ಹೊಸಪೇಟೆಯಲ್ಲಿ ಅತ್ಯಾಧುನಿಕ ಟ್ರಕ್ ಟರ್ಮಿನಲ್ ಲೋಕಾರ್ಪಣೆ

KannadaprabhaNewsNetwork |  
Published : May 06, 2025, 12:22 AM ISTUpdated : May 06, 2025, 10:23 AM IST
5ಎಚ್‌ಪಿಟಿ1- ಹೊಸಪೇಟೆಯ ಅಮರಾವತಿ ಬಳಿ ನಿರ್ಮಾಣ ಮಾಡಲಾಗಿರುವ ಟ್ರಕ್‌ ಟರ್ಮಿನಲ್‌ಅನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು. ಶಾಸಕ ಎಚ್‌.ಆರ್‌. ಗವಿಯಪ್ಪ, ಎಂ.ಎಲ್ಸಿ ರಾಮೋಜಿ ಗೌಡ, ಜಿಲ್ಲಾಧಿಕಾರ ದಿವಾಕರ ಮತ್ತಿತರರಿದ್ದರು. | Kannada Prabha

ಸಾರಾಂಶ

ದೇಶದಲ್ಲೇ ಅತಿ ಸುಸಜ್ಜಿತ ಟ್ರಕ್ ಟರ್ಮಿನಲ್ ಅನ್ನು ಹೊಸಪೇಟೆಯಲ್ಲಿ ನಿರ್ಮಾಣ ಮಾಡಲಾಗಿದೆ. 

 ಹೊಸಪೇಟೆ :  ದೇಶದಲ್ಲೇ ಅತಿ ಸುಸಜ್ಜಿತ ಟ್ರಕ್ ಟರ್ಮಿನಲ್ ಅನ್ನು ಹೊಸಪೇಟೆಯಲ್ಲಿ ನಿರ್ಮಾಣ ಮಾಡಲಾಗಿದೆ. 400 ಲಾರಿಗಳ ನಿಲುಗಡೆಗೆ ಇಲ್ಲಿ ಅವಕಾಶವಿದ್ದು, 20 ಎಕರೆ ಜಾಗದಲ್ಲಿ ಟರ್ಮಿನಲ್‌ ನಿರ್ಮಿಸಲಾಗಿದೆ. ಇನ್ನುಳಿದ 17.26 ಎಕರೆ ಜಾಗವನ್ನೂ ಅಭಿವೃದ್ಧಿಪಡಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದ ಅಮರಾವತಿ ಬಳಿ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿಮಿಟೆಡ್‌ನಿಂದ ನೂತನವಾಗಿ ನಿರ್ಮಿಸಿರುವ ಹೊಸಪೇಟೆ ಟ್ರಕ್ ಟರ್ಮಿನಲನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಲಾರಿ ಚಾಲಕರಿಗೆ 120 ಬೆಡ್‌ನ ಡಾರ್ಮಿಟರಿ ನಿರ್ಮಾಣ ಮಾಡಲಾಗಿದೆ. 

ಕ್ಯಾಂಟೀನ್‌ ವ್ಯವಸ್ಥೆ ಕೂಡ ಇದೆ. ಲಾರಿ ಚಾಲಕರು, ಕ್ಲೀನರ್‌ಗಳು ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಲಾಗಿದೆ. ಲಾರಿ ಮಾಲೀಕರು ಕೂಡ ಇಲ್ಲಿ ಸೌಲಭ್ಯ ಪಡೆಯಬಹುದಾಗಿದೆ. ನೂತನ ಟ್ರಕ್ ಟರ್ಮಿನಲ್‌ನಲ್ಲಿ ಒಂದು ತಿಂಗಳ ಕಾಲ ಲಾರಿ ಚಾಲಕರಿಗೆ ಉಚಿತ ಸೇವೆ ಒದಗಿಸಲು ಕ್ರಮ ವಹಿಸಲಾಗಿದೆ ಎಂದರು.

 ರಾಜ್ಯದಲ್ಲಿ ಬೆಂಗಳೂರಿನ ಯಶವಂತಪುರ, ದಾಸನಪುರ, ಮೈಸೂರು ನಗರದ ಬಂಡಿಪಾಳ್ಯ ಮತ್ತು ನಾಚನಹಳ್ಳಿ, ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶ, ಹೊಸಪೇಟೆಯ ಅಮರಾವತಿ, ಉತ್ತರ ಕನ್ನಡದ ದಾಂಡೇಲಿ, ಹುಬ್ಬಳಿಯ ಅಂಚಟಗೇರಿ, ಚಾಮರಾಜನಗರದ ಗುಂಡ್ಲುಪೇಟೆ, ರಾಯಚೂರು ಯರಮರಸ್ ಸೇರಿದಂತೆ ಒಟ್ಟು 9 ಟ್ರಕ್ ಟರ್ಮಿನಲ್‌ಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. 

ಆ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿ ಚಾಲಕರಿಗೆ, ಕ್ಲೀನರ್‌ಗಳಿಗೆ, ಮಾಲೀಕರುಗಳಿಗೆ, ನಿರ್ವಹಣೆದಾರರಿಗೆ ತಂಗುದಾಣ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ಸರಕುಗಳನ್ನು ಇಳಿಸುವ ಮತ್ತು ಲೋಡಿಂಗ್ ವ್ಯವಸ್ಥೆ, ಲಾರಿಗಳಿಗೆ ಇಂಧನ ವ್ಯವಸ್ಥೆ, ವಾಹನ ಸ್ವಚ್ಚತೆ, ವಿಶ್ರಾಂತಿ ಕೊಠಡಿಗಳು, ಕ್ಯಾಂಟೀನ್‌ಗಳು, ಶೌಚಾಲಯ, ವೈದ್ಯಕೀಯ ಸೌಲಭ್ಯ ಒದಗಿಸಲು ಟ್ರಕ್ ಟರ್ಮಿನಲ್ ಗಳು ಸಹಕಾರಿಯಾಗಲಿವೆ. 

ಇದರಿಂದಾಗಿ ನಗರದೊಳಗೆ ವಾಹನಗಳು ಉಗುಳುವ ಹೊಗೆಯಿಂದ ಉಂಟಾಗುವ ವಾಯುಮಾಲಿನ್ಯ ಕಡಿಮೆ ಮಾಡಲು ಸಾಧ್ಯವಿದೆ. ಇದೀಗ ಉದ್ಘಾಟಿಸಿರುವ ಹೊಸಪೇಟೆಯ ಹೈಟೆಕ್ ಟ್ರಕ್ ಟರ್ಮಿನಲ್ ದೇಶದಲ್ಲೇ ಮಾದರಿಯಾಗಲಿದೆ. ಲಾರಿ ಚಾಲಕರು ಮತ್ತು ಮಾಲೀಕರ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''