ಒಂದು ಗೆಲುವಿಗೆ ಹಲವು ಸೋಲಾಗುತ್ತದೆ: ಅಂತಿಮ ಪಂಗಲ್‌

KannadaprabhaNewsNetwork | Published : Dec 14, 2024 12:46 AM

ಸಾರಾಂಶ

ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆ ಅವಿಭಾಜ್ಯ ಅಂಗ. ನಾವು ಕ್ರೀಡೆಯಲ್ಲಿ ಒಂದು ಬಾರಿ ಗೆಲ್ಲಬೇಕಾದರೇ, ಹಲವು ಬಾರಿ ಸೋಲು ಅನುಭವಿಸಬೇಕಾಗುತ್ತದೆ. ಆದ್ದರಿಂದ ಸೋಲಿಗೆ ಆತಂಕ ಪಡದೇ ಗೆಲುವಿಗಾಗಿ ಪ್ರಯತ್ನಿಸಬೇಕು.

ಧಾರವಾಡ:

ಯಾವುದೇ ಕ್ಷೇತ್ರದಲ್ಲಾದರೂ ಸತತ ಪರಿಶ್ರಮ, ತಾಳ್ಮೆ ಇದ್ದರೆ ಮಾತ್ರ ಯಶಸ್ಸು ಸಾಧ್ಯ. ಕ್ರೀಡಾ ಕ್ಷೇತ್ರದಲ್ಲಂತೂ ಪ್ರತಿದಿನ ಅಭ್ಯಾಸ ಅತಿ ಅವಶ್ಯ. ಸೋಲುಂಟಾದಾಗ ಕುಗ್ಗದೇ ಅದನ್ನೆ ಸವಾಲನ್ನಾಗಿ ಸ್ವೀಕರಿಸಿ, ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿಕೊಂಡು ಮುನ್ನಡೆಯಬೇಕೆಂದು ಅರ್ಜುನ ಪ್ರಶಸ್ತಿ ಪುರಸ್ಕೃತೆ, ಅಂತಾರಾಷ್ಟ್ರೀಯ ಕುಸ್ತಿಪಟು ಅಂತಿಮ ಪಂಗಲ್ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯವು ಜೆಎಸ್‌ಎಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ 71ನೇ ಅಂತರ್‌ ಕಾಲೇಜುಗಳ ಅಥ್ಲೆಟಿಕ್ಸ್‌ ಕ್ರೀಡಾಕೂಟವನ್ನು ಶುಕ್ರವಾರ ಉದ್ಘಾಟಿಸಿದ ಅವರು, ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆ ಅವಿಭಾಜ್ಯ ಅಂಗ. ನಾವು ಕ್ರೀಡೆಯಲ್ಲಿ ಒಂದು ಬಾರಿ ಗೆಲ್ಲಬೇಕಾದರೇ, ಹಲವು ಬಾರಿ ಸೋಲು ಅನುಭವಿಸಬೇಕಾಗುತ್ತದೆ. ಆದ್ದರಿಂದ ಸೋಲಿಗೆ ಆತಂಕ ಪಡದೇ ಗೆಲುವಿಗಾಗಿ ಪ್ರಯತ್ನಿಸಿ ಎಂದರು.ಏಷ್ಯನ್ ಓಲಂಪಿಯನ್ ಅಂತಾರಾಷ್ಟ್ರೀಯ ಕುಸ್ತಿಪಟು ಮನೀಷಾ, ಕ್ರೀಡೆಗೆ ಯಾವುದೇ ಭೇದ-ಭಾವವಿಲ್ಲ. ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಖಂಡಿತ ಸಾಧ್ಯ ಎಂದು ಹೇಳಿದರು

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಧಾರವಾಡ ಹಲವಾರು ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆ ನೀಡಿದೆ. ಜೆಎಸ್‌ಎಸ್ ಅತ್ಯಂತ ಯಶಸ್ವಿಯಾಗಿ ಈ ಕ್ರೀಡಾಕೂಟ ಆಯೋಜಿಸುವ ಮೂಲಕ ಕ್ರೀಡಾ ಕ್ಷೇತ್ರದ ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸುವ ಕಾರ್ಯ ಮಾಡುತ್ತಿದೆ ಎಂದರು.

ಧ್ವಜಾರೋಹಣ ನೆರವೇರಿಸಿ ಕವಿವಿ ಕುಲಪತಿ ಡಾ. ಎಂ.ಬಿ. ಪಾಟೀಲ್‌ ಹಾಗೂ ಕುಲಸಚಿವ ಕೆ. ಚೆನ್ನಪ್ಪ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜೆಎಸ್ಸೆಸ್‌ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಅಧ್ಯಯನದ ಜತೆಗೆ ಕ್ರೀಡೆಯಲ್ಲಿಯು ವಿದ್ಯಾರ್ಥಿಗಳು ಆಸಕ್ತಿ ತೋರಬೇಕು. ಕ್ರೀಡೆಯಲ್ಲಿ ಫಲಿತಾಂಶ ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ. ಇದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು, ನಾಯಕತ್ವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಿನೇಂದ್ರ ಕುಂದಗೋಳ ಸ್ವಾಗತಿಸಿದರು. ಶ್ರವಣಯೋಗಿ ವಂದಿಸಿದರು. ಮಹಾಂತೀಯ ನಿರೂಪಿಸಿದರು. ಮಹಾವೀರ ಉಪಾದ್ಯೆ, ಕೆ. ನಾಗಚಂದ್ರ ಇದ್ದರು.

26 ಪದಕ, 124 ಅಂಕಗಳೊಂದಿಗೆ ಜೆಎಸ್ಸೆಸ್‌ ಅಗ್ರಸ್ಥಾನ:

ಕರ್ನಾಟಕ ವಿವಿ ಅಂತರ್‌ ಕಾಲೇಜು ಅಥ್ಲೆಟಿಕ್ಸ್‌ನ ಮೊದಲ ದಿನ ನಾಲ್ಕು ನೂತನ ದಾಖಲೆಯಾಗಿದ್ದು, 2ನೇ ದಿನ ಶುಕ್ರವಾರ ಮತ್ತೆರೆಡು ಹೊಸ ದಾಖಲೆ ಸೃಷ್ಟಿಯಾಗಿವೆ. 5000 ಮೀಟರ್ ಪುರುಷರ ಓಟದ ವಿಭಾಗದಲ್ಲಿ ಕರ್ನಾಟಕ ಕಲಾ ಕಾಲೇಜಿನ ನಾಗರಾಜ ದಿವಟೆ 14:45.60 ನಿಮಿಷದಲ್ಲಿ ಗುರಿ ತಲುಪಿ 1992ರಲ್ಲಿ ಇಲಕಲ್‌ನಲ್ಲಿ ಬಾಗಲಕೋಟೆಯ ಬಸವೇಶ್ವರ ಕಾಲೇಜಿನ ಎಸ್.ಐ. ಕುಂಬಾರ ನಿರ್ಮಿಸಿದ 15:05.32 ನಿಮಿಷದ ದಾಖಲೆ ಮುರಿದಿದ್ದಾರೆ. ಈ ಮೂಲಕ ಬಂಗಾರದ ಪದಕ ಪಡೆದಿದ್ದಾರೆ. ಅದೇ ರೀತಿ 200 ಮೀಟರ್ ಪುರುಷರ ಓಟದಲ್ಲಿ ಕರ್ನಾಟಕ ಕಲಾ ಕಾಲೇಜಿನ ಪ್ರಸನ್ನಕುಮಾರ ಮಣ್ಣೂರ 21.41 ನಿಮಿಷದಲ್ಲಿ ಗುರಿ ತಲುಪಿ ಹಿಂದಿನ 2019ರಲ್ಲಿ ಧಾರವಾಡದಲ್ಲಿ ಹುಬ್ಬಳ್ಳಿ ಕೆಎಲ್‌ಇ ಆರ್ಟ್ಸ ಕಾಲೇಜಿನ ವಿನಾಯಕ ಸೊಂಟಣ್ಣವರ ಬರೆದ 21.78 ನಿಮಿಷದ ದಾಖಲೆ ಮುರಿದು ಬಂಗಾರದ ಪದಕಕ್ಕೆ ಕೊರಳೊಡ್ಡಿದನು. ಇನ್ನು, ಈ ಅಥ್ಲೆಟಿಕ್‌ ಆಯೋಜಿಸಿರುವ ಜೆಎಸ್ಸೆಸ್‌ ಸಂಸ್ಥೆಯ ಕ್ರೀಡಾಪಟುಗಳು 26 ಪದಕ ಹಾಗೂ 124 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, 3ನೇ ದಿನ ಶನಿವಾರ ಒಟ್ಟಾರೆ ಫಲಿತಾಂಶ ಹೊರ ಬರಲಿದೆ.

Share this article