ಸಿಎಂ ಸಂಚರಿಸುವ ರಸ್ತೆಗಳಿಗೆ ಮಾತ್ರ ದುರಸ್ತಿ ಭಾಗ್ಯ!

KannadaprabhaNewsNetwork |  
Published : Oct 01, 2025, 01:00 AM IST
30ಕೆಪಿಎಲ್26 ಭಾಗ್ಯನಗರ ರಸ್ತೆ ಸಿ.ಎಂ. ಸಂಚರಿಸುವ ಹಿನ್ನೆಲೆಯಲ್ಲಿ ಭರ್ಜರಿ ದುರಸ್ಥಿ ನಡೆದಿರುವುದು.30ಕೆಪಿಎಲ್28 ಕೊಪ್ಪಳಕ್ಕೆ ಸಿಎಂ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಅಹ್ವಾನ ಮಾಡುತ್ತಿರುವುದು. | Kannada Prabha

ಸಾರಾಂಶ

ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಪರೀತ ರಸ್ತೆಗಳು ಹಾಳಾಗಿವೆ. ಹಳ್ಳಿಗಳಿಂದ ಜಿಲ್ಲಾ ಕೇಂದ್ರಕ್ಕೆ ಆಗಮಿಸುವ ರಸ್ತೆಗಳು ತೀವ್ರ ಹದಗೆಟ್ಟು ಹೋಗಿದ್ದು

ಸೋಮರಡ್ಡಿ ಅಳವಂಡಿ ಕೊಪ್ಪಳ

ಅ. 6 ರಂದು ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಲು ಕೊಪ್ಪಳಕ್ಕೆ ಆಗಮಿಸುತ್ತಿರುವ ಸಿ.ಎಂ.ಸಿದ್ದರಾಮಯ್ಯ ಸಂಚರಿಸುವ ರಸ್ತೆಗಳಲ್ಲಿರುವ ಗುಂಡಿಗಳಿಗೆ ಮುಕ್ತಿ ಭಾಗ್ಯ ದೊರೆತಿದ್ದು, ಉಳಿದ ರಸ್ತೆಗಳು ಹದಗೆಟ್ಟು ಹಳ್ಳದಂತಾಗಿದ್ದರೂ ಜಿಲ್ಲಾಡಳಿತ ತಿರುಗಿಯೂ ನೋಡದೆ ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಪರೀತ ರಸ್ತೆಗಳು ಹಾಳಾಗಿವೆ. ಹಳ್ಳಿಗಳಿಂದ ಜಿಲ್ಲಾ ಕೇಂದ್ರಕ್ಕೆ ಆಗಮಿಸುವ ರಸ್ತೆಗಳು ತೀವ್ರ ಹದಗೆಟ್ಟು ಹೋಗಿದ್ದು, ಹೆದ್ದಾರಿ ಬೈಪಾಸ್ ನಿಂದ ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ಬರುವಾಗ ಬಸ್ಸೊಂದು ಉರುಳಿಬಿದ್ದಿದೆ. ಆದರೆ, ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೇವಲ ಅವರು ಸಂಚರಿಸುವ ರಸ್ತೆಗಳನ್ನು ಗುರುತಿಸಿ, ಗುಂಡಿ ಮುಚ್ಚುವ ಕಾರ್ಯ ಭರ್ಜರಿಯಾಗಿ ನಡೆದಿದೆ.

ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ಆಗಮಿಸುವ ಸಿಎಂ ಸಿದ್ದರಾಮಯ್ಯ ಬಸ್ ನಿಲ್ದಾಣದ ಎದುರಿಗೆ ಇರುವ ಶ್ರೀಕನಕದಾಸರ ಮೂರ್ತಿ ಅನಾವರಣ ಮಾಡಲಿದ್ದಾರೆ. ಇದಾದ ಮೇಲೆ ಭಾಗ್ಯನಗರದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸಲು ತೆರಳಲಿದ್ದಾರೆ. ಹೀಗಾಗಿ ಕೊಪ್ಪಳದಿಂದ ಭಾಗ್ಯನಗರಕ್ಕೆ ತೆರಳುವ (ಸಿಎಂ ಸಂಚರಿಸುವ) ರಸ್ತೆಯನ್ನು ದುರಸ್ತಿ ಮಾಡುವ ಕಾರ್ಯ ಪ್ರಾರಂಭವಾಗಿದೆ.

ರೈಲ್ವೆ ಸೇತುವೆಯಿಂದ ಕೆಳಗೆ ಇಳಿದು ಸಾಗುವ ಈ ರಸ್ತೆ ಹದಗೆಟ್ಟು ಹಳ್ಳದಂತಾಗಿತ್ತು. ಗುಂಡಿಗಳು ಸಾಲು ಸಾಲು ಇದ್ದವು. ಈಗ ದಿಢೀರನೇ ಈ ರಸ್ತೆ ದುರಸ್ತಿ ಮಾಡುವ ಕಾರ್ಯ ಹಗಲು ರಾತ್ರಿ ನಡೆದಿದೆ. ಇದರಿಂದ ಭಾಗ್ಯನಗರದ ಜನರು ನಿಟ್ಟುಸಿರು ಬಿಟ್ಟಿದ್ದರೆ ಸಿಎಂ ಸಿದ್ದರಾಮಯ್ಯ ತಮ್ಮೂರಿಗೆ ಆರು ತಿಂಗಳಿಗೊಮ್ಮೆಯಾದರೂ ಬರಲಿ ಎನ್ನುತ್ತಿದ್ದಾರೆ. ಆದರೆ, ಉಳಿದೆಡೆ ಹದಗೆಟ್ಟು ಹಳ್ಳದಂತಾಗಿರುವ ರಸ್ತೆಯಲ್ಲಿಯೂ ಸಿಎಂ ಸಿದ್ದರಾಮಯ್ಯ ಸಂಚರಿಸಲಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊಪ್ಪಳದ ಕಿನ್ನಾಳ ರಸ್ತೆಯೇ ಹಾಳಾಗಿ ಹೋಗಿದ್ದು, ಬಿಜೆಪಿ ನಡುರಸ್ತೆಯ ಗುಂಡಿಯಲ್ಲಿಯೇ ಗಿಡನೆಟ್ಟು ಪ್ರತಿಭಟನೆ ನಡೆಸಿದ್ದರು. ಹೀಗೆ ಅನೇಕ ರಸ್ತೆಗಳು ಹಾಳಾಗಿ ಹೋಗಿದ್ದು, ಇವುಗಳಿಗೆ ಯಾವಾಗ ಮುಕ್ತಿ ಎನ್ನುವುದು ಮಾತ್ರ ಸಾರ್ವಜನಿಕರ ಪ್ರಶ್ನೆಯಾಗಿದೆ.

ಎಂ.ಬಿ.ಪಾಟೀಲ್ ಬರಲಿಲ್ಲ, ಸಿಎಂ ಬಂದರು: ಕೊಪ್ಪಳ ಬಳಿ ತಲೆ ಎತ್ತಲಿರುವ ಬಿಎಸ್ ಪಿಎಲ್ ಕಾರ್ಖಾನೆಯ ವಿರುದ್ಧ ನಿರಂತರ ಹೋರಾಟ ಮಾಡುತ್ತಿರುವ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಸದಸ್ಯರು ಮಾತು ಕೊಟ್ಟ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಕೊಪ್ಪಳಕ್ಕೆ ಬಂದು ಅಹವಾಲು ಆಲಿಸಲಿಲ್ಲ. ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಅವರಾದರೂ ಸಾರ್ವಜನಿಕರ ಈ ಅಹವಾಲು ಆಲಿಸಲಿ ಎಂದು ಆಗ್ರಹಿಸಿದ್ದಾರೆ. ಬಿಎಸ್ ಪಿಎಲ್ ಕಾರ್ಖಾನೆಯ ಕುರಿತು ಸಿಎಂ ಸಿದ್ದರಾಮಯ್ಯ ಬರುವ ಮುನ್ನವೇ ಸರ್ಕಾರದ ನಿರ್ಧಾರ ಪ್ರಕಟಿಸಬೇಕು, ಕಾರ್ಖಾನೆ ಅನುಮತಿ ರದ್ಧು ಮಾಡುವಂತೆ ಆಗ್ರಹಿಸಿದ್ದಾರೆ.

ಖರ್ಗೆ ಅವರನ್ನು ಆಹ್ವಾನಿಸಿದ ಶಾಸಕ ಹಿಟ್ನಾಳ: ಅ. 6 ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳಕ್ಕೆಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಶಾಸಕ ರಾಘವೇಂದ್ರ ಹಿಟ್ನಾಳ ಅಧಿಕೃತ ಅಹ್ವಾನ ನೀಡಿದ್ದಾರೆ.

ಬೆಂಗಳೂರಿನ ಅವರ ನಿವಾಸಕ್ಕೆ ಭೇಟಿ ನೀಡಿ ಆಹ್ವಾನಿಸಿದ್ದಾರೆ. ಕೊಪ್ಪಳದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಹಾಗೂ ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಸೌಲಭ ವಿತರಣೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿ ಸೇರಿದಂತೆ ಸಂಪುಟ ಸಚಿವರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ, ನೀವು ಸಹ ಬರುವಂತೆ ಮನವಿ ಮಾಡಿದ್ದಾರೆ. ಈ ವೇಳೆ ನಗರಸಭೆ ಸದಸ್ಯ ಮುತ್ತುರಾಜ್ ಕುಷ್ಟಗಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ