ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮೂರು ದಿನಗಳ ಕಾಲ ಸಡಗರದಿಂದ ನಡೆದ ಬಣ್ಣದಾಟ ಶಿಸ್ತುಬದ್ಧವಾಗಿ ಜರುಗಿತು. ಬಣ್ಣದೋಕುಳಿಯಲ್ಲಿ ಮುಂದೆದ್ದ ಬಾಗಲಕೋಟೆ ಜನ ಸರ್ವರಿಗೂ ಪ್ರೀತಿ ಹಂಚಿ ಸಾಮರಸ್ಯ ಮೆರೆದರು. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಅಧಿಕ ಸಂಖ್ಯೆಯಲ್ಲಿ ಜನರ ಪಾಲ್ಗೊಂಡಿದ್ದು ಹೋಳಿ ಹಬ್ಬ ಕಳೆಗಟ್ಟುವಂತೆ ಮಾಡಿತ್ತು.
ಎರಡು ವಾರಗಳಿಂದ ಬಾಗಲಕೋಟೆ ನಗರ ಪ್ರತಿ ಗಲ್ಲಿಗಲ್ಲಿಗಳಲ್ಲಿ ಹಲಗೆ ಸದ್ದು, ಶಹನಾಯಿ ನಿನಾದ ಮೊಳಗಿತು. ಮೂರು ದಿನಗಳ ಬಣ್ಣದಾಟದಲ್ಲಿ ಬಾಗಲಕೋಟೆ ನಗರ ಸಂಪೂರ್ಣ ಬಣ್ಣಮಯವಾಗಿತ್ತು. ಎಲ್ಲಿ ನೋಡಿದರಲ್ಲಿ ಬಣ್ಣಗಳ ಚಿತ್ತಾರ ಮೂಡಿತ್ತು. ನಿತ್ಯ ರಾತ್ರಿ ನಡೆಯುತ್ತಿದ್ದ ಸೋಗಿನ ಬಂಡಿಗಳ ಮೆರವಣಿಗೆ ಬಾಗಲಕೋಟೆ ಹೋಳಿ ವೈಭವ ಸಾಕ್ಷಿಕರಿಸಿತು. ಹೋಳಿ ಹಬ್ಬವನ್ನು ಸಾಂಸ್ಕೃತಿಕವಾಗಿ ಜೀವಂತವಾಗಿರಿಸಲು ಬಾಗಲಕೋಟೆ ಹೋಳಿ ಆಚರಣೆ ಸಮಿತಿ, ನಮ್ಮೂರು ಹಬ್ಬ ತಂಡ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಮ್ಮಿಕೊಂಡಿದ್ದ ರೇನ್ ಡ್ಯಾನ್ಸ್ ಆಧುನಿಕ ಸ್ಪರ್ಶ ನೀಡಿ ಯುವ ಸಮುಹ ಆಕರ್ಷಿಸುವಲ್ಲಿ ಯಶಸ್ವಿಯಾಯಿತು.ಕಾಮದಹನ ಬಳಿಕ ಅದ್ಧೂರಿಯಾಗಿ ಚಾಲನೆ ದೊರೆತಿದ್ದ ಬಣ್ಣದೋಕುಳಿಗೆ ನಗರದ ಪ್ರತಿ ಮನೆ ಮನೆ, ರಸ್ತೆ ಇಕ್ಕೆಲ ಮತ್ತು ಗಲ್ಲಿಗಲ್ಲಿಗಳಲ್ಲಿ ಬಣ್ಣದ ರಂಗು ಕಾಣಿಸಿಕೊಂಡಿತ್ತು. ನಸುಕಿನ ಜಾವ ಹಲಿಗೆ ನಾದ, ಶಹನಾಯಿ ಸ್ವರದೊಂದಿಗೆ ಆರಂಭಗೊಳ್ಳುತ್ತಿದ್ದ ಬಣ್ಣದೋಕುಳಿ ಮಧ್ಯಾಹ್ನದ ವೇಳೆಗೆ ರಂಗು ಪಡೆಯುತ್ತಿತ್ತು. ಯುವಕ-ಯುವತಿಯರು ಸೇರಿದಂತೆ ಸಾವಿರಾರು ಸಂಖ್ಯೆಯ ಜನರು ಕೂಡಿಕೊಂಡು ರಂಗಿನ ಲೋಕದಲ್ಲಿ ಮಿಂದೆದ್ದರು. ಈ ಬಾರಿ ದಿನ ಜರುಗಿದ ಬಣ್ಣದಾಟದಲ್ಲಿ ಜನರು ಬಂಡಿ-ಟ್ರ್ಯಾಕ್ಟರ್‌ನಲ್ಲಿ ನಿಂತು ಎದುರಾಳಿಗಳನ್ನು ಬಣ್ಣದ ನೀರಿನ ಮಜ್ಜನ ಮಾಡಿಸಿದರು. ಬಗೆ ಬಗೆಯ ಬಣ್ಣ ಹಚ್ಚುವುದರ ಜೊತೆಗೆ ಆಕರ್ಷಕ ರೀತಿಯಲ್ಲಿ ಹಲಿಗೆ ಬಾರಿಸಿದ್ದು ರಂಜಿಸಿತು. ಬಾಯಿ ಬಡಿದುಕೊಳ್ಳುವ ಮೂಲಕ ಹೋಳಿ ಹಬ್ಬಕ್ಕೆ ವಿಶೇಷ ಮೆರಗು ನೀಡಿದರು.
-ಅಮರನಾಥ ರೆಡ್ಡಿ ಎಸ್ಪಿಬಾಗಲಕೋಟೆ ಹೋಳಿ ಉತ್ಸವ ಈ ಸಾರಿ ಜನರ ಉತ್ಸಾಹ ಹೆಚ್ಚಾಗಿರುವುದು ಕಂಡು ಬಂದಿತು. ಪ್ರತಿಯೊಂದು ಪೇಟೆಯಲ್ಲಿ ಬಣ್ಣದಾಟ ಸಂತಸದಲ್ಲಿ ತೇಲುವಂತೆ ಮಾಡಿತು. ಬಣ್ಣದ ಬಂಡಿಗಳು ಹಾಗೂ ಸೋಗಿನ ಮೆರವಣಿಗೆ ಆಕರ್ಷಣೀಯವಾಗಿತ್ತು. ಪ್ರತಿ ವರ್ಷವು ಇದೇ ರೀತಿ ಜನರು ಹೋಳಿ ಆಚರಿಸಬೇಕು.
-ಕಳಕಪ್ಪ ಬಾದೋಡಗಿ ಹೋಳಿ ಆಚರಣೆ ಸಮಿತಿ ಅಧ್ಯಕ್ಷ