- ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾಥಮಿಕ-ಪ್ರೌಢಶಾಲೆಗಳ ತಾಲೂಕುಮಟ್ಟದ ಕ್ರೀಡಾಕೂಟ
ಕನ್ನಡಪ್ರಭ ವಾರ್ತೆ ದಾವಣಗೆರೆ
ಜೀವನದಲ್ಲಿ ಮನುಷ್ಯ ಶ್ರಮಪಡಬೇಕು. ಸೂಕ್ತ ರೀತಿಯಲ್ಲಿ ಶ್ರಮಪಟ್ಟರೆ ಮಾತ್ರ ಪ್ರತಿಫಲ ಸಿಗುತ್ತದೆ. ನಾನು ಶ್ರಮಪಟ್ಟಿದ್ದಕ್ಕೆ ಎಂಎಲ್‌ಎ ಆದೆ. ಶ್ರಮ ಪಡದೇ ಮನೆಯೊಳಗೆ ಕುಳಿತ್ತಿದ್ದರೆ ಎಂಎಲ್‌ಎ ಆಗುತ್ತಿರಲಿಲ್ಲ. ನೀವು ಸಹ ಕಠಿಣ ಶ್ರಮಪಟ್ಟರೆ ಮಾತ್ರ ಯಶಸ್ವಿ ಕ್ರೀಡಾಪಟುಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಉತ್ತರ ವಲಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲೂಕುಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೀವನದಲ್ಲಿ ಎದ್ದು, ಬಿದ್ದು, ಎದ್ದು ಬರುವ ಮಕ್ಕಳು ಸಾಧನೆ ಮಾಡುತ್ತಾರೆ. ಸೂಕ್ಷ್ಮತೆಯಿಂದ ಇರುವವರಿಂದ ಸಾಧನೆ ಸಾಧ್ಯವಿಲ್ಲ. ಮಕ್ಕಳು ಎಷ್ಟು ಬಾರಿ ಬಿದ್ದರೂ ಅವರ ಮುಂದಿನ ಭವಿಷ್ಯದಲ್ಲಿ ಒಳ್ಳೆಯದೇ ಆಗುತ್ತದೆ. ಆ ರೀತಿಯಲ್ಲಿ ದೈಹಿಕ ಶಿಕ್ಷಕರು ಮಕ್ಕಳನ್ನು ತಯಾರು ಮಾಡಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿಶಾಲಾಕ್ಷಿ, ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಕ್ರೀಡಾಧಿಕಾರಿಗಳು, ದೈಹಿಕ ಶಿಕ್ಷಕರು ಹಾಗೂ ಕ್ರೀಡಾಪಟುಗಳು ಭಾಗವಹಿಸಿದ್ದರು.
(ಕೋಟ್) ವಿದ್ಯಾರ್ಥಿಗಳು ಬರೀ ಓದಿಗಷ್ಟೇ ಸೀಮಿತವಾಗದೇ, ಕ್ರೀಡೆಗಳಲ್ಲಿಯೂ ಭಾಗವಹಿಸಿ ಪ್ರತಿಭೆ ತೋರಬೇಕು. ಉತ್ತಮ ಆರೋಗ್ಯ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಶೈಕ್ಷಣಿಕ ಅವಧಿಗಳಲ್ಲಿ ಕ್ರೀಡೆಗೂ ಸಮಯ ನೀಡಲಾಗಿದೆ. ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸಾಧ್ಯ. ನಿಯಮಿತ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೇಹದ ತೂಕ ನಿರ್ವಹಣೆ, ಹೃದಯ ರಕ್ತನಾಳದ ಆರೋಗ್ಯ ಸುಧಾರಿಸುವುದು. ಮಧುಮೇಹ, ಅಧಿಕ ರಕ್ತದೊತ್ತಡದಂತಹ ದೀರ್ಘ ಕಾಲದ ಕಾಯಿಲೆಗಳ ಅಪಾಯ ಕಡಿಮೆ ಮಾಡಬಹುದು.
- - -
ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಉತ್ತರ ವಲಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಚಾಲನೆ ನೀಡಿ ಮಾತನಾಡಿದರು.