ಗ್ರಾಹಕರ ಕಣ್ಣಲ್ಲಿ ನೀರು ತರಿಸುವ ಈರುಳ್ಳಿ ಬೆಲೆ

KannadaprabhaNewsNetwork |  
Published : Aug 31, 2026, 01:15 AM IST
ಸಿಕೆಬಿ-1 ಮಾರುಕಟ್ಟೆಯಲ್ಲಿ ಬಂದಿರುವ ಈರುಳ್ಳಿ | Kannada Prabha

ಸಾರಾಂಶ

ಈರುಳ್ಳಿ ದರ ತಗ್ಗದೆ ಏರು ಮುಖವಾಗಿ ಜನತೆಯ ಕಣ್ಣಲ್ಲಿ ನೀರು ತರಿಸುತ್ತಿದೆ. ಗೌರಿ ಗಣೇಶ ಹಬ್ಬಕ್ಕೂ ಈರುಳ್ಳಿ ಬೆಲೆ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.

ಏರುತ್ತಿರುವ ಈರುಳ್ಳಿ ಬೆಲೆ । ಗೌರಿ ಹಬ್ಬಕ್ಕೂ ಬೆಲೆ ಇಳಿಯುವ ಸೂಚನೆ ಇಲ್ಲ । ಪ್ರತಿ ಕ್ವಿಂಟಲ್‌ಗೆ 5ರಿಂದ 7 ಸಾವಿರ ರು.ಗೆ ಬಿಕರಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಾಮಾನ್ಯವಾಗಿ ಈರುಳ್ಳಿಯನ್ನು ಹೆಚ್ಚುವಾಗಷ್ಟೇ ಜನರ ಕಣ್ಣಿನಲ್ಲಿ ನೀರು ಬರುವುದು ವಾಡಿಕೆ. ಆದರೆ ಇತ್ತೀಚಿನ ದಿನಗಳಲ್ಲಿ, ಅದನ್ನು ಕತ್ತರಿಸುವ ಮೊದಲೇ ಕೇವಲ ಮಾರುಕಟ್ಟೆಯ ಬೆಲೆ ಪಟ್ಟಿಯನ್ನು ನೋಡಿದಾಕ್ಷಣವೇ ಗ್ರಾಹಕರ ಕಣ್ಣಾಲಿಗಳು ಒದ್ದೆಯಾಗುವ ಕಾಲ ಬಂದಿದೆ.

ಈರುಳ್ಳಿ ದರ ತಗ್ಗದೆ ಏರು ಮುಖವಾಗಿ ಜನತೆಯ ಕಣ್ಣಲ್ಲಿ ನೀರು ತರಿಸುತ್ತಿದೆ. ಗೌರಿ ಗಣೇಶ ಹಬ್ಬಕ್ಕೂ ಈರುಳ್ಳಿ ಬೆಲೆ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಕಳೆದ ಹಲವು ದಿನಗಳಿಂದ ಈರುಳ್ಳಿ ಬೆಲೆ ಕೆಳಗಿಳಿಯದೇ ಮೇಲೆರುತ್ತಿದೆ. ಗೌರಿ ಗಣೇಶ ಹಬ್ಬಕ್ಕೆ ಈರುಳ್ಳಿ ಬೆಲೆ ಗಗನಕ್ಕೇರಿ ಕೆಜಿಗೆ ರು. 100 ರ ಗಡಿ ಮುಟ್ಟಲಿದೆ.ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಉತ್ತಮ ಈರುಳ್ಳಿ 50 ರಿಂದ 65 ರು. ಆಗಿದೆ. ಜತೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ 70 ರಿಂದ 80 ರು.ವರೆಗೂ ಮಾರಾಟವಾಗುತ್ತಿದೆ. ಎಪಿಎಂಸಿಯಲ್ಲಿ ಮಹಾರಾಷ್ಟ್ರದ ನಾಗಪುರ, ನಾಸಿಕ್‌, ಪೂನಾ ಭಾಗದ ಹಳೆ ದಾಸ್ತಾನು ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 5000 ರು.ನಿಂದ 7 ಸಾವಿರ ರು. ವರೆಗೂ ಖರೀದಿಯಾಯಿತು. ಜತೆಗೆ ಮಧ್ಯಮ ಗಾತ್ರದ ಈರುಳ್ಳಿ ಪ್ರತಿ ಕೆ.ಜಿಗೆ 4,400 ರಿಂದ 4,600 ರು.ವರೆಗೂ ಮಾರಾಟವಾಯಿತು. ಸಾಧಾರಣ ಗಾತ್ರದ ಈರುಳ್ಳಿ 3,800 ರಿಂದ 4 ಸಾವಿರ ರು. ವರೆಗೂ, ಸ್ಥಳೀಯ ಹೊಸ ಈರುಳ್ಳಿ 1200 ರಿಂದ 1000 ಸಾವಿರ ರು. ವರೆಗೂ ಖರೀದಿಯಾಯಿತು.ಈ ಹಿಂದೆ ಚಿತ್ರದುರ್ಗ, ಹೊಸದುರ್ಗ, ಚಳ್ಳಕೆರೆ, ವಿಜಯಪುರ, ನಾಗಪುರ, ನಾಸಿಕ್‌, ಪೂನಾ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಮತ್ತು ಸ್ಥಳೀಯವಾಗಿ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆ ಆಗುತ್ತಿತ್ತು. ಆದರೆ, ರಾಜ್ಯದಲ್ಲಿ ಬಿದ್ದಿರುವ ಅಕಾಲಿಕ ಅಧಿಕ ಮಳೆ ಬಂದಿರುವ ಕಾರಣದಿಂದಾಗಿ ಈರುಳ್ಳಿ ಬೆಳೆ ರೈತರ ಕೈಸೇರಿಲ್ಲ. ಬೇಡಿಕೆಗಿಂತ ಪೂರೈಕೆ ಕಡಿಮೆಯಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಭಾಗದ ಈರುಳ್ಳಿಗೆ ಅವಲಂಬಿಸಬೇಕಾಗಿದೆ ಎಂದು ಹೋಲ್‌ಸೇಲ್‌ ಈರುಳ್ಳಿ ವ್ಯಾಪಾರಿಗಳು ಹೇಳುತ್ತಾರೆ.

ಹೊಸ ಈರುಳ್ಳಿ ಕ್ವಿಂಟಲ್‌ಗೆ 5 ಸಾವಿರ ರು:

ಹೊರ ರಾಜ್ಯಗಳಿಂದ 30ಕ್ಕೂ ಅಧಿಕ ಟ್ರಕ್‌ಗಳಲ್ಲಿ ಹೊಸ ಈರುಳ್ಳಿ ಬೆಳೆ ಮಾರುಕಟ್ಟೆಗೆ ಪೂರೈಕೆ ಆಗಿದೆ. ಗುಣಮಟ್ಟದ ಹೊಸ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 4,700 ರು.ನಿಂದ 5 ಸಾವಿರವರೆಗೆ ಖರೀದಿಯಾಯಿತು ಎಂದು ಎಪಿಎಂಸಿಯ ಹೋಲ್‌ಸೇಲ್‌ ಈರುಳ್ಳಿ ವ್ಯಾಪಾರಿ ವೆಂಕಟೇಶ್‌ ಮಾಹಿತಿ ನೀಡಿದರು.

ಮಹಾರಾಷ್ಟ್ರದ ನಾಗಪುರದಿಂದ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿದೆ. ಬೆಳೆ ಕೈ ಕೊಟ್ಟಿರುವ ಹಿನ್ನೆಲೆಯಲ್ಲಿ ಹೊಸಈರುಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಹಲವು ದಿನಇದೇ ಪರಿಸ್ಥಿತಿ ಇರುವ ಸಾಧ್ಯತೆಯಿದೆ. ರಾಜ್ಯದಲ್ಲಿ ಬರದ ಹಿನ್ನೆಲೆಯಲ್ಲಿ ಹೇಳಿ ಕೊಳ್ಳುವಷ್ಟು ಈರುಳ್ಳಿ ಪೂರೈಕೆ ಆಗುತ್ತಿಲ್ಲ ಎಂದು ಹೇಳಿದರು. ಮಹಾರಾಷ್ಟ್ರದಿಂದ 30 ಟ್ರಕ್‌ ಈರುಳ್ಳಿ ಪೂರೈಕೆ:

ಜಿಲ್ಲೆಗೆ 30 ಟ್ರಕ್‌ ಈರುಳ್ಳಿ ಶನಿವಾರ ಪೂರೈಕೆ ಆಗಿದೆ. ನಾಗಪುರ, ನಾಸಿಕ್‌, ಪೂನಾ ಸೇರಿದಂತೆ ನಾನಾ ಭಾಗದಿಂದ 500ಕ್ಕೂ ಹೆಚ್ಚು ಟ್ರಕ್‌ಗಳಿಂದ ರಾಜ್ಯಕ್ಕೆ ಪೂರೈಕೆ ಆಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕೆ.ಜಿಗೆ 50 ರು. ಹೋಲ್‌ಸೇಲ್‌ ದರದಲ್ಲಿ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವು ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಒಂದೊಂದು ರೀತಿಯ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಮಧ್ಯಮ ಗಾತ್ರದ ಈರುಳ್ಳಿ 70 ರು. ಜತೆಗೆ ಹಲವು ದಿನಗಳವರೆಗೆ ಬಾಳಿಕೆ ಬರುವಂತಹ ಉತ್ತಮ ಗುಣಮಟ್ಟದ ಈರುಳ್ಳಿ 80-90 ರು.ವರೆಗೂ ಮಾರಾಟ ಮಾಡಲಾಗುತ್ತಿದೆ. ಗೌರಿ ಗಣೇಶ ಹಬ್ಬಕ್ಕೆ ಕೆಜಿಗೆ ರು. 100 ರ ಗಡಿ ಮುಟ್ಟಲಿದೆ ಎಂದು ಈರುಳ್ಳಿ ಸಗಟು ವ್ಯಾಪಾರಿ ವಿ.ಮೋಹನ್‌ ಹೇಳುತ್ತಾರೆ.ಈರುಳ್ಳಿ ಹಚ್ಚುವಾಗ ಕಣ್ಣಲ್ಲಿ ನೀರು ಬರುತ್ತದೆಯೋ ಇಲ್ಲವೂ ಗೊತ್ತಿಲ್ಲಾ. ಆದರೆ ಈರುಳ್ಳಿ ದರ ಕೇಳಿದರೆ ಮಾತ್ರ ಕಣ್ಣಲ್ಲಿ ನೀರು ಬರುತ್ತದೆ. ಬರ ಬಂದು ನಮ್ಮ ಭಾಗದಲ್ಲಿ ಈರುಳ್ಳಿ ಬೆಳೆದಿಲ್ಲಾ, ಬರ ಸೇರಿ ಮತ್ತಿತರ ಕಾರಣಗಳಿಂದ ಈಗ ಬೇಡಿಕೆಯಿದ್ದಷ್ಟು ಈರುಳ್ಳಿ ಪೂರೈಕೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಪಿಎಂಸಿ ಸೇರಿ ಹಲವು ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾಗಿದೆ ಎನ್ನುತ್ತಾರೆ ಗೃಹಿಣಿ ಗಾಯತ್ರಿ.

ಸಿಕೆಬಿ-1 ಮಾರುಕಟ್ಟೆಯಲ್ಲಿ ಬಂದಿರುವ ಈರುಳ್ಳಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಡಾನೆ ನಿಯಂತ್ರಣಕ್ಕೆ ರೈಲ್ವೆ ಬ್ಯಾರಿಕೇಡ್ ಒಂದೇ ಪರಿಹಾರ: ಗಾಂಧಿ ಗ್ರಾಮ ನಾಗರಾಜ್ ಸಲಹೆ
ಸಹಕಾರ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚಲಿ