ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ರಾಜ್ಯ ಸರ್ಕಾರ ಎರಡು ವರ್ಷಗಳ ನಂತರ ರಾಜ್ಯದ ಗೋಶಾಲೆಗಳಿಗೆ ಕೇವಲ ಒಂದು ತಿಂಗಳ ಅನುದಾನವನ್ನು ಮಂಜೂರು ಮಾಡುವ ಮೂಲಕ ಕಣ್ಣೊರೆಸುವ ತಂತ್ರ ಮಾಡಿದೆ ಎಂದು ಕೊಪ್ಪ ತಾಲೂಕಿನ ಹೇರೂರಿನ ಕೆಮ್ಮಣ್ಣು ಗ್ರಾಮದ ಶ್ರೀ ಕಾಮಧೇನು ಗೋಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ್ ಅಂಗೀರಸ ಅವರು ಆರೋಪಿಸಿದ್ದಾರೆ.2023-24ರಲ್ಲಿ ಗೋಶಾಲೆಗಳಿಗೆ ಒಂದು ರುಪಾಯಿ ಅನುದಾನ ನೀಡದ ರಾಜ್ಯ ಸರ್ಕಾರ 2024-25 ನೇ ಸಾಲಿನಲ್ಲಿ ಕೇವಲ ಒಂದು ತಿಂಗಳ ಅನುದಾನವನ್ನು ಮಾತ್ರ ಬಿಡುಗಡೆ ಮಾಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗೋಶಾಲೆ ಹಾಗೂ ಗೋವುಗಳಿಗೆ ನೀಡಬೇಕಾಗಿದ್ದ ಅನುದಾನವನ್ನು ರಾಜ್ಯ ಸರ್ಕಾರ ಮತ ಬರುವ ಬಿಟ್ಟಿ ಭಾಗ್ಯಗಳಿಗೆ ಬಳಸಿ ಗೋವುಗಳ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಇದನ್ನು ಪ್ರಶ್ನಿಸಬೇಕಾಗಿದ್ದ ಹಿಂದುತ್ವ ಸಿದ್ಧಾಂತದ ಹೆಸರಿನ ಬಿಜೆಪಿಯ ಜಾಣ ಮೌನ ಖಂಡನೀಯ ಎಂದರು.
ಚಿಕ್ಕಮಗಳೂರು ಜಿಲ್ಲೆಯು ಸೇರಿದಂತೆ ರಾಜ್ಯದಲ್ಲಿ ಗೋ ಕಳ್ಳತನ, ಅಕ್ರಮ ಸಾಗಾಟ, ಹತ್ಯೆ ಮಿತಿ ಮೀರಿದ್ದು, ರಸ್ತೆ ಬದಿ, ಬಸ್ ನಿಲ್ದಾಣದ ಪಕ್ಕ ಅರಣ್ಯ ನದಿ ಪಾತ್ರಗಳಲ್ಲಿ ಗೋಮಾಂಸ ತಯಾರಿಸುವ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಪೂರ್ಣ ಪ್ರಮಾಣದ ಗೋವುಗಳ ನಾಶವೇ ನಮ್ಮ ಆದ್ಯತೆಯೆಂದು ರಾಜ್ಯ ಸರ್ಕಾರ ಕಟಿಬದ್ಧವಾಗಿರುವಂತೆ ಕಂಡುಬರುತ್ತದೆ ಎಂದು ದೂಷಿಸಿದರು.ರಾಜ್ಯದ ಪಶ್ಚಿಮ ಘಟ್ಟದ ಕಾಫಿ, ಟೀ ಎಸ್ಟೇಟ್, ರಬ್ಬರ್ ಎಸ್ಟೇಟ್‌ಗಳಲ್ಲಿ ಅಸ್ಸಾಂನ ಕೆಲವು ವ್ಯಕ್ತಿಗಳು ಸದ್ದಿಲ್ಲದೆ ಗೋವುಗಳನ್ನು ಕಡಿದು ಮಾಂಸಗಳನ್ನು ವಿತರಿಸುವ ಜಾಲವೇ ಸೃಷ್ಟಿಯಾಗಿದೆ. ಅನೇಕ ಕಡೆ ಆಡಳಿತ ವರ್ಗ ಇವರಿಗೆ ಬೆಂಬಲ ನೀಡುತ್ತಿದೆ ಎಂದರು.
ಗಡಿ ಚೆಕ್ ಪೋಸ್ಟ್‌ಗಳನ್ನು ಬಿಗಿಗೊಳಿಸಬೇಕು, ವೃತ್ತಿಪರ ಗೋವು ಕಳ್ಳರಿಗೆ ಪೊಲೀಸ್ ಠಾಣೆಗಳಲ್ಲಿ ಪೆರೇಡ್ ನಡೆಸುವ ಮೂಲಕ ಎಚ್ಚರಿಕೆ ಕೊಡಬೇಕೆಂದರು. ಎಸ್ಟೇಟ್‌ಗಳ ಕಾಡಂಚಿನಲ್ಲಿ ಕಾಟಿ, ಕಡ, ಜಿಂಕೆಯಂತಹ ಪ್ರಾಣಿಗಳನ್ನು ಕಡಿದು ಸದ್ದಿಲ್ಲದೆ ಮಾಂಸ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಗಮನಹರಿಸಬೇಕು ಎಂದು ಆಗ್ರಹಿಸಿದರು.