ಕನ್ನಡಪ್ರಭ ವಾರ್ತೆ ಮಂಡ್ಯ
ನೋಂದಾಯಿತ ರಿಗ್ ಮಾಲೀಕರು ಮಾತ್ರ ಜಿಲ್ಲೆಯಲ್ಲಿ ಬೋರ್‌ವೆಲ್ ಕೊರೆಯಬೇಕು. ಹೊರ ಜಿಲ್ಲೆಯವರು ಹಾಗೂ ನಿಗಪಡಿಸಿರುವ ದರಕ್ಕಿಂತ ಹೆಚ್ಚಿನ ದರ ವಿಧಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬೋರ್‌ವೆಲ್ ಕೊರೆಯುವ ಮಾಲೀಕರಿಗೆ ಜಿಲ್ಲಾಧಿಕಾರಿ ಡಾ. ಕುಮಾರ ಎಚ್ಚರಿಕೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಿಗ್ ಮಾಲೀಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೋಂದಾಯಿತ ರಿಗ್ ಮಾಲೀಕರು ಮಾತ್ರ ಬೋರ್‌ವೆಲ್ ಕೊರೆಯಲು ಅವಕಾಶವಿದೆ. ಹೆಚ್ಚಿನ ದರ ವಿಧಿಸುತ್ತಿರುವ ಬಗ್ಗೆಯೂ ದೂರುಗಳು ಬಂದಿವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ನೋಂದಣಿಯಾಗಿರುವ ೧೩ ರಿಗ್ ಮಾಲೀಕರು ಕುಡಿಯುವ ನೀರಿಗೆ ಸಂಬಂಧಿಸಿದ ಬೋರ್‌ವೆಲ್ ಕೊರೆಯಲು ಮೊದಲ ಆದ್ಯತೆ ನೀಡಬೇಕು. ಮಂಡ್ಯ ಜಿಲ್ಲೆಯಲ್ಲಿ ೭ ತಾಲೂಕುಗಳು ಬರ ಪೀಡಿತವಾಗಿದ್ದು, ಕುಡಿಯುವ ನೀರಿಗೆ ಸಂಬಂಸಿದಂತೆ ಬೋರ್ವೆಲ್, ರೀ-ಫ್ಲಶಿಂಗ್ ಮತ್ತು ರೀ-ಡ್ರಿಲಿಂಗ್‌ಗಳ ಕೆಲಸಗಳನ್ನು ಮೊದಲು ಮಾಡಬೇಕು ಎಂದು ಸೂಚಿಸಿದರು.ಕಂಟ್ರೋಲ್ ರೂಂ ನೋಂದಾಯಿತ ರಿಗ್ ಮಾಲೀಕರು ಹೊರತುಪಡಿಸಿ ಬೇರೆಯವರು ಅನಧಿಕೃತವಾಗಿ ಬೋರ್‌ವೆಲ್ ಕೊರೆಯುವುದು ಕಂಡುಬಂದಲ್ಲಿ ಅಥವಾ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರವನ್ನು ಬೋರ್ ವೆಲ್ ಕೊರೆಯಲು ಪಡೆಯುತ್ತಿದ್ದಲ್ಲಿ ದೂರು ಸಲ್ಲಿಸಲು ಕಂಟ್ರೋಲ್ ರೂಂ ಸ್ಥಾಪಿತವಾಗಿದ್ದು, ಸಾರ್ವಜನಿಕರು ದೂರವಾಣಿ ಸಂಖ್ಯೆ ೦೮೨೩೨-೨೨೦೭೦೪ ಹಾಗೂ ೦೮೨೩೨-೨೦೦೭೦೪ ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದರು.
ರಿಗ್ ಮಾಲೀಕರು ಬೋರ್‌ವೆಲ್ ಕೊರೆಯುವ ಮೊದಲು ಸ್ಥಳೀಯ ಸಂಸ್ಥೆಗಳಿಂದ ಎನ್‌ಒಸಿ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ವಿಫಲವಾದ ಬೋರ್‌ವೆಲ್‌ಗಳನ್ನು ಸರಿಯಾದ ರೀತಿಯಲ್ಲಿ ಮುಚ್ಚಬೇಕು ಎಂದು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಹಿರಿಯ ಭೂ ವಿಜ್ಞಾನಿ ಎಸ್.ಆರ್.ರಾಜಶ್ರೀ, ಜಿಲ್ಲಾ ವಾರ್ತಾಕಾರಿ ಎಸ್.ಎಚ್.ನಿರ್ಮಲಾ ಹಾಗೂ ರಿಗ್ ಮಾಲೀಕರು ಉಪಸ್ಥಿತರಿದ್ದರು.