ಚನ್ನಪಟ್ಟಣ: ಸಿನಿಮಾ ನಟ ಧನ್ವೀರ್ ಸಚಿವ ಜಮೀರ್ ಅಹಮ್ಮದ್ ಖಾನ್ ಪುತ್ರ ನಟ ಝೈದ್ ಖಾನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಜಮೀರ್ ಅಹಮದ್ ಖಾನ್ ಅಭಿಮಾನಿ ಬಳಗದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಮುಖಂಡ ತೌಸಿಫ್ನ ಮಾತನಾಡಿ, ನಟ ಧನ್ವೀರ್ ತಮ್ಮ ವೈಯಕ್ತಿಕ ಲಾಭಕ್ಕಾಗಿ ಝೈದ್ ಖಾನ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೂರವಾಣಿ ಮೂಲಕ ಅವಾಚ್ಯ ಪದಗಳನ್ನು ಬಳಸಿ ಮತ್ತು ಅಪಮಾನಕರವಾಗಿ ಮಾತುಗಳಾಡಿರುವ ಅವರು ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕ ಜೀವನದಲ್ಲಿರುವ ಕಲಾವಿದರು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಮನಬಂದಂತೆ ಮಾತನಾಡಿದರೆ ಮುಂದೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಧ್ವನೀರ್ ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿ, ನಟನಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಮತೀನ್, ಕಾಂಗ್ರೆಸ್ ತಾಲೂಕು ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಇಬ್ರಾಹಿಂ, ಸುಹೇಲ್ ಹಾಗೂ ಅಭಿಮಾನಿ ಬಳಗದ ಕಾರ್ಯಕರ್ತರು ಹಾಜರಿದ್ದರು.