ಮಳೆ ಕೊರತೆ ಮಧ್ಯೆ ಈರುಳ್ಳಿ ಬೆಳೆಗಾರನಿಗೆ ಕಳಪೆ ಬೀಜದ ಸಂಕಷ್ಟ

KannadaprabhaNewsNetwork |  
Published : Jun 29, 2026, 02:00 AM IST
ಮಹಾರಾಷ್ಟ್ರ ಮೂಲದ ಪಂಚಗಂಗಾ ಕಂಪನಿಯ ಬಿತ್ತನೆ ಬೀಜ ತೋರಿಸುತ್ತಿರುವ ರೈತರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಶೇ. 80ರಷ್ಟಾಗಿದ್ದು, ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಇದು ರೈತರಲ್ಲಿ ತೀವ್ರ ಆತಂಕ ತಂದಿದೆ. ಈ ಮಧ್ಯೆ ಈರುಳ್ಳಿ ಬೆಳೆಗಾರರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಧಾರವಾಡ: ಈ ಮುಂಗಾರು ಹಂಗಾಮು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಶೇ. 80ರಷ್ಟಾಗಿದ್ದು, ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಇದು ರೈತರಲ್ಲಿ ತೀವ್ರ ಆತಂಕ ತಂದಿದೆ. ಈ ಮಧ್ಯೆ ಈರುಳ್ಳಿ ಬೆಳೆಗಾರರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಬಿತ್ತನೆ ಮಾಡಿ ಈರುಳ್ಳಿ ಬೀಜ ಮೊಳಕೆಯೊಡೆದು ಇದೀಗ ಬೋರ್‌ವೆಲ್ ಮೂಲಕ ನೀರು ನೀಡಿದರೂ ಬೆಳೆ ಒಣಗಿ ಹೋಗುತ್ತಿದೆ. ಇದಕ್ಕೆ ಕಾರಣ ಕಳಪೆ ಗುಣಮಟ್ಟದ ಬೀಜ ಎನ್ನುವ ಆರೋಪ ಈರುಳ್ಳಿ ಬೆಳೆಗಾರರಿಂದ ಕೇಳಿ ಬಂದಿದ್ದು, ರೈತರು ಈ ಬಗ್ಗೆ ತೋಟಗಾರಿಕೆ ಇಲಾಖೆಗೆ ದೂರು ನೀಡಲು ಸಜ್ಜಾಗಿದ್ದಾರೆ.

ತಾಲೂಕಿನ ಕಬ್ಬೇನೂರ ಗ್ರಾಮದ ಈರಪ್ಪ ತನ್ನ 20 ಎಕರೆ ಹೊಲದಲ್ಲಿ ಈ ಬಾರಿ ಈರುಳ್ಳಿ ಬೆಳೆ ಬೆಳೆದಿದ್ದಾರೆ. ಪೂರ್ವ ಮುಂಗಾರು ಮಳೆ ಬಿದ್ದ ಕೂಡಲೇ ಹತ್ತಾರು ಸಾವಿರ ರುಪಾಯಿ ವೆಚ್ಚ ಮಾಡಿ ಈರುಳ್ಳಿ ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿದ್ದರಲ್ಲಿ ಕೇವಲ ಶೇ. 50ರಷ್ಟು ಮಾತ್ರ ಮೊಳಕೆಯೊಡೆಯಿತು. ಆದರೆ, ಮಳೆ ಕೊರತೆ ಎದ್ದು ಕಾಣುವ ತಡವೇ ನೀರಾವರಿ ಮೂಲಕ ತುಂತುರು ಹನಿ ಮೂಲಕ ನೀರುಣಿಸಲಾಯಿತು. ಆದರೂ ಮೊಳಕೆಯೊಡದ ಸಸಿಗಳಾವು ಉಳಿಯಲಿಲ್ಲ. ಇದು ಬರೀ ಈರಪ್ಪ, ಮಲ್ಲಿಕಾರ್ಜನ ಅವರ ಸಮಸ್ಯೆ ಮಾತ್ರವಲ್ಲದೇ ಈರುಳ್ಳಿ ಬೆಳೆದ ಹಲವು ರೈತರ ಈರುಳ್ಳಿ ಬೆಳೆದಿಲ್ಲ. ಆದರೆ, ಬೇರೆ ಕಂಪನಿ ಈರುಳ್ಳಿ ಬೀಜ ಬಿತ್ತಿರುವ ರೈತರ ಹೊಲದಲ್ಲಿ ಈರುಳ್ಳಿ ಚೆನ್ನಾಗಿಯೇ ಬೆಳೆದಿದೆ. ಹೀಗಾಗಿ, ಇದು ಮಳೆಯ ಕೊರತೆ ಕಾರಣ‍ವಲ್ಲ, ಬೀಜದ ಸಮಸ್ಯೆ ಇರಬಹುದು ಎಂದು ರೈತರು ಸಂಶಯ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಮೂಲದ ಪಂಚಗಂಗಾ ಎಂಬ ಕಂಪನಿಯಿಂದ ಬೀಜವನ್ನು ಬಿತ್ತಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಬಿತ್ತನೆ ಬೀಜವನ್ನು ಕಡಿಮೆ ದರದಲ್ಲಿ ಕಂಪನಿ ರೈತರಿಗೆ ನೀಡಿದೆ. ಕಳೆದ ವರ್ಷ ಮಾರಾಟವಾಗದೇ ಉಳಿದ ಬೀಜ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವು ಸರಿಯಾಗಿ ಬೆಳೆದಿಲ್ಲ ಎಂದು ಕಬ್ಬೇನೂರಿನಲ್ಲಿ ಈ ಬೀಜ ಬಿತ್ತಿರುವ ರೈತರು ಗಂಭೀರ ಆರೋಪ ಮಾಡಿದ್ದಾರೆ. ಮನೆಯಲ್ಲಿನ ಚಿನ್ನವನ್ನು ಅಡವಿಟ್ಟು ಬಿತ್ತನೆ ಬೀಜವನ್ನು ಖರೀದಿ ಮಾಡಿದ್ದೇವೆ. ಈಗ ನೋಡಿದರೆ ಈ ರೀತಿ ಒಣಗಿ ಹೋಗಿದ್ದು, ಬೆಳೆಯನ್ನು ತೆಗೆದು ಬೇರೆ ಬೆಳೆಯಲು ತೀರ್ಮಾನಿಸಿದ್ದೇವೆ ಎಂದು ರೈತ ಈರಪ್ಪ ಸಂಕಷ್ಟ ಹೇಳಿಕೊಂಡನು.

ಕಳೆದ ವರ್ಷ ಒಂದು ಪ್ಯಾಕೆಟ್‌ಗೆ ₹1200ರಷ್ಟಿದ್ದ ಈ ಕಂಪನಿಯ ಬಿತ್ತನೆ ಬೀಜದ ದರ ಈ ಬಾರಿ ₹800ಕ್ಕೆ ಇಳಿಸಲಾಗಿದೆ. ದರ ಕಡಿಮೆಯಾಗಿದ್ದರಿಂದ ಖುಷಿ ಪಟ್ಟಿದ್ದ ರೈತರಿಗೆ ಕೆಲವೇ ದಿನಗಳಲ್ಲಿ ಭ್ರಮನಿರಸನ ಉಂಟಾಗಿದೆ. ಕಳೆದ ವರ್ಷ ಈ ಗ್ರಾಮದ ವ್ಯಾಪ್ತಿಯಲ್ಲಿ ಕೇವಲ 100 ಎಕರೆ ಈರುಳ್ಳಿ ಬೆಳೆಯಲಾಗಿತ್ತು. ಈ ಬಾರಿ ಅದು 500 ಎಕರೆಗೆ ವಿಸ್ತರಣೆಯಾಗಿದೆ. ಉತ್ತಮ ಇಳುವರಿ ನಿರೀಕ್ಷೆಯಿಂದ ರೈತರು ಈ ಕಂಪನಿಯ ಬೀಜವನ್ನು ಬಿತ್ತನೆ ಮಾಡಿದರೆ, ಇದೀಗ ಕೈಕೊಟ್ಟಿದ್ದು ರೈತರು ನ್ಯಾಯ ಕೊಡಿಸಿ ಎಂದು ಕೃಷಿ ಇಲಾಖೆ ಅಧಿಕಾರಿಗಳ ಬೆನ್ನು ಬಿದ್ದಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಸುಮಾರು 5000 ಎಕರೆ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ. ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಈರುಳ್ಳಿ ಬೆಳೆಯೇ ಬಂದಿಲ್ಲ. ಈ ಬಾರಿಯಾದರೂ ಈರುಳ್ಳಿ ಬೆಳೆ ಕೈಗೆ ಬರಬಹುದು ಎಂಬ ಲೆಕ್ಕಾಚಾರ ರೈತರಿಗೆ ಇತ್ತು. ಆದರೆ, ಎಲ್ಲೆಲ್ಲಿ ಈ ಕಂಪನಿಯ ಬೀಜವನ್ನು ಬಿತ್ತನೆ ಮಾಡಲಾಗಿದೆಯೋ ಅಲ್ಲಿ ಬೆಳೆ ಒಣಗಿ ಹೋಗುತ್ತಿದೆ. ಈ ಕಾರಣದಿಂದಾಗಿ ಬೇರೆ ಕಂಪನಿ ಬೀಜ ಖರೀದಿಸಿ ಬಿತ್ತನೆ ಮಾಡಲು ಕೆಲ ರೈತರು ಸಿದ್ಧರಾಗಿದ್ದಾರೆ. ಆದರೆ, ಈಗಾಗಲೇ ಒಂದು ಬಾರಿ ಈರುಳ್ಳಿ ಬಿತ್ತನೆಗಾಗಿ ಮಾಡಿರುವ ಸಾವಿರಾರು ರುಪಾಯಿ ವೆಚ್ಚಕ್ಕೆ ಯಾರು ಹೊಣೆ?

ಕಳಪೆ ಈರುಳ್ಳಿ ಬೀಜ ಮಾರಾಟ ಮಾಡಲಾಗಿದೆ ಎಂಬ ದೂರು ಇದುವರೆಗೆ ಬಂದಿಲ್ಲ. ಒಂದು ವೇಳೆ ರೈತರು ತಮ್ಮನ್ನು ಸಂಪರ್ಕಿಸಿ ದೂರು ನೀಡಿದರೆ, ವಿಜ್ಞಾನಿಗಳನ್ನು ಅವರ ಬಳಿ ಕಳುಹಿಸಿ ಪರೀಕ್ಷೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಕಾಶೀನಾಥ ಭದ್ರಣ್ಣವರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾಸ್ಪತ್ರೆಗೆ ಇರುವುದು ಒಂದೇ ಆ್ಯಂಬುಲೆನ್ಸ್
ಹೊರಗುತ್ತಿಗೆ ನೌಕರರ ನೂತನ ಕನಿಷ್ಠ ವೇತನ ಆದೇಶ ತಕ್ಷಣ ಜಾರಿಗೊಳಿಸಲು ಆಗ್ರಹ