- ಮಹರ್ಷಿ ವಾಲ್ಮೀಕಿ ಜಯಂತಿ । ಶ್ರೀರಾಮ ಮಂದಿರ ಸಮೀಪವೇ ವಾಲ್ಮೀಕಿ ದೇಗುಲ ನಿರ್ಮಾಣವಾಗಲಿ: ಸಚಿವ- - -
ಮಹರ್ಷಿ ವಾಲ್ಮೀಕಿ, ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧಿ ಸೇರಿದಂತೆ ಮಹನೀಯರ ಜಯಂತಿಗಳನ್ನು ಆಚರಿಸುವುದು ಅವರ ವಿಚಾರಧಾರೆಗಳನ್ನು ತಿಳಿದುಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಬಾರದು. ಅವರು ತೋರಿದ ಆದರ್ಶದ ಹಾದಿಯಲ್ಲಿ ಪ್ರಾಮಾಣಿಕವಾಗಿ ನಡೆಯಲು ಪ್ರಯತ್ನಿಸಬೇಕು. ಆಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಅರ್ಥ ಮತ್ತು ಗೌರವ ದೊರೆಯುತ್ತದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಹೇಳಿದರು.
ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರಾಮಾಯಣ ಮಹಾಕಾವ್ಯವನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ಮಹರ್ಷಿ ವಾಲ್ಮೀಕಿ ಅವರು ಶ್ರೀರಾಮ, ಸೀತೆ ಹಾಗೂ ಹನುಮಂತನಂತಹ ಮಹಾನ್ ಪಾತ್ರಗಳನ್ನು ಪರಿಚಯಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿರುವಂತೆಯೇ ಅದರ ಸಮೀಪದಲ್ಲೇ ಮಹರ್ಷಿ ವಾಲ್ಮೀಕಿ ಅವರ ದೇವಾಲಯ ನಿರ್ಮಿಸಿ ಗೌರವಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಊರಿನ ರಕ್ಷಣೆಯಲ್ಲಿ ನಾಯಕ ಸಮುದಾಯ ಹಾಗೂ ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡುವಲ್ಲಿ ಮಾದಿಗ ಸಮುದಾಯದ ಕೊಡುಗೆ ಮಹತ್ವದ್ದಾಗಿದೆ. ಎರಡೂ ಸಮುದಾಯಗಳು ಸೋದರರಂತೆ ಬದುಕಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಕಾನೂನು ತೊಡಕುಗಳನ್ನು ನಿವಾರಿಸಲು ಸರ್ಕಾರ ಬದ್ಧವಾಗಿದೆ. ಶೇ.50ರ ಮೀಸಲಾತಿ ಮಿತಿಗೆ ಸಂಬಂಧಿಸಿದ ಕಾನೂನಾತ್ಮಕ ಅಡೆತಡೆಗಳನ್ನು ನಿವಾರಿಸಿ, ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಹಿರಿಯ ಸಚಿವರು ಚರ್ಚಿಸಿದ್ದಾರೆ. ಈ ಸಂಬಂಧ ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವ ಕುರಿತು ಸರ್ವಪಕ್ಷ ನಾಯಕರೊಂದಿಗೆ ಕೇಂದ್ರ ಗೃಹ ಸಚಿವರು ಹಾಗೂ ಪ್ರಧಾನಮಂತ್ರಿ ಅವರನ್ನು ಶೀಘ್ರದಲ್ಲೇ ಭೇಟಿ ಮಾಡಲಾಗುವುದು ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಸಮುದಾಯ ಬಸವಣ್ಣನವರ ಹೆಸರಿನಲ್ಲಿ, ಸಾಧು ವೀರಶೈವ ಸಮಾಜ ವಿಶ್ವಬಂಧು ಮರುಳಸಿದ್ದರ ಹೆಸರಿನಲ್ಲಿ, ಪಂಚಮಸಾಲಿ ಸಮುದಾಯ ವೀರರಾಣಿ ಕಿತ್ತೂರು ಚೆನ್ನಮ್ಮನ ಹೆಸರಿನಲ್ಲಿ, ಹಾಲುಮತ ಕುರುಬ ಸಮುದಾಯ ಭಕ್ತ ಕನಕದಾಸರ ಹೆಸರಿನಲ್ಲಿ ಹಾಗೂ ಪರಿಶಿಷ್ಟ ಜಾತಿಯ ವಿವಿಧ ಸಮುದಾಯಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಸಂಘಟನೆ ಆಗುತ್ತಿವೆ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ ಅವರು ತಮ್ಮ ಜೀವನದಲ್ಲಿ ಮಹತ್ತರ ಪರಿವರ್ತನೆ ಹೊಂದಿ ತಪಸ್ವಿಯಾಗಿ ರಾಮಾಯಣ ಮಹಾಕಾವ್ಯ ರಚಿಸಿ, ಮಾನವಕುಲಕ್ಕೆ ಮಾರ್ಗದರ್ಶನ ನೀಡಿದರು. ಕರ್ನಾಟಕ ಸರ್ಕಾರವು ವಾಲ್ಮೀಕಿ ಜಯಂತಿಯನ್ನು ಸಾರ್ವಜನಿಕವಾಗಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಮಹತ್ವದ ಸಂಗತಿ ಎಂದರು.
(ಬಾಕ್ಸ್)
ರಾಜ್ಯದಲ್ಲಿ ಖಾಲಿ ಇರುವ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಅಭ್ಯರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಗೃಹ ಸಚಿವ ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ರಚಿಸಿರುವ ಉಪಸಮಿತಿಯಲ್ಲಿ ರಘುಮೂರ್ತಿ, ಮುನಿಯಪ್ಪ ಹಾಗೂ ಸತೀಶ್ ಜಾರಕಿಹೊಳಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಚಿವ ಬಸವಂತಪ್ಪ ಹೇಳಿದರು.
ಕಳೆದ ವಾರ ನಡೆದ ಮೊದಲ ಹಂತದ ಸಭೆಯಲ್ಲಿ 2012ರಿಂದ ಬಾಕಿ ಉಳಿದಿರುವ ಸಾವಿರಾರು ಬ್ಯಾಕ್ಲಾಗ್ ಹುದ್ದೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ. ಪ್ರಸಕ್ತ ವರ್ಷದವರೆಗಿನ ಬಾಕಿ ಹುದ್ದೆಗಳ ಮಾಹಿತಿಯನ್ನು ಒಟ್ಟುಗೂಡಿಸಿ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.ಹಿಂದಿನ ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ ಕೆಲವು ಲೋಪದೋಷಗಳು ಕಂಡುಬಂದಿದ್ದರಿಂದ ಸೂಕ್ತ ಸ್ಪಷ್ಟನೆ ಪಡೆಯಲಾಗಿದೆ. ಮುಂದಿನ ಸಭೆಯಲ್ಲಿ ಸಮಗ್ರ ಹಾಗೂ ನಿಖರ ಮಾಹಿತಿ ಪಡೆದುಕೊಳ್ಳಲಾಗುವುದು. ಸರ್ಕಾರಿ ಇಲಾಖೆಗಳ ಜತೆಗೆ ಸಹಕಾರ ವಲಯ ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಲ್ಲಿ ಖಾಲಿ ಇರುವ ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುವುದು. ಅಲ್ಲಿ ಹುದ್ದೆಗಳು ಭರ್ತಿಯಾಗದಿದ್ದರೆ ಸರ್ಕಾರದ ಮೂಲಕ ಭರ್ತಿ ಮಾಡುವಂತೆ ಒತ್ತಡ ತರಲಾಗುವುದು ಎಂದು ತಿಳಿಸಿದರು. ಮುಖ್ಯಮಂತ್ರಿಗಳು ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಿದ್ದು, ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಸಮಸ್ಯೆಗೆ ಅಂತಿಮ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದರು.- - -
-27ಕೆಡಿವಿಜಿ40.ಜೆಪಿಜಿ:ದಾವಣಗೆರೆಯಲ್ಲಿ ಮಂಗಳವಾರ ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಸಚಿವ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು.