ಕಾರ್ಯಕ್ರಮವೊಂದರ ಊಟ ಸೇವಿಸಿ ಓರ್ವ ವಿದ್ಯಾರ್ಥಿ ಸಾವು: 29 ಮಂದಿ ಅಸ್ವಸ್ಥ

KannadaprabhaNewsNetwork |  
Published : Mar 17, 2025, 12:31 AM IST
16ಕೆಎಂಎನ್ ಡಿ28 | Kannada Prabha

ಸಾರಾಂಶ

ಕಾರ್ಯಕ್ರಮವೊಂದರಲ್ಲಿ ಊಟ ಸೇವಿಸಿ ಗೋಕುಲ ವಿದ್ಯಾ ಸಂಸ್ಥೆಯ ವಸತಿ ನಿಲಯದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿ, 29 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ಕಾಗೇಪುರದಲ್ಲಿ ನಡೆದಿದೆ. ಗೋಕುಲ ವಿದ್ಯಾ ಸಂಸ್ಥೆ ವಿದ್ಯಾರ್ಥಿ, ಮೇಘಾಲಯ ರಾಜ್ಯದ ಕಿರ್ಶನ್‌ ಲ್ಯಾಂಗ್‌ (13) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕಾರ್ಯಕ್ರಮವೊಂದರಲ್ಲಿ ಊಟ ಸೇವಿಸಿ ಗೋಕುಲ ವಿದ್ಯಾ ಸಂಸ್ಥೆಯ ವಸತಿ ನಿಲಯದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿ, 29 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಕಾಗೇಪುರದಲ್ಲಿ ನಡೆದಿದೆ.

ಗೋಕುಲ ವಿದ್ಯಾ ಸಂಸ್ಥೆ ವಿದ್ಯಾರ್ಥಿ, ಮೇಘಾಲಯ ರಾಜ್ಯದ ಕಿರ್ಶನ್‌ ಲ್ಯಾಂಗ್‌ (13) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಪಟ್ಟಣದ ಹೊರ ವಲಯದ ಭೂಗತಹಳ್ಳಿ ಸಮೀಪದ ಮದನ್ ಮೋಹನ್ ಸಮುದಾಯ ಭವನದಲ್ಲಿ ಸೇಠು ಸಮುದಾಯವರು ಹೋಳಿ ಹಬ್ಬ ಆಚರಣೆ ಮಾಡಿದ್ದರು. ಹೋಳಿ ಸಂಭ್ರಮದ ಮುಗಿದ ಬಳಿಕ ಉಳಿದ ಊಟವನ್ನು ಪಕ್ಕದಲ್ಲೆ ಇದ್ದ ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಗೆ ನೀಡಲಾಗಿತ್ತು.

ಶುಕ್ರವಾರ ‘ಬಾತು’ ತಿಂದ 30 ವಿದ್ಯಾರ್ಥಿಗಳಿಗೆ ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಸಮೀಪವಿದ್ದ ತಳಗವಾದಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದರು ಎನ್ನಲಾಗಿದೆ. ರಾತ್ರಿ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ವಾಂತಿ ಭೇದಿ ಕಂಡು ಬಂದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಎಲ್ಲಾ ವಿದ್ಯಾರ್ಥಿಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಬೆಳಗ್ಗೆ 8 ಗಂಟೆ ಸಮಯದಲ್ಲಿ ಕೇರ್ಲಾಂಗ್ (14) ಎಂಬ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಸಚಿವರು, ಶಾಸಕರು, ಅಧಿಕಾರಿಗಳು ಭೇಟಿ:

ವಿಷಯ ತಿಳಿದು ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲಾಧಿಕಾರಿ ಡಾ.ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾರ್ ಲೊಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ ಉಮಾ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.

ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ರವಾಣಿಸುವಂತೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಕಾಗೇಪುರದ ಖಾಸಗಿ ಶಿಕ್ಷಣ ಸಂಸ್ಥೆ ವಸತಿ ನಿಲಯಕ್ಕೆ ಸರಬರಾಜು ಆದ ಊಟದಲ್ಲಿ ವ್ಯಾತ್ಯಾಸ ಉಂಟಾಗಿ ಈ ಘಟನೆ ಸಂಭವಿಸಿದೆ. ಶಾಲೆಯಲ್ಲಿ ಆಗಿರುವ ತಪ್ಪಿಗೆ ಶಿಕ್ಷಣ ಇಲಾಖೆ ಮತ್ತು ಸರ್ಕಾರ ಜವಾಬ್ದಾರಿಯುತವಾದ ತೀರ್ಮಾನ ಕೈಗೊಳ್ಳಲಾಗುತ್ತದೆ. ಶಾಲೆಯ ಎಲ್ಲಾ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತದೆ ಎಂದರು.

ತನಿಖೆಗೆ ಮಾಜಿ ಶಾಸಕರ ಆಗ್ರಹ:

ಸಾರ್ವಜನಿಕ ಆಸ್ಪತ್ರೆಗೆ ಮಾಜಿ ಶಾಸಕ ಕೆ.ಅನ್ನದಾನಿ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಊಟ ಎಲ್ಲಿಂದ ಬಂತು. ಅದನ್ನು ಕೊಟ್ಟವರು ಯಾರು ಹಾಗೂ ಶಾಲೆ ವ್ಯವಸ್ಥೆ ಬಗ್ಗೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ವಸತಿ ಶಾಲೆಗೆ ಅನುಮತಿ ಪಡೆದಿಲ್ಲ:

ಕಾಗೇಪುರದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಎಲ್‌ಕೆಜಿಯಿಂದ 8ನೇ ತರಗತಿವರೆಗೆ ಅನುಮತಿ ಪಡೆಯಲಾಗಿತ್ತು. ಶಾಲೆಗಷ್ಟೇ ಅನುಮತಿ ಪಡೆದಿರುವುದು, ವಸತಿ ಶಾಲೆಗೆ ಅನುಮತಿ ಪಡೆದಿಲ್ಲ. 24 ಮೇಘಾಲಯ ರಾಜ್ಯದವರು, 6 ಸ್ಥಳೀಯ ಮಕ್ಕಳು ಆಹಾರ ಸೇವಿಸಿದ್ದಾರೆ ಎಂದರು.

ಶಾಲೆಯಲ್ಲಿ ಮಕ್ಕಳನ್ನು ಇಟ್ಟುಕೊಳ್ಳುವುದಕ್ಕೆ ಅನುಮತಿ ಇಲ್ಲ. ಆದರೂ ಮಕ್ಕಳನ್ನು ಇಲ್ಲಿ ಇಟ್ಟುಕೊಂಡಿರೋದು ತಪ್ಪು. ಅದರಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಅಸ್ವಸ್ಥ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ. ಓರ್ವ ವಿದ್ಯಾರ್ಥಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಗತ್ಯ ಚಿಕಿತ್ಸೆಗೆ ಎಲ್ಲಾ ನೆರವು ನೀಡಲಾಗುವುದು ಎಂದರು.

ಘಟನೆಯಲ್ಲಿ ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅನುಮತಿ ಇಲ್ಲದೇ ಅನಧಿಕೃತವಾಗಿ ಮಕ್ಕಳನ್ನು ಇಟ್ಟುಕೊಂಡಿರೋದು ಕಂಡು ಬಂದಿದೆ. ಮೂಲ ಸೌಕರ್ಯ ಕೂಡ ಇಲ್ಲ. ಈ ಬಗ್ಗೆ ಶಾಲಾ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಫುಡ್ ತಯಾರು ಮಾಡಿದ್ದು ಯಾರು, ಯಾರು ಆರ್ಡರ್ ಕೊಟ್ಟಿದ್ದರು ಇದರಲ್ಲಿ ಯಾರ ನಿರ್ಲಕ್ಷ್ಯ ಇದೆ ಎಲ್ಲರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.

ಅನುಮತಿ ಮೇರೆಗೆ ಸಂಸ್ಥೆಯಿಂದ ದತ್ತು:

ಗೋಕುಲ ವಿದ್ಯಾಸಂಸ್ಥೆಯ ಲಂಕೇಶ್ ಮಾತನಾಡಿ, ಮೇಘಾಲಯದ 26 ವಿದ್ಯಾರ್ಥಿಗಳನ್ನು ಪೋಷಕರ ಅನುಮತಿ ಮೇರೆಗೆ ದತ್ತು ಪಡೆದು ಗೋಕುಲ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಹುಟ್ಟುಹಬ್ಬ ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಗೆ ಊಟ ಕೊಡುವುದು ರೂಢಿಯಲ್ಲಿತ್ತು. ಅದರಂತೆ ಮದನ್ ಸಮುದಾಯದಲ್ಲಿ ಕಾರ್ಯಕ್ರಮ ನಡೆಸಿ ಇಲ್ಲಿನ ವಿದ್ಯಾರ್ಥಿಗಳಿಗೆ ಊಟ ಕೊಟ್ಟಿದ್ದಾರೆ ಎಂದರು.

ಊಟ ತಿಂದ ವಿದ್ಯಾರ್ಥಿಗಳಿಗೆ ವಾಂತಿ ಪ್ರಾರಂಭವಾಗಿದೆ. ತಕ್ಷಣವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಶಾಲೆಗೆ ಕರೆತರಲಾಗಿತ್ತು. ರಾತ್ರಿ ವಾಂತಿಬೇದಿ ಹೆಚ್ಚಾಗಿದ್ದರಿಂದ ಬೆಳಗ್ಗೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಓರ್ವ ವಿದ್ಯಾರ್ಥಿ ಸಾವನ್ನಪ್ಪಿ ಉಳಿದ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆಂದು ಹೇಳಿದರು.

ಈ ವೇಳೆ ಮನ್ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಪುರಸಭೆ ಉಪಾಧ್ಯಕ್ಷ ಬಸವರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು