ಧಾರವಾಡ: ವ್ಯಸನ ಪ್ರಕರಣಗಳಲ್ಲಿ ಸಿಕ್ಕಿಬಿದ್ದರೆ ಚಿಕಿತ್ಸೆ ಮತ್ತು ಚೇತರಿಕೆ ಯಾವಾಗಲೂ ಸಾಧ್ಯ. ಪುನರ್ವಸತಿ ಶಿಕ್ಷೆಯಲ್ಲ, ಅದು ಭರವಸೆಯ ಮಾರ್ಗವಾಗಿದೆ ಎಂದು ಡಿಮಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಸಿ., ಹೇಳಿದರು.
ಮಾದಕ ವಸ್ತುಗಳು ವಿಭಿನ್ನ ಜನರಲ್ಲಿದೆ. ಅದು ಶಾಲಾ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ಯುವಕರು,ವೃತ್ತಿಪರರೂ ಆಗಿರಬಹುದು.ಯಾರಾದರೂ ಮಾದಕ ವಸ್ತುಗಳ ಬಳಕೆಗೆ ಬಲಿಯಾಗಬಹುದು. ಮಾದಕ ವಸ್ತುಗಳ ಬಳಕೆಯಲ್ಲಿ ತಕ್ಷಣದ ಆನಂದ ಪಡೆಯಲು ಪ್ರಾರಂಭಿಸುತ್ತಾರೆ. ನಂತರ ವ್ಯಕ್ತಿಯ ಏಕಾಗ್ರತೆ ಕಡಿಮೆಯಾಗುತ್ತದೆ, ಗೊಂದಲ ಉಂಟಾಗುತ್ತದೆ, ಕುಟುಂಬ ಸಂಬಂಧಗಳು, ಕೆಲಸದ ಕಾರ್ಯಕ್ಷಮತೆ ಸಹ ಕಡಿಮೆಯಾಗುತ್ತದೆ ಎಂದರು.
ವ್ಯಸನ ನಿವಾರಣಾ ಘಟಕದ ಮುಖ್ಯಸ್ಥ ಡಾ.ಮಹೇಶ್‌ಮಹದೇವಯ್ಯ, ಮಾದಕ ವಸ್ತುಗಳ ಸೇವನೆ ಮತ್ತು ಅದರಿಂದ ಆಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ವ್ಯಸನ ಹೊಂದಿರುವವರು ಚೇತರಿಸಿಕೊಳ್ಳುತ್ತಿದ್ದಂತೆ ಅವರಿಗೆ ಸಹಾನುಭೂತಿ, ಕಾಳಜಿ ಮತ್ತು ಜವಾಬ್ದಾರಿಯುತ ಬೆಂಬಲ ಕುಟುಂಬಸ್ಥರು ಹಾಗೂ ಸಮಾಜ ತೋರಿಸಬೇಕು ಎಂದರು.ಡಿಮ್ಹಾನ್ಸ್ ಮುಖ್ಯ ಆಡಳಿತಾಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ವೈದ್ಯಕೀಯ ಅಧೀಕ್ಷಕ ಡಾ.ರಾಘವೇಂದ್ರ ನಾಯಕ್, ಉಪ ಔಷಧ ನಿಯಂತ್ರಕ ಅಜಯ್ ಮುದುಗಲ್ ಇದ್ದರು. ಮನೋವೈದ್ಯಕೀಯ ಕಾರ್ಯಕರ್ತ ಅಶೋಕ್ ಕೋರಿ ನಿರೂಪಿಸಿದರು. ಸುಮಾರು 250ಕ್ಕೂ ಹೆಚ್ಚು ಜನರು ಇದ್ದರು.