ಮರಿಯಮ್ಮನಹಳ್ಳಿ: ಪ್ರತಿಯೊಬ್ಬರು ಜೀವನದಲ್ಲಿ ಉತ್ತಮ ಗುರಿ, ಛಲ, ಗುರುಗಳ ಆಶೀರ್ವಾದ ಇದ್ದಾಗ ಮಾತ್ರ ವಿದ್ಯಾವಂತರಾಗಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಲು ಸಾಧ್ಯ ಎಂದು ಸಾಹಿತಿ, ನಿವೃತ್ತ ಉಪನ್ಯಾಸಕ ಪ್ರೊ.ಚಂದ್ರಶೇಖರ್ ವಸ್ತ್ರದ್ ಹೇಳಿದರು.ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜನಲ್ಲಿ ಇತ್ತೀಚೆಗೆ ನಡೆದ 1987-88ನೇ ಸಾಲಿನ ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಬ್ಯಾಚ್ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಕೊನೆಯವರೆಗೂ ನಮ್ಮ ಬಳಿ ಉಳಿಯುವುದು ಅನುಮಾನ. ಆದರೆ ನಾವು ಗುರುಗಳಿಂದ ಕಲಿತ ವಿದ್ಯೆ ಮಾತ್ರ ಕೊನೆವರೆಗೂ ನಮ್ಮ ಜೊತೆಗಿರುತ್ತದೆ. ಇಂದು ನಾವು ಏನಾದರೂ ಗಳಿಸಿದ್ದೇವೆ ಎಂದರೆ ಅದು ಈ ಸಮಾಜದಿಂದ ಗಳಿಸಿದ್ದೇವೆ. ಹಾಗಾಗಿ ಈ ಸಮಾಜಕ್ಕೆ ನಾವು ನಮ್ಮ ಕೈಲಾದ ಮಟ್ಟಿಗೆ ಉತ್ತಮ ಸೇವೆ ಸಲ್ಲಿಸಬೇಕಾಗುತ್ತದೆ ಎಂದು ಅವರು ಹೇಳಿದರು.ಉದ್ಯೋಗ, ಮದುವೆ ಸೇರಿದಂತೆ ಇನ್ನಿತರೆ ಕಾರಣಗಳಿಂದಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡದ ಜೀವನದಲ್ಲಿ ಹುಟ್ಟಿದ ಊರು, ತಂದೆ-ತಾಯಿ, ವಿದ್ಯೆ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಶಾಲೆಯ ಹಳೆಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸಿ, ತಮ್ಮ ಹಳೆಯ ಶಾಲಾ ದಿನಗಳನ್ನು ಮೆಲಕು ಹಾಕುವಂತಹ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಇಂತಹ ಗುರುವಂದನಾ ಮತ್ತು ಸಮ್ಮಿಲನ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ. ಉಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ನಿವೃತ್ತ ಶಿಕ್ಷಕರಾದ ಬಿ.ಎಂ.ಎಸ್. ಚನ್ನವೀರಯ್ಯ, ಜಿ.ಹಾಲಪ್ಪ, ಸೂರ್ಯಕುಮಾರಿ ಸಭೆಯಲ್ಲಿ ಮಾತನಾಡಿದರು.1987-88ನೇ ಸಾಲಿನ ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ಸುಮಾರು 52 ವಿದ್ಯಾರ್ಥಿಗಳು ಸರಿ ಸುಮಾರು 55 ವರ್ಷದ ಹರೆಯದಲ್ಲೂ ಶಾಲಾ ಮಕ್ಕಳಾಗಿ 37 ವರ್ಷಗಳ ನಂತರ ಎಲ್ಲರೂ ಒಂದೆಡೆ ಸೇರಿ ಸಂಗಮದ ಸಂಭ್ರಮ ಭಾವ ಮಿಡಿತವು ಭಾಗವಹಿಸಿದ ಎಲ್ಲ ಹಳೆಯ ವಿದ್ಯಾರ್ಥಿಗಳು ಆಕ್ಷಣ ಎಲ್ಲರೂ ಭಾವುಕರಾಗಿದ್ದರು.