ಅಶೋಕ ಡಿ. ಸೊರಟೂರ ಲಕ್ಷ್ಮೇಶ್ವರ
ಲಕ್ಷ್ಮೇಶ್ವರ ಸಮೀಪದ ಸೂರಣಗಿ ಗ್ರಾಮದಲ್ಲಿ ಅಂಬೇಡ್ಕರ್ ಓಣಿಯ ಯುವಕರು ಜ. 8,2024 ರಂದು ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಜ. 7 ರಂದು ರಾತ್ರಿ 11 ಗಂಟೆಯ ಸುಮಾರಿಗೆ ಯಶ್ ಅವರ 25 ಅಡಿ ಎತ್ತರದ ಬೃಹತ್ ಗಾತ್ರದ ಕಟೌಟ್ ಕಟ್ಟುತ್ತಿದ್ದ ವೇಳೆ ವಿದ್ಯುತ್ ತಂತಿಗೆ ತಗುಲಿದ್ದರಿಂದ ನವೀನ ಗಾಜಿ (ಹರಿಜನ) ಹನಮಂತ ಪೂಜಾರ (ಹರಿಜನ) ಹಾಗೂ ಮುರಳಿ ನಡುವಿನಮನಿ ಎಂಬ ಮೂವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟು 4 ಜನ ಯುವಕರು ಗಾಯಗೊಂಡಿದ್ದರು.
ಸಪ್ರೈಜ್ ತಂದಿಟ್ಟ ಅನಾಹುತ: ಜ. 8 ರಂದು ನಟ ಯಶ್ ಜನ್ಮದಿನಕ್ಕೆ ಓಣಿಯಲ್ಲಿನ ಸಾರ್ವಜನಿಕರಿಗೆ ಸಪ್ರೈಜ್ ನೀಡಬೇಕು ಎನ್ನುವ ಉದ್ದೇಶದಿಂದ ಜ. 7 ರಂದು ತಡರಾತ್ರಿ 25 ಅಡಿ ಎತ್ತರದ ಬೃಹತ್ ಗಾತ್ರದ ಕಟೌಟ್ ಕಟ್ಟಿ ಸಂಭ್ರಮಿಸಬೇಕಿದ್ದ ಯುವಕರು ವಿದ್ಯುತ್ ತಂತಿ ಕಟೌಟ್ ಗೆ ತಗುಲಿ ವಿದ್ಯುತ್ ಪ್ರವಹಿಸಿ 3 ಯುವಕರು ಕ್ಷಣ ಮಾತ್ರದಲ್ಲಿ ಮೃತಪಟ್ಟರೆ, 4 ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ದುರಂತದ ಸುದ್ದಿ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹರಡಿ ರಾಜ್ಯಕ್ಕೆ ರಾಜ್ಯವೇ ಮರುಗಿತ್ತು.ಜಮೀನು ಸಿಕ್ಕಿಲ್ಲ: ಕುಟುಂಬಕ್ಕೆ ಆಸರೆಯಾಗಿದ್ದ ಯುವಕರು ದುರಂತ ಅಂತ್ಯ ಕಂಡಿದ್ದು ಕುಟುಂಬಸ್ಥರಲ್ಲಿ ಹಾಗೂ ಗ್ರಾಮಸ್ಥರಲ್ಲಿ ಆ ಕಹಿ ಘಟನೆ ಇನ್ನೂ ಮಾಸಿಲ್ಲ. ಅಂದು ಸರ್ಕಾರ, ಮೃತಪಟ್ಟ ಯುವಕರ ಕುಟುಂಬಗಳಿಗೆ ಸರ್ಕಾರ ತಲಾ ₹2 ಲಕ್ಷ ಹಣ ನೀಡಿ ಕೈ ತೊಳೆದುಕೊಂಡಿದೆ. ಮೃತಪಟ್ಟ ಯುವಕರ ಕುಟುಂಬಗಳಿಗೆ ಎರಡು ಎಕರೆ ಜಮೀನು ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಸರ್ಕಾರ ಮಾಡಿದ ಘೋಷಣೆ ಇನ್ನೂ ಈಡೇರದೆ ಆ ಕುಟುಂಬಗಳು ಬಡತನದ ಬೇಗೆಯಲ್ಲಿ ಬೇಯುವಂತಾಗಿದೆ.
ನಟ ಯಶ್ ಕಟೌಟ್ ದುರಂತದಲ್ಲಿ ಮೃತಪಟ್ಟ ನಮ್ಮ ಗ್ರಾಮದ ಯುವಕರಿಗೆ ಯಶೋಮಾರ್ಗ ಫೌಂಡೇಶನ್ ವತಿಯಿಂದ ತಲಾ ₹ 5 ಲಕ್ಷ, ಗಾಯಗೊಂಡವರಿಗೆ ತಲಾ ₹ 1.5 ಲಕ್ಷ ಪರಿಹಾರ ನೀಡಲಾಗಿದೆ. ಆದರೆ ಸರ್ಕಾರದಿಂದ ಆ ಕುಟುಂಬಗಳ ಶಾಶ್ವತ ಆದಾಯಕ್ಕಾಗಿ 2 ಎಕರೆ ಜಮೀನು ನೀಡಬೇಕು ಎಂದು ಸೂರಣಗಿ ತಾಪಂ ಮಾಜಿ ಸದಸ್ಯ ಕೋಟೆಪ್ಪ ವರ್ದಿ ಹೇಳಿದ್ದಾರೆ.