ಅಣ್ಣಾಸಾಹೇಬ ತೆಲಸಂಗ
ಹೆಚ್ಚುವರಿ ಸಿಬ್ಬಂದಿ ಅಗತ್ಯ
1834 ರಲ್ಲಿ ರಾಜ್ಯದ ಮೊಟ್ಟ ಮೊದಲ ಪುರಸಭೆ ಸ್ಥಾಪನೆಯಾಗಿದ್ದು ಅಥಣಿ ಪಟ್ಟಣದಲ್ಲಿ. ಪುರಸಭೆ ಶೀಘ್ರದಲ್ಲಿಯೇ ನಗರಸಭೆಯಾಗಿ ಪರಿವರ್ತನೆ ಹೊಂದುವ ಹಂತದಲ್ಲಿದೆ. ಅಲ್ಲದೇ, ಪುರಸಭೆ ಜೊತೆಗೆ ಸ್ಥಾಪನೆಯಾಗಿರುವ ಅಥಣಿ ಪೊಲೀಸ್ ಠಾಣೆಯೂ ಹಾಗೇ ಇದೆ. ಇಲ್ಲಿ ಕೇವಲ 33 ಸಿಬ್ಬಂದಿ ಜೊತೆಗೆ ಅಥಣಿ ಪಟ್ಟಣ ಸೇರಿದಂತೆ 65 ಹಳ್ಳಿಗಳ ಬೀಟ್ ವ್ಯವಸ್ಥೆಯನ್ನು ಹೊಂದಿದೆ. ಡಿವೈಎಸ್ಪಿ 1, ಸಿಪಿಐ 1, ಪಿಎಸ್ಐ 3, ಎಎಸ್ಐ 6, ಪೊಲೀಸ್ ಸಿಬ್ಬಂದಿ 33(7 ಖಾಲಿ) ಇದೆ. ಈ ಸಿಬ್ಬಂದಿಗಳಲ್ಲಿ ವಾಹನ ಚಾಲಕರು, ಠಾಣಾ ಸಿಬ್ಬಂದಿ, ನ್ಯಾಯಾಲಯ ಪ್ರಕರಣಗಳ ಸಿಬ್ಬಂದಿ, ಅಪರಾಧ ಪ್ರಕರಣಗಳ ಪತ್ತೆ, ಸಮನ್ಸ್ ವರದಿಗಳು, ಗುಪ್ತಚರ ಮಾಹಿತಿ ಹೀಗೆ ಬೇರೆ ಬೇರೆ ಕೆಲಸಗಳಿಗೆ ನಿಯೋಜಿಸಿದ ಸಿಬ್ಬಂದಿಗಳನ್ನು ಹೊರತುಪಡಿಸಿದರೆ ಪ್ರತಿ ಗ್ರಾಮಗಳಿಗೆ ಕರ್ತವ್ಯಕ್ಕೆ ನಿಯೋಜಿಸಲು ಬೀಟ್ ಸಿಬ್ಬಂದಿಯೇ ಇಲ್ಲದಂತಾಗುತ್ತಿದೆ.ಕಟ್ಟಡ ಶಿಥಿಲಾವಸ್ಥೆಗೆ
ಅಥಣಿ ಪೊಲೀಸ್ ಠಾಣೆಯನ್ನು 1965 ರಲ್ಲಿ ನಿರ್ಮಿಸಲಾಗಿದ್ದು, ಶಿಥಿಲಾವಸ್ಥೆಯ ಹಳೆಯ ಕಟ್ಟಡದಲ್ಲಿಯೇ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಪೊಲೀಸ್ ಸಿಬ್ಬಂದಿಗೆ ಕೇವಲ 36 ವಸತಿ ಗೃಹಗಳಿವೆ. ಹೆಚ್ಚುವರಿ ಸಿಬ್ಬಂದಿ ಮತ್ತು ಕೆಲವು ಅಧಿಕಾರಿಗಳು ಬಾಡಿಗೆ ಮನೆಗಳಲ್ಲಿ ವಾಸಿಸುವ ಪರಿಸ್ಥಿತಿ ಇದೆ. ಶಾಸಕರಾದ ಲಕ್ಷ್ಮಣ ಸವದಿ ಹಾಗೂ ರಾಜ್ಯ ಸರ್ಕಾರ ಈ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಅಥಣಿ ಗ್ರಾಮೀಣ ಪೊಲೀಸ್ ಠಾಣೆಯ ಆರಂಭಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂಬುದು ಜನರ ನಿರೀಕ್ಷೆ.ಹೆಚ್ಚುತ್ತಿರುವ ಅಪರಾಧ ಪ್ರಕರಣ
ಅಥಣಿ ತಾಲೂಕಿನಲ್ಲಿ ಆರ್‌ಟಿಓ ಕಚೇರಿ ಸ್ಥಾಪನೆ ಮಾಡಲಾಗಿದ್ದು, ಪಟ್ಟಣದಲ್ಲಿಯೂ ಅಪರಾಧ ಪ್ರಕರಣ, ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಮಹಾರಾಷ್ಟ್ರದ ಗಡಿಭಾಗ ಹೊಂದಿರುವುದರಿಂದ ಇಲ್ಲಿ ನಿತ್ಯ ಅಕ್ರಮ ದಂಧೆ, ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅಥಣಿ ಪಟ್ಟಣದಲ್ಲಿ ಎರಡು ಪ್ರಮುಖ ರಾಜ್ಯ ಹೆದ್ದಾರಿಗಳು ಹಾದು ಹೋಗುವುದರಿಂದ ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿ. ಇವುಗಳ ನಿಯಂತ್ರಣಕ್ಕೆ ಪಟ್ಟಣದಲ್ಲಿರುವ ಪೊಲೀಸ್ ಠಾಣೆ ಜೊತೆಗೆ ಗ್ರಾಮೀಣ ಪೊಲೀಸ್ ಠಾಣೆ ಬಹಳ ಅಗತ್ಯವಾಗಿದೆ.ಬೇಕಿದೆ ಉಪಠಾಣೆಗಳು
ಕೃಷ್ಣಾ ನದಿ ತೀರದ ಸತ್ತಿ ಗ್ರಾಮದಲ್ಲಿ ಮತ್ತು ತಾಲೂಕಿನ ಉತ್ತರ ಭಾಗದ ಕಲೋತಿ ಗ್ರಾಮದಲ್ಲಿ ಉಪಠಾಣೆ ಸ್ಥಾಪಿಸಲಾಗಿದ್ದು, ಅಲ್ಲಿ ಸಿಬ್ಬಂದಿಗಳಿಲ್ಲದೆ ಕಚೇರಿಗಳಿಗೆ ಬೀಗಮುದ್ರೆ ಹಾಕಲಾಗಿದೆ. ಹೀಗಾಗಿ ಜನರು ಅಥಣಿಗೆ ಬರಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ತಾಲೂಕಿನ ಉಪಠಾಣೆಗಳಿಗೆ ಕನಿಷ್ಠ ಐದು ಜನ ಸಿಬ್ಬಂದಿಗಳನ್ನು ನೇಮಿಸಿದರೆ ಆಯಾ ಠಾಣೆಯ ವ್ಯಾಪ್ತಿಯ 10 ಗ್ರಾಮಗಳ ಜನರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸಲು ಸಹಕಾರಿಯಾಗುತ್ತದೆ.ಹೆಚ್ಚುತ್ತಿರುವ ಅಪಘಾತಗಳು
ಅಥಣಿ ತಾಲೂಕಿನಲ್ಲಿ ಈಗ ಉತ್ತಮ ರಸ್ತೆಗಳು ನಿರ್ಮಾಣವಾಗಿದ್ದು, ಜೇವರ್ಗಿ - ಸಂಕೇಶ್ವರ ಮತ್ತು ಜತ್ - ಜಾಂಬೋಟ್ ಎರಡು ರಾಜ್ಯ ಹೆದ್ದಾರಿಗಳು ಅಥಣಿ ಪಟ್ಟಣದ ಮಾರ್ಗವಾಗಿ ಹಾದು ಹೋಗುವುದರಿಂದ ವಾಹನಗಳು ಶರವೇಗದಲ್ಲಿ ಸಂಚರಿಸಿ ಮೇಲಿಂದ ಮೇಲೆ ಅಪಘಾತಗಳು ಹೆಚ್ಚಾಗುತ್ತಿವೆ. ತರಕಾರಿ ಮಾರುಕಟ್ಟೆಯಲ್ಲಿ ಮೊಬೈಲ್ ಕಳ್ಳರ ಹಾವಳಿ ಅಧಿಕವಾಗಿದೆ. ಒಂಟಿ ಮಹಿಳೆಯರ ಚಿನ್ನದ ಸರ ಕದಿಯುವ ಪ್ರಕರಣ, ದರೋಡೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಈಗಿರುವ ಪೊಲೀಸ್ ಸಿಬ್ಬಂದಿ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳು, ಸಂಬಂಧಪಟ್ಟ ಸಚಿವರು ಅಥಣಿ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೆ ಏರಿಸಿ ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸಬೇಕು. ಬೆಳಗಾವಿಯ ಚಳಿಗಾಲ ಅಧಿವೇಶನದ ಈ ಸಂದರ್ಭದಲ್ಲಿ ಅಥಣಿ ಗ್ರಾಮೀಣ ಪೊಲೀಸ್ ಠಾಣೆಯನ್ನು ಮಂಜೂರು ಮಾಡುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಅಥಣಿ ನಾಗರಿಕರ ಒತ್ತಾಯ.-------
ಕೋಟ್ಅಥಣಿ ಗ್ರಾಮೀಣ ಪೊಲೀಸ್ ಠಾಣೆಯ ಮಂಜೂರಾತಿಗಾಗಿ ಈಗಾಗಲೇ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪೊಲೀಸ್ ಸಿಬ್ಬಂದಿಗಳ ಕೊರತೆಯಿದ್ದು, ಇರುವ ಸಿಬ್ಬಂದಿಯಲ್ಲಿ ಹೊಂದಾಣಿಕೆ ಮಾಡಿ ಕರ್ತವ್ಯಕ್ಕೆ ನಿಯೋಜಿಸುತ್ತೇವೆ.
ಪ್ರಶಾಂತ್ ಮುನ್ನೊಳ್ಳಿ, ಡಿವೈಎಸ್ಪಿ ಅಥಣಿ.-----
ವಿಶಾಲವಾದ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಅಥಣಿ ಪಟ್ಟಣಕ್ಕೆ ಮತ್ತು ಗ್ರಾಮೀಣ ಪ್ರದೇಶಕ್ಕೆ ಪ್ರತ್ಯೇಕ ಪೊಲೀಸ್ ಠಾಣೆಗಳ ಅಗತ್ಯವಿದೆ. ಶತಮಾನಗಳಿಂದಲೂ ಒಂದೇ ಪೊಲೀಸ್ ಠಾಣೆ ಇದ್ದು, ಸತ್ತಿ ಮತ್ತು ಕಲೋತಿ ಗ್ರಾಮಗಳ ಹೊರಠಾಣೆಗಳಿಗೆ ಅಗತ್ಯ ಸಿಬ್ಬಂದಿ ನೇಮಿಸಬೇಕು. ಪಟ್ಟಣದ ಠಾಣೆಯನ್ನು ಮೇಲ್ದರ್ಜೆಗೆ ಏರಿಸಿ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು.- ಪ್ರಶಾಂತ್ ತೋಡಕರ, ಅಧ್ಯಕ್ಷರು, ಅಥಣಿ ಜಿಲ್ಲಾ ಹೋರಾಟ ಸಮಿತಿ.
--------ಕೋಟ್
ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಯಾವ ರಾತ್ರಿ ಎಲ್ಲಿ ಕಳ್ಳತನ ಆಗುತ್ತದೆ ಎಂಬ ಆತಂಕ ಜನರನ್ನು ಕಾಡುತ್ತಿದೆ. ರಾತ್ರಿ ವೇಳೆ ಗಸ್ತು ತಿರುಗಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಿಸುವುದು ಅಗತ್ಯವಾಗಿದೆ.ಅಶೋಕ ಕೆಂಗಣ್ಣನವರ, ಸಾಮಾಜಿಕ ಕಾರ್ಯಕರ್ತ