ಬೆಳೆ ವಿಮೆ ಪಾವತಿಗೆ ಒಂದೇ ವಾರ ಟೈಂ : ರೈತರ ಆಕ್ಷೇಪ!

KannadaprabhaNewsNetwork |  
Published : Jun 28, 2025, 12:18 AM ISTUpdated : Jun 28, 2025, 10:16 AM IST
farmers loan

ಸಾರಾಂಶ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕೆಲ ಬೆಳೆಗಳಿಗೆ ವಿಮೆ ಪಾವತಿ ಮಾಡಲು ತೋಟಗಾರಿಕಾ ಇಲಾಖೆ ಸಾಕಷ್ಟು ಕಾಲಾವಕಾಶ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬೆಳೆಗಾರರು, ಅವಧಿ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕೆಲ ಬೆಳೆಗಳಿಗೆ ವಿಮೆ ಪಾವತಿ ಮಾಡಲು ತೋಟಗಾರಿಕಾ ಇಲಾಖೆ ಸಾಕಷ್ಟು ಕಾಲಾವಕಾಶ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬೆಳೆಗಾರರು, ಅವಧಿ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

2025-26 ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿಗೆ ಸಂಬಂಧಿಸಿ ತೋಟಗಾರಿಕಾ ಇಲಾಖೆ ಜೂ.23 ರಂದು ಆದೇಶ ಹೊರಡಿಸಿದೆ. ಕೆಲ ಜಿಲ್ಲೆಗಳ ಹಲವು ಬೆಳೆಗಳಿಗೆ ವಿಮೆ ಪಾವತಿಸಲು ಜೂ.30 ಕೊನೆಯ ದಿನವಾಗಿರುವುದು ಅನ್ನದಾತರಿಗೆ ಸಂಕಷ್ಟ ಉಂಟು ಮಾಡಿದೆ. ಆದ್ದರಿಂದ ಕಾಲಾವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ದಾವಣಗೆರೆ ಜಿಲ್ಲೆಯಲ್ಲಿ ಅಡಕೆ, ವೀಳ್ಯದೆಲೆ, ಕರಿ ಮೆಣಸು, ದಾಳಿಂಬೆ ಬೆಳೆಗಳಿಗೆ ವಿಮೆ ಮಾಡಿಸಲು ಜೂ.30 ಕೊನೆಯ ದಿನವಾಗಿದೆ. ಹಾಗೆಯೇ, ಉಡುಪಿ ಜಿಲ್ಲೆಯ ಅಡಕೆ, ಕರಿಮೆಣಸು, ಹಾಸನ ಜಿಲ್ಲೆಯ ಅಡಕೆ, ಕರಿಮೆಣಸು, ದಾಳಿಂಬೆ, ತುಮಕೂರು ಜಿಲ್ಲೆಯ ಅಡಕೆ, ಪರಂಗಿ, ದಾಳಿಂಬೆ ಹಾಗೂ ವಿಜಯಪುರ ಜಿಲ್ಲೆಯ ನಿಂಬೆ, ದಾಳಿಂಬೆ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಲು ಜೂ.30 ಕೊನೆಯ ದಿನ.

ಅಕ್ಕಪಕ್ಕದ ಜಿಲ್ಲೆಗೆ ತಾರತಮ್ಯ:

ಮತ್ತೊಂದೆಡೆ, ಅಡಕೆ, ಕರಿಮೆಣಸಿಗೆ ವಿಮೆ ಮಾಡಿಸಲು ಉಡುಪಿ ಜಿಲ್ಲೆಗೆ ಜೂ.30 ಕೊನೆಯ ದಿನ. ಆದರೆ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಗೆ ಜು.30 ರವರೆಗೂ ಕಾಲಾವಕಾಶ ನೀಡಲಾಗಿದೆ. ಈ ಎರಡೂ ಜಿಲ್ಲೆಗಳ ಗಡಿಗಳು ಹೊಂದಿಕೊಂಡಿದ್ದರೂ ಉಡುಪಿ ಜಿಲ್ಲೆಗೆ ಮಾತ್ರ ವಾರ ಅವಕಾಶ ನೀಡಿ ದಕ್ಷಿಣ ಕನ್ನಡಕ್ಕೆ ಬರೋಬ್ಬರಿ 37 ದಿನ ನೀಡಿರುವ ಕಾರಣವಾದರೂ ಏನು ಎಂದು ಬೆಳೆಗಾರರು ಪ್ರಶ್ನಿಸಿದ್ದಾರೆ.

ಬೆಳೆ ವಿಮೆ ಮಾಡಿಸುವ ಸಂಬಂಧ ತೋಟಗಾರಿಕಾ ಇಲಾಖೆ ಜೂ.23 ರಂದು ಆದೇಶ ಹೊರಡಿಸಿದೆ. ಇದು ಗ್ರಾಪಂನಂತಹ ತಳಮಟ್ಟಕ್ಕೆ ತಲುಪಲು ಎರಡ್ಮೂರು ದಿನಗಳಾದರೂ ಬೇಕು. ರೈತರು ವಿಮೆ ಹಣ ಪಾವತಿಸಲು ಬ್ಯಾಂಕ್‌, ಸಾಮಾನ್ಯ ಸೇವಾ ಕೇಂದ್ರ ಅಥವಾ ಕರ್ನಾಟಕ ಒನ್‌ಗಳಿಗೆ ತೆರಳಬೇಕು. ಪರಿಸ್ಥಿತಿ ಹೀಗಿರುವುದರಿಂದ ಸಮಯಾವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬೆಳೆ ವಿಮೆ ಮಾಡಿಸಲು ಜೂ.30 ಕೊನೆಯ ದಿನ ನಿಗದಿಯಾಗಿರುವ ಬೆಳೆಗಳಿಗೆ ಸಂಬಂಧಿಸಿ ಅವಧಿ ವಿಸ್ತರಿಸುವಂತೆ ವಿಮಾ ಕಂಪೆನಿಗಳಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗುವುದು.

-ಡಿ.ಎಸ್‌.ರಮೇಶ್‌, ತೋಟಗಾರಿಕೆ ಇಲಾಖೆ ನಿರ್ದೇಶಕ

PREV
Read more Articles on

Recommended Stories

ವಿದ್ಯಾರ್ಥಿಗಳು ಸರ್ಕಾರಿ ಯೋಜನೆ ಸದುಪಯೋಗ ಪಡೆದುಕೊಳ್ಳಿ
ಗುರು, ಶಿಷ್ಯರದು ಜಗತ್ತಿನ ಶ್ರೇಷ್ಠ ಸಂಬಂಧ