ಕನ್ನಡಪ್ರಭ ವಾರ್ತೆ ಕಾರವಾರ
ಭಾನುವಾರದ ಸಂತೆಯಲ್ಲಿ ಈರುಳ್ಳಿ ದರದಲ್ಲಿ ಇಳಿಕೆಯಾಗಿದ್ದು, ಮಾರುಕಟ್ಟೆಗೆ ಬಂದ ಗ್ರಾಹಕರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.ಕಳೆದ ವಾರ ಪ್ರತಿ ಕಿಗ್ರಾಂ ಈರುಳ್ಳಿಗೆ ₹80-90 ರೇಟು ಕೇಳಿ ಗ್ರಾಹಕರು ಕಂಗಾಲಾಗಿದ್ದರು. ದರದಲ್ಲಿ ಭಾರಿ ಹೆಚ್ಚಳವಾಗಿದ್ದರಿಂದ 2 ಕಿಗ್ರಾಂ ಕೊಳ್ಳುವವರು 1 ಕಿಗ್ರಾಂ ಕೊಂಡು ಹೋಗುವಂತಾಗಿತ್ತು. ಈ ಬಾರಿ ದರ ₹120 ಗೆ ತಲುಪಲಿದೆ ಎಂದು ವ್ಯಾಪಾರಸ್ಥರು ಭವಿಷ್ಯ ನುಡಿದಿದ್ದರು. ಇದನ್ನು ಕೇಳಿ ಗ್ರಾಹಕರಿಗೆ ಇನ್ನಷ್ಟು ತಲೆಬಿಸಿಯಾಗಿತ್ತು.
ಮಹಾರಾಷ್ಟ್ರದಿಂದ ಬರುತ್ತಿದ್ದ ಈರುಳ್ಳಿ ಸ್ಥಗಿತಗೊಂಡಿತ್ತು. ಮಳೆ ಅಭಾವದ ಹಿನ್ನೆಲೆಯಲ್ಲಿ ಬೆಳೆಯೂ ಕೈಕೊಟ್ಟಿದ್ದರಿಂದ ಬೇಡಿಕೆ ಇರುವಷ್ಟು ಈರುಳ್ಳಿ ಪೂರೈಕೆಯಾಗದೆ ಈರುಳ್ಳಿ ದರದಲ್ಲಿ ಹಠಾತ್ ಏರಿಕೆಯಾಗಿತ್ತು.ಈ ಭಾನುವಾರ ಹೊಸ ಈರುಳ್ಳಿ ಮಾರುಕಟ್ಟೆ ಪ್ರವೇಶಿಸಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಅಗತ್ಯ ಪ್ರಮಾಣದಲ್ಲಿ ಲಭ್ಯ ಇತ್ತು. ಇದರಿಂದ ಬೆಲೆಯಲ್ಲಿ ₹20 ಗಳಷ್ಟು ಇಳಿಕೆಯಾಗಿದೆ. ಮುಂದಿನ ವಾರವೂ ಈರುಳ್ಳಿ ಇದೆ ಪ್ರಮಾಣದಲ್ಲಿ ಆಗಮಿಸಿದರೆ ಬೆಲೆಯಲ್ಲಿ ಸ್ಥಿರತೆ ಇರಲಿದೆ. ಇಲ್ಲದಿದ್ದಲ್ಲಿ ಮತ್ತೆ ದರ ಏರಲಿದೆ ಎಂದು ಮಾರಾಟಗಾರರು ಅಭಿಪ್ರಾಯಪಡುತ್ತಾರೆ.