ಶಿಕಾರಿಪುರ: ಹೆಚ್ಚಿನ ಆದಾಯದ ಹಿಂದೂ ದೇವಾಲಯಗಳನ್ನು ಮಾತ್ರ ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಗೆ ಪಡೆದುಕೊಳ್ಳುವ ಸರ್ಕಾರದ ಚಿಂತನೆ ಬಗ್ಗೆ ಶಿಕಾರಿಪುರದ ವೀರಶೈವ ಜಂಗಮ ಪುರೋಹಿತ ಅರ್ಚಕರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರ ಚಿಂತನೆ ವಾಪಸ್ ಪಡೆಯುವಂತೆ ಆಗ್ರಹಿಸಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಪ್ರಭುಸ್ವಾಮಿ ಮಾತನಾಡಿ, ರಾಜ್ಯಾದ್ಯಂತ ಪ್ರಸಿದ್ಧ ಹಿಂದೂ ದೇವಾಲಯಗಳು ಈಗಾಗಲೇ ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಯಲ್ಲಿವೆ. ದೇವಾಲಯದ ವಾರ್ಷಿಕ ಕೋಟ್ಯಂತರ ಆದಾಯವನ್ನು ಇತರೇ ಸಮುದಾಯದ ಅಭಿವೃದ್ಧಿಗೆ ಬೇಕಾಬಿಟ್ಟಿ ವಿನಿಯೋಗಿಸಲಾಗುತ್ತಿದೆ. ಇದೀಗ ಪುನಃ ಹೆಚ್ಚಿನ ಆದಾಯ ಹೊಂದಿದ 150ಕ್ಕೂ ಅಧಿಕ ದೇವಾಲಯಗಳನ್ನು ಇಲಾಖೆಯ ಸುಪರ್ದಿಗೆ ಪಡೆಯುವ ಚಿಂತನೆ ನಡೆಸಿದೆ. ಸರ್ಕಾರದ ಈ ಧೋರಣೆ ಸಂಪೂರ್ಣ ಹಿಂದೂ ವಿರೋಧಿಯಾಗಿದ್ದು, ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.ರಾಜ್ಯ ಸರ್ಕಾರ ದೇವಾಲಯದಲ್ಲಿ ಸಂಗ್ರಹವಾಗುವ ಎಲ್ಲ ಕಾಣಿಕೆ ಹಣ, ದೇಣಿಗೆ ಹಣ, ಹರಕೆ ಹಣವನ್ನು ದೇವಾಲಯದ ಅಭಿವೃದ್ಧಿಗೆ ವಿನಿಯೋಗಿಸುವ ಕಾಯ್ದೆ ಜಾರಿಗೊಳಿಸಬೇಕು. ಮುಜರಾಯಿ ಆಡಳಿತ ದೇವಾಲಯದಲ್ಲಿನ ರಥೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ಕೆ ಹೆಚ್ಚಿನ ಅನುದಾನ ನೀಡದೇ ಕಡೆಗಣಿಸಿದ ಪರಿಣಾಮ ದೇವಾಲಯದಲ್ಲಿನ ಧಾರ್ಮಿಕ ಕಾರ್ಯಗಳಿಗೆ ಹಿನ್ನಡೆ ಆಗುತ್ತಿದೆ. ಈ ಕೂಡಲೇ ಎಲ್ಲ ದೇವಾಲಯಗಳಿಗೆ ಸ್ಥಳೀಯ ಭಕ್ತರ ನೇತ್ತೃತ್ವದಲ್ಲಿ ಸಮಿತಿ ರಚಿಸಿ ಎಲ್ಲ ಅಧಿಕಾರ ನೀಡಬೇಕು ಎಂದು ಆಗ್ರಹಿಸಿದರು.
ಅನಂತರದಲ್ಲಿ ಹಿಂದೂ ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ಒಳಪಡಿಸುವ ಚಿಂತನೆ ಕೈಬಿಡುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಸಂಘದ ಮುಖಂಡ ಶಿವಯ್ಯ ಶಾಸ್ತ್ರಿ, ಮಹಾಂತಯ್ಯ ಗಾಮ, ಪುಟ್ಟಯ್ಯ, ಯೋಗೀಶ್ವರಯ್ಯ, ಶಿವಕುಮಾರ ಕವಲಿ, ಪ್ರದೀಪ್, ಮೃತ್ಯುಂಜಯ, ಈರಯ್ಯ, ಚನ್ನವೀರಯ್ಯ ಮತ್ತಿತರರು ಹಾಜರಿದ್ದರು.
- - - (** ಈ ಪೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಬಹುದು) -31ಕೆಎಸ್.ಕೆಪಿ2:ಹಿಂದೂ ದೇವಾಲಯಗಳನ್ನು ಧಾರ್ಮಿಕ ದತ್ತಿ ಇಲಾಖೆಗೆ ವಶಪಡಿಸಿಕೊಳ್ಳುವ ಚಿಂತನೆ ಸರ್ಕಾರ ಕೂಡಲೇ ಕೈಬಿಡುವಂತೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ಶಿಕಾರಿಪುರ ತಾಲೂಕು ವೀರಶೈವ ಜಂಗಮ ಪುರೋಹಿತ ಅರ್ಚಕ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಅಧ್ಯಕ್ಷ ಪ್ರಭುಸ್ವಾಮಿ, ಶಿವಯ್ಯ ಶಾಸ್ತ್ರಿ, ಮಹಾಂತಯ್ಯ ಗಾಮ, ಪುಟ್ಟಯ್ಯ ಮುಂತಾದವರಿದ್ದರು.