಿತಗೊಂಡಿರುವ ಕಾಲುವೆ ಕಾಮಗಾರಿಯನ್ನು ಆರಂಭಿಸುವ ಮೂಲಕ ಕೊನೆಯ ಭಾಗದ ರೈತರಿಗೂ ನೀರು ತಲುಪುವಂತೆ ಮಾಡಬೇಕು ಎಂದು ರೈತರು ಶಾಸಕರಲ್ಲಿ ಮನವಿ ಮಾಡಿದರು.ರೈತರ ಮನವಿಗೆ ಸ್ಪಂದಿಸಿದ ಶಾಸಕ ನಾಡಗೌಡರು, ಈ ಸಮಸ್ಯೆಗೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು. ರೈತರಿಗೆ ಅನ್ಯಾಯವಾಗದಂತೆ ಅವಾರ್ಡ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಲುವೆ ಕಾಮಗಾರಿಗೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಬೇಕು. ಯಾವುದೇ ಕಾರಣಕ್ಕೂ ಯೋಜನೆಯ ನೀರು ಟೇಲ್ಎಂಡ್ವರೆಗೆ ತಲುಪುವುದಕ್ಕೆ ತೊಂದರೆಯಾಗಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಇದೇ ವೇಳೆ ನಾಗರಬೆಟ್ಟ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಗುತ್ತಿಗೆದಾರರು ಕೂಡಲೇ ಪೂರ್ಣಗೊಳಿಸಬೇಕು. ರೈತರಿಗೆ ನೀರು ತಲುಪುವಂತೆ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಯೋಜನೆಯನ್ನು ಶೀಘ್ರದಲ್ಲೇ ಕಾರ್ಯಗತಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಸಭೆಯಲ್ಲಿ ಕೆಬಿಜೆಎನ್ಎಲ್ ಸಿ.ಇ.ಬಸವರಾಜ ಪಾಟೀಲ, ರೈತ ಮುಖಂಡರಾದ ಸಿದರೆಡ್ಡಿ, ಎಂ.ಎಸ್.ಪಾಟೀಲ, ಬಿ.ಜಿ.ಮಠ, ಅಮರೇಶ ದೇಶಮುಖ, ಹಣಮಂತ ಕುರಿ, ಮಹಾಂತಯ್ಯ ಮೆನದಾಳಮಠ, ಎಇ ಅಮರೇಗೌಡ ಮಾಲಿಪಾಟೀಲ, ಎಇಇ ಶಿವಾಸಿ ಬಿರಾದಾರ, ಎಸ್ಎಲ್ಒ ಅಧಿಕಾರಿ ಎಸ್.ಪಿ.ನಾಗಠಾಣ, ಜೆಇ ಜಾನು ನಾಯಕ್ ಸೇರಿದಂತೆ ನಾಗರಬೆಟ್ಟ ಹಾಗೂ ನಾಲತವಾಡ ಭಾಗದ ನೂರಾರು ರೈತರು ಉಪಸ್ಥಿತರಿದ್ದರು.