ದರ ಕುಸಿತ ಸಂಕಷ್ಟದಲ್ಲಿ ಈರುಳ್ಳಿ ಬೆಳೆಗಾರರು

KannadaprabhaNewsNetwork | Updated : May 06 2025, 01:17 PM IST

ಸಾರಾಂಶ

ಈರುಳ್ಳಿ ಹವಾಮಾನ ವೈಪರೀತ್ಯದಿಂದ ಇಳುವರಿ ಕುಂಠಿತ, ಮತ್ತೊಂದೆಡೆ ದರ ಕುಸಿತದಿಂದ ಬೆಳೆಗಾರರನ್ನು ಅಕ್ಷರಶಃ ಆರ್ಥಿಕ ಸಂಕಷ್ಟಕ್ಕೆ ದೂಡಿದೆ.

ರಿಯಾಜ ಅಹ್ಮದ ದೊಡ್ಡಮನಿ

 ಡಂಬಳ : ಈರುಳ್ಳಿ ಹವಾಮಾನ ವೈಪರೀತ್ಯದಿಂದ ಇಳುವರಿ ಕುಂಠಿತ, ಮತ್ತೊಂದೆಡೆ ದರ ಕುಸಿತದಿಂದ ಬೆಳೆಗಾರರನ್ನು ಅಕ್ಷರಶಃ ಆರ್ಥಿಕ ಸಂಕಷ್ಟಕ್ಕೆ ದೂಡಿದೆ.

ಡಂಬಳ ಸೇರಿದಂತೆ ತಾಲೂಕಿನ ಡೋಣಿ, ಡೋಣಿ ತಾಂಡ, ಅತ್ತಿಕಟ್ಟಿ, ಮುರಡಿ ತಾಂಡ, ಕದಾಂಪುರ ಮುಂತಾದ ಕಡೆಗಳಲ್ಲಿ ಹಿಂಗಾರು ಹಂಗಾಮಿನಲ್ಲಿ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಡಂಬಳ ಸುತ್ತಮುತ್ತ ರೆಡ್ ಎಂದು ಹೆಸರಾಗಿರುವ ಸ್ಥಳೀಯ ತಳಿಯ ಈರುಳ್ಳಿ ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ಈರುಳ್ಳಿ ಗಾತ್ರದಲ್ಲಿ ಸ್ವಲ್ಪ ದೊಡ್ಡದು ಮತ್ತು ಚಿಕ್ಕದಾಗಿದ್ದರೂ ಕೂಡಾ ರುಚಿಗೆ ಹೆಸರಾಗಿದೆ.

ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ನಾಟಿ ಮಾಡಿ ಮಾರ್ಚ್-ಏಪ್ರಿಲ್ ನಲ್ಲಿ ಬೆಳೆ ಕಟಾವು ಮಾಡಲಾಗುತ್ತದೆ.

ಈರುಳ್ಳಿ ಬೆಲೆ ಕುಸಿತ: ಆರಂಭದಲ್ಲಿ ಕ್ವಿಂಟಲ್ ಈರುಳ್ಳಿ ಬೆಲೆ ₹2000-3000 ಇದ್ದದ್ದು ಇದೀಗ ಈ 600-1000ಗೆ ಕುಸಿದಿದೆ. ಇದರಿಂದ ಬಹುತೇಕ ಈರುಳ್ಳಿ ಬೆಳೆದ ರೈತರು ಭವಿಷ್ಯದಲ್ಲಿ ಉತ್ತಮ ಬೆಲೆ ದೊರೆಯಬಹುದೆಂಬ ನಿರೀಕ್ಷೆಯಲ್ಲಿ ತಾವು ಬೆಳೆದ ಈರುಳ್ಳಿಯನ್ನು ತಮ್ಮ ಹೊಲಗಳಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ಕೊಟ್ಟಿಗೆಗಳಲ್ಲಿ ಸಂಗ್ರಹಿಸುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿಯನ್ನು ಮಾರಾಟಗಾರರು ₹ 25-30ರಂತೆ ಮಾರಾಟ ಮಾಡುತ್ತಿದ್ದಾರೆ. ಆದರೆ ಈ ಬೆಲೆ ಮಾತ್ರ ರೈತರಿಗೆ ಸಿಗುತ್ತಿಲ್ಲ. ರೈತರು ಬೆಳೆದ ಈರುಳ್ಳಿ ಕ್ವಿಂಟಲ್‌ಗೆ ₹ 800-1000ಕ್ಕೆ ಕೇಳುತ್ತಿರುವುದರಿಂದ ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಸ್ವತಃ ರೈತರೇ ಗಾಡಿಗಳಲ್ಲಿ ಈರುಳ್ಳಿ ಚೀಲಗಳನ್ನು ಪ್ರತಿ ಗ್ರಾಮಗಳಿಗೆ ತೆರಳಿ 50ರಿಂದ 55 ಕೇಜಿ ತೂಕದ ಈರುಳ್ಳಿ ಚೀಲಗಳನ್ನು ₹ 500 ರಿಂದ ₹ 600ರವರೆಗೆ ಮಾರಾಟ ಮಾಡುತ್ತಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಶೀಘ್ರವಾಗಿ ಈರುಳ್ಳಿ ಬೆಲೆಗೆ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿಗೆ ಮುಂದಾಗುವುದರ ಮೂಲಕ ರೈತರು ಆರ್ಥಿಕ ಸಂಕಷ್ಟವನ್ನು ತಡೆಯುವ ಕೆಲಸಕ್ಕೆ ಸರ್ಕಾರಗಳು ಮುಂದಾಗಬೇಕು ಎಂದು ಡಂಬಳದ ಈರುಳ್ಳಿ ಬೆಳೆಗಾರರು ಹೇಳುತ್ತಾರೆ.

ಲಕ್ಷಾಂತರ ರು. ಸಾಲ ಸೂಲ ಮಾಡಿ ರೈತರು ಈರುಳ್ಳಿ ಬೆಳೆದಿದ್ದು, ಸೂಕ್ತ ಬೆಲೆ ಸಿಗದೆ ಅಕ್ಷರಶಃ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅತಿ ಶೀಘ್ರವಾಗಿ ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸಬೇಕು ಎಂದು ರೈತಸಂಘದ ಗದಗ ಜಿಲ್ಲಾಧ್ಯಕ್ಷ ಶಂಕರಗೌಡ ಜಾಯನಗೌಡರ ಹೇಳಿದರು.

Share this article