ಎಎಸ್‌ಒ ಹೆಸರಿನ ಮೊಬೈಲ್ ಆ್ಯಪ್‌ನಲ್ಲಿ ಹಣ ಹೂಡಿಕೆ - ಆನ್‌ಲೈನ್‌ ದೋಖಾ: 10 ಕೋಟಿಗೂ ಅಧಿಕ ಪಂಗನಾಮ

KannadaprabhaNewsNetwork | Updated : Nov 01 2024, 12:27 PM IST

ಸಾರಾಂಶ

  ಅತೀ ಆಸೆಯಿಂದ ಎಎಸ್‌ಒ ಹೆಸರಿನ ಮೊಬೈಲ್ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದ ಸಾವಿರಕ್ಕೂ ಹೆಚ್ಚು ಜನರು ಸುಮಾರು 10 ಕೋಟಿಗೂ ಹೆಚ್ಚಿನ ಹಣ ಕಳೆದುಕೊಂಡಿರುವ ಅನ್‌ಲೈನ್ ದೋಖಾ ಪ್ರಕರಣ ಹೊಸದುರ್ಗದಲ್ಲಿ ನಡೆದಿದ್ದು, ಹಣ ಕಳೆದುಕೊಂಡ ಜನರು ಕಂಗಾಲಗಿದ್ದಾರೆ.

ಹೊಸದುರ್ಗ: ಅತೀ ಆಸೆಯಿಂದ ಎಎಸ್‌ಒ ಹೆಸರಿನ ಮೊಬೈಲ್ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದ ಸಾವಿರಕ್ಕೂ ಹೆಚ್ಚು ಜನರು ಸುಮಾರು 10 ಕೋಟಿಗೂ ಹೆಚ್ಚಿನ ಹಣ ಕಳೆದುಕೊಂಡಿರುವ ಅನ್‌ಲೈನ್ ದೋಖಾ ಪ್ರಕರಣ ಹೊಸದುರ್ಗದಲ್ಲಿ ನಡೆದಿದ್ದು, ಹಣ ಕಳೆದುಕೊಂಡ ಜನರು ಕಂಗಾಲಗಿದ್ದಾರೆ.

ವಾಟ್ಸಪ್‌ ಗ್ರೂಪ್ ಮೂಲಕ ಜನರನ್ನು ಅಕರ್ಷಿಸಿದ ಅನಾಮಿಕ ವಂಚಕರು ಹಣಕ್ಕೆ ಹೆಚ್ಚಿನ ಮರುಪಾವತಿ ಮಾಡುವ ಆಸೆ ತೋರಿಸಿ ಜನರಿಂದ 2 ಸಾವಿರದಿಂದ 57 ಸಾವಿರದವರಗೆ ಹೂಡಿಕೆ ಮಾಡಿಸಿದ್ದಾರೆ. ಅಧಿಕೃತ ಮಾಹಿತಿಯಿಲ್ಲದೆ ಒಬ್ಬರಿಂದ ಒಬ್ಬರಿಗೆ ಮೊಬೈಲ್‌ ಮೂಲಕ ಪರಿಚಯವಾದ ಆ್ಯಪ್‌ನಲ್ಲಿ ಕಳೆದ ಎರಡು ತಿಂಗಳಿಂದ ಹಣ ಹೂಡಿಕೆ ಜೋರಾಗಿ ನಡೆಯುತಿತ್ತು. ಪ್ರತಿ ಶುಕ್ರವಾರ ಹಣವನ್ನು ವ್ಯಾಲೆಟ್‌ನಿಂದ ಹೂಡಿಕೆದಾರರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತಿತ್ತು. 

ಎರಡು ತಿಂಗಳು ನಿಗದಿತವಾಗಿ ಹಣ ಮರುಪಾವತಿ ಮಾಡಿದ ವಂಚಕರು ಅಕ್ಟೋಬರ್ 10 ರಿಂದ ಅಡಿಟ್ ನಡೆಯುತ್ತಿದೆ, ಕೇಂದ್ರ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಾಬೇಕಾಗಿದೆ ಎನ್ನುವ ನೆಪ ನೀಡಿ ಹಣ ವರ್ಗಾವಣೆ ನಿಲ್ಲಿಸಿದ್ದಾರೆ.ಎರಡು ಶುಕ್ರವಾರ ಕೂಡ ವಿವಿಧ ಕಾರಣ ನೀಡಿ ಹಣ ನೀಡಿಲ್ಲ. ಅಕ್ಟೋಬರ್ 25 ರಂದು ಆ್ಯಪ್‌ ನ ಪುಟ ತೆರೆದುಕೊಳ್ಳದೆ ಪುನಃ 6 ಸಾವಿರದಿಂದ 20 ಸಾವಿರದವರಗೆ ಹೂಡಿಕೆ ಮಾಡಿದರೆ ಆ್ಯಪ್‌ ರಿಆ್ಯಕ್ಟಿವ್ ಆಗುವ ಮೂಲಕ ಬಾಕಿಯಿರುವ ಹಣ ನಿಮ್ಮ ಖಾತೆಗೆ ಜಮಾ ಆಗುವುದಾಗಿ ಸಂದೇಶ ಕಾಣಿಸಿಕೊಂಡಿದೆ.

ಲಕ್ಷಗಟ್ಟಲೆ ಹಣ ಬರಬೇಕಾಗಿದ್ದ ಹೂಡಿಕೆದಾರರು ಮತ್ತೆ ವಂಚಕರ ಮಾತು ನಂಬಿ ಹಣ ಹಾಕಿದ್ದಾರೆ. ಹಣ ಹಾಕಿದ ನಂತರ ಮತ್ತೆ ಅರಂಭವಾದ ಆ್ಯಪ್‌ನಲ್ಲಿ ಹಣ ಮರುಪಾವತಿ ಪ್ರಕ್ರಿಯೆ ಅರಂಭವಾಗಿದೆ. 

ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ. ಅಂತಿಮವಾಗಿ ಅಕ್ಟೋಬರ್ 28 ರಂದು ಎಎಸ್‌ಒ ಆ್ಯಪ್‌ ಅನ್‌ಲೈನ್ ನಿಂದ ಮಾಯವಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ನಿರೀಕ್ಷಿಸಿ ಹಣ ಹೂಡಿಕೆ ಮಾಡಿದ ಸಾವಿರಾರು ಜನರು ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.

ಘಟನೆಯ ಹಿನ್ನಲೆ : ಯುನೈಟೆಡ್ ಕಿಂಗ್‌ಡಮ್ ನ ನಂಬರ್ ಹೊಂದಿರುವ ಮೀನಾ ಬ್ರೌನ್ ಎನ್ನುವ ಮಹಿಳೆಯ ಹೆಸರಿನಲ್ಲಿ ರಚನೆಯಾಗಿರುವ ವಾಟ್ಸಪ್‌ ಗ್ರೂಪ್‌ ಮೂಲಕ ಆ್ಯಪ್‌ ಕಾರ್ಯಾಚರಣೆ ನಡೆಸುತಿತ್ತು. ಕನ್ನಡದಲ್ಲಿಯೇ ಗ್ರೂಪ್ ಚಾಟ್ ಮಾಡುವ ಮೂಲಕ ಹೂಡಿಕೆದಾರರನ್ನು ನಿಯಂತ್ರಿಸಲಾಗುತಿತ್ತು.6 ಸಾವಿರ ಹೂಡಿಕೆಗೆ ದಿನನಿತ್ಯ 220 ರುಪಾಯಿ, 19700 ಹೂಡಿಕೆಗೆ ದಿನನಿತ್ಯ 760 ರುಪಾಯಿ, 57 ಸಾವಿರ ಹೂಡಿಕೆಗೆ ನಿತ್ಯ 2200 ರು ನೀಡಲಾಗುತಿತ್ತು. ಅಲ್ಲದೆ 10 ಸಾವಿರ ಹೂಡಿಕೆಗೆ 13 ದಿನಗಳ ನಂತರ 47 ಸಾವಿರ ನೀಡುವುದಾಗಿ ತಿಳಿಸಿ ಹೂಡಿಕೆ ಮಾಡಿಸಿ ಯಾರಿಗೂ ಹಣ ನೀಡದೆ ವಂಚನೆ ಮಾಡಲಾಗಿದೆ.

ವಿದೇಶದ ಮೂಲಕ ವಂಚನೆ ಜಾಲ ವ್ಯವಸ್ಥಿತವಾಗಿ ಜನರನ್ನು ವಂಚಿಸಿದೆ. ಲಕ್ಷಾಂತರ ಹಣ ಕಳೆದುಕೊಂಡಿರುವ ಜನರು ವಂಚಕರನ್ನು ಹಿಡಿಯಲಾಗದೆ, ಪೋಲಿಸ್ ಠಾಣೆಗೆ ದೂರು ಕೂಡ ಸಲ್ಲಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುವ ನಾನು ಕೂಡಿಟ್ಟಿದ ಹಣವನ್ನು ಎಎಸ್‌ಒ ಆ್ಯಪ್‌ನಲ್ಲಿ ಹೂಡಿಕೆ ಮಾಡಿದ್ದೆ. ಮೊದಲ ಎರಡು ಮೂರು ವಾರ ಸರಿಯಾಗಿ ಹಣ ನೀಡಿದ ವಂಚಕರು ನಂತರ ಹಣ ನೀಡದೆ ವಂಚಿಸಿದ್ದಾರೆ. ನನ್ನಂತಹ ಸುಮಾರು ಜನರು ಇದರಲ್ಲಿ ಹಣ ಹಾಕಿ ಕಳೆದುಕೊಂಡಿದ್ದಾರೆ. ಇದರ ಜಾಲ ತಾಲೂಕಿನ ತುಂಬಾ ಹರಡಿದೆ 

- ಹೆಸರು ಹೆಳಲು ಇಚ್ಛಿಸದ ಯುವಕ, ಹೊಸದುರ್ಗ.

Share this article