ಹುಬ್ಬಳ್ಳಿ: ಎಪಿಎಂಸಿಗೆ ಸ್ಥಳೀಯ ಈರುಳ್ಳಿ ಆವಕ ಶುರು - ಸದ್ಯಕ್ಕೆ ಬೆಲೆ ಹೆಚ್ಚಳದ ಆತಂಕ ದೂರ

KannadaprabhaNewsNetwork |  
Published : Sep 14, 2024, 01:51 AM ISTUpdated : Sep 14, 2024, 12:56 PM IST
ಪೋಟೋ | Kannada Prabha

ಸಾರಾಂಶ

ಸೆ. 6ರ ವರೆಗೆ ಸ್ಥಳೀಯ ಈರುಳ್ಳಿ ಬರೀ ನೂರಾರು ಕ್ವಿಂಟಲ್ ಲೆಕ್ಕದಲ್ಲಿ ಬರುತ್ತಿತ್ತು. ಸೆ. 9ರಂದು 1432 ಕ್ವಿಂಟಲ್‌, 10ರಂದು 2074 ಕ್ವಿಂಟಲ್‌, 11ರಂದು 2024 ಕ್ವಿಂಟಲ್‌, ಗುರುವಾರ 2265 ಕ್ವಿಂಟಲ್‌ ಆವಕವಾಗಿದ್ದು, ಗುಣಮಟ್ಟದ ಈರುಳ್ಳಿ ₹3000 ರಿಂದ ₹4200 ವರೆಗೂ ಮಾರಾಟವಾಗಿದೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ: ರಾಜ್ಯದಲ್ಲಿ ಈ ಸಲ ಭಾರೀ ಮಳೆಯಿಂದಾಗಿ ಈರುಳ್ಳಿ ಬೆಳೆಗಾರರು ತೀವ್ರ ಕಳವಳಕ್ಕೀಡಾಗಿದ್ದರು. ಆದರೆ ನಿರೀಕ್ಷೆ ಹುಸಿಗೊಳಿಸಿ ಇಲ್ಲಿಯ ಎಪಿಎಂಸಿಗೆ ಸ್ಥಳೀಯ ಈರುಳ್ಳಿ ಆವಕ ಶುರುವಾಗಿದ್ದು, ಬೆಲೆ ಹೆಚ್ಚಳವಾಗುವ ಆತಂಕ ಸದ್ಯಕ್ಕೆ ನಿವಾರಣೆಯಾಗಿದೆ.

ಹೌದು, ಇಲ್ಲಿಯ ಎಪಿಎಂಸಿಗೆ ಪ್ರತಿವರ್ಷ ಸೆಪ್ಟೆಂಬರನಲ್ಲಿ ಸ್ಥಳೀಯ ಈರುಳ್ಳಿ ಆವಕ ಶುರುವಾಗುತ್ತದೆ. ನವಲಗುಂದ, ನರಗುಂದ, ಮುಧೋಳ, ಜಮಖಂಡಿ, ಬಾದಾಮಿ, ಬೆಳಗಾವಿ ಜಿಲ್ಲೆಯ ವಿವಿಧೆಡೆಯಿಂದಲೂ ಹುಬ್ಬಳ್ಳಿ ಎಪಿಎಂಸಿಗೆ ಈರುಳ್ಳಿ ಮಾರಾಟಕ್ಕೆ ಬರುತ್ತದೆ.

ಸೆ. 6ರ ವರೆಗೆ ಸ್ಥಳೀಯ ಈರುಳ್ಳಿ ಬರೀ ನೂರಾರು ಕ್ವಿಂಟಲ್ ಲೆಕ್ಕದಲ್ಲಿ ಬರುತ್ತಿತ್ತು. ಸೆ. 9ರಂದು 1432 ಕ್ವಿಂಟಲ್‌, 10ರಂದು 2074 ಕ್ವಿಂಟಲ್‌, 11ರಂದು 2024 ಕ್ವಿಂಟಲ್‌, ಗುರುವಾರ 2265 ಕ್ವಿಂಟಲ್‌ ಆವಕವಾಗಿದ್ದು, ಗುಣಮಟ್ಟದ ಈರುಳ್ಳಿ ₹3000 ರಿಂದ ₹4200 ವರೆಗೂ ಮಾರಾಟವಾಗಿದೆ. ಈ ಆವಕ ಹೆಚ್ಚಾದ ಬೆನ್ನಲ್ಲೆ ಕ್ವಿಂಟಲ್‌ಗೆ 5 ಸಾವಿರ ಗಡಿಗೆ ಬಂದು ತಲುಪಿದ್ದ ಮಹಾರಾಷ್ಟ್ರದ ಪುಣೆ ಈರುಳ್ಳಿ ಬೆಲೆ ₹4800 ಗೆ ಮಾರಾಟವಾಗುತ್ತಿದ್ದು, 2 ಸಾವಿರ ಕ್ವಿಂಟಲ್‌ ಆವಕ ಪ್ರಮಾಣ ಈಗ ಸಾವಿರ ಕ್ವಿಂಟಲ್‌ಗೆ ಬಂದಿದೆ. ಸ್ಥಳೀಯ ಈರುಳ್ಳಿ ಹಂಗಾಮು ಶುರುವಾಗುತ್ತಿದ್ದಂತೆ ಮಹಾರಾಷ್ಟ್ರದ ಈರುಳ್ಳಿ ಆವಕ ಸಹಜವಾಗಿ ಇಳಿಮುಖವಾಗುತ್ತದೆ ಎಂದು ಹೇಳುತ್ತಾರೆ ಇಲ್ಲಿಯ ಎಪಿಎಂಸಿ ಈರುಳ್ಳಿ ವ್ಯಾಪಾರಸ್ಥರು.

ಬೆಂಗಳೂರು, ಬೆಳಗಾವಿ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಸ್ಥಳೀಯ ಈರುಳ್ಳಿ ಮಾರಾಟಕ್ಕೆ ಬರುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಗುರುವಾರ ಪುಣೆ ಈರುಳ್ಳಿ ₹3500 ರಿಂದ ₹4500 ವರೆಗೂ ಮಾರಾಟವಾಗಿದೆ. ಸ್ಥಳೀಯ ಈರುಳ್ಳಿ ಬೆಳೆಯದ ಕರ್ನಾಟಕದ ಜಿಲ್ಲೆಗಳಲ್ಲಿ ಪುಣೆ ಈರುಳ್ಳಿಯೇ ವರ್ಷ ಪೂರ್ತಿ ಗ್ರಾಹಕರ ಬೇಡಿಕೆ ಈಡೇರಿಸುವುದು ವಿಶೇಷ.

ಕಳೆದ ಆಗಸ್ಟ್‌ ಮೊದಲ ವಾರದಲ್ಲಿ ಕೇಂದ್ರ ಅಧ್ಯಯನ ತಂಡ ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಈರುಳ್ಳಿ ಬೆಳೆಯುವ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿತ್ತು. ಈರುಳ್ಳಿ ಬೆಳೆಗಾರರು ಹಾಗೂ ವ್ಯಾಪಾರಸ್ಥರ ಸಭೆ ನಡೆಸಿ ಮಾಹಿತಿ ಪಡೆದಿತ್ತು.

ರಾಜ್ಯದ ಗದಗ, ಧಾರವಾಡ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಬೆಳೆಯುತ್ತಾರೆ. ಅತಿವೃಷ್ಟಿ, ಅನಾವೃಷ್ಟಿ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆಗೆ ತೀವ್ರ ಹೊಡೆತ ಬೀಳುತ್ತಿದ್ದು, ಬೆಲೆಯು ಸಹ ಸ್ಥಿರವಾಗಿರದ ಹಿನ್ನೆಲೆಯಲ್ಲಿ ಬಿತ್ತನೆ ಪ್ರದೇಶ ಈಚೆಗೆ ತೀವ್ರ ಕಡಿಮೆಯಾಗುತ್ತಿದೆ. ಹೆಸರುಕಾಳು ಸೇರಿದಂತೆ ಹತ್ತಿ ಇತರ ಬೆಳೆಗಳತ್ತ ರೈತರು ಚಿತ್ತ ಹರಿಸಿದ್ದಾರೆ.

ಕಳೆದ ಬಾರಿಗಿಂತ ಕಡಿಮೆ ಬಿತ್ತನೆ:

ಧಾರವಾಡ ಜಿಲ್ಲೆಯಲ್ಲಿ ಈ ಬಾರಿ 5447 ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆ ಗುರಿ ಹೊಂದಲಾಗಿತ್ತು. 6234 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಶೇ. 114. 45ರಷ್ಟು ಸಾಧನೆಯಾಗಿದೆ. ಹಿಂದಿನ ವರ್ಷದಲ್ಲಿ 6799 ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆಯಾಗಿದ್ದು, ಬರದ ಹಿನ್ನೆಲೆಯಲ್ಲಿ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸಬೇಕಾಯಿತು. ನವಲಗುಂದ ತಾಲೂಕಿನಲ್ಲಿ 3202 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಅತಿ ಹೆಚ್ಚು 3700 ಹೆಕ್ಟೇರ್ ಬಿತ್ತನೆಯಾಗಿದೆ. ಹುಬ್ಬಳ್ಳಿ ನಗರ ತಾಲೂಕಿನಲ್ಲಿ 8 ಹೆಕ್ಟೇರ್ ಗುರಿ ಇದ್ದು, ಅತಿ ಕಡಿಮೆ 4 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ.

ಮಹಾರಾಷ್ಟ್ರದಲ್ಲಿ ಈ ಬಾರಿ ಮಳೆಯಿಂದಾಗಿ ಈರುಳ್ಳಿ ಬೆಳೆ ನಾಶವಾಗಿದ್ದು, ಹೀಗಾಗಿ ರಾಜ್ಯದಲ್ಲಿ ಈರುಳ್ಳಿ ಅಭಾವ ತಲೆದೋರುವ ಸಾಧ್ಯತೆ ಇದೆ. ಬೆಲೆ ಈಗಲೇ ₹60 ದಾಟಿದೆ. ಸ್ಥಳೀಯ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಬಂದರೆ ಬೆಲೆ ಇಳಿಯಬಹುದು. ಬೇಡಿಕೆ ಹೆಚ್ಚಾಗಿ ಈರುಳ್ಳಿ ಕೊರತೆಯಾದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಈರುಳ್ಳಿ ಮಾರಾಟಗಾರ ಬಸವರಾಜ ಅಂಬಿಗೇರ ಹೇಳಿದರು.ಈಗಷ್ಟೇ ಈರುಳ್ಳಿ ಹಂಗಾಮು ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯ ಈರುಳ್ಳಿ ಮಾರುಕಟ್ಟೆ ಆಗಮಿಸಲಿದ್ದು, ಗ್ರಾಹಕರ ಬೇಡಿಕೆಯಂತೆ ಲಭಿಸಲಿದ್ದು, ಬೆಲೆ ಹೆಚ್ಚಳದ ಆತಂಕ ಹೊಂದುವುದು ಬೇಡ ಎಂದು ಈರುಳ್ಳಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಲೀಂ ಬ್ಯಾಹಟ್ಟಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ