ತೊಗರಿ ಖರೀದಿ ಕೇಂದ್ರ ತೆರೆಯಿರಿ

KannadaprabhaNewsNetwork | Published : Nov 21, 2024 1:02 AM

ಸಾರಾಂಶ

ಜಿಲ್ಲೆಯಲ್ಲಿ ತೊಗರಿ ಬೆಳೆ ಖರೀದಿ ಕೇಂದ್ರ ಶೀಘ್ರ ತೆರಯಬೇಕು ಹಾಗೂ ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ನೀಡಬೇಕು.

ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ನೀಡಿ । ರೈತ ಸಂಘ, ಹಸಿರು ಸೇನೆಯಿಂದ ಜಿಲ್ಲಾಡಳಿತಕ್ಕೆ ಒತ್ತಾಯ, ಮನವಿಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲೆಯಲ್ಲಿ ತೊಗರಿ ಬೆಳೆ ಖರೀದಿ ಕೇಂದ್ರ ಶೀಘ್ರ ತೆರಯಬೇಕು ಹಾಗೂ ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ನೀಡಬೇಕು ಎಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆಯವರು ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ರೈತರು ಬೆಳೆದ ಮೆಕ್ಕೆಜೋಳ ಕೇವಲ ಆಹಾರ ಉತ್ಪನ್ನಕ್ಕಷ್ಟೇ ಬಳಕೆಯಾಗದೇ ಇಥನೇಲ್ ಉತ್ಪಾದನೆಗೆ ಬಳಕೆಯಾಗುತ್ತಿರುವುದರಿಂದ ರಾಜ್ಯದಲ್ಲಿ ಬೆಳೆದಿರುವ ಮೆಕ್ಕೆಜೋಳಕ್ಕೆ ಉತ್ತಮ ದರ ಇತ್ತು. ಪ್ರಾರಂಭಿಕ ಹಂತದಲ್ಲಿ ₹3000 ಪ್ರತಿ ಕ್ವಿಂಟಲ್‌ಗೆ ಇದ್ದ ದರ ಈಗಿಲ್ಲ. ಈಗ ಉತ್ತಮ ಆವಕ ಪ್ರಾರಂಭವಾಗಿದ್ದು, ಕೊಪ್ಪಳದ ಜಿ.ಜೆ. ಬೋರಾ, ಶಂಕರ್ ಟ್ರೇಡಿಂಗ ಕಂಪನಿ, ಇನಾಮದಾರ ಟ್ರೇಡಿಂಗ್‌ ಕಂಪನಿ, ಮತ್ತು ಮಣಿಕಂಠ ಇಂಡಸ್ಟ್ರೀಸ್, ವೀರೇಶ್ವರ ಟ್ರೇಡಸ್, ಸೂರ್ಯನಾರಾಯಣ ಕಂಪನಿ, ಹರ್ಷ ಟ್ರೇಡರ್ಸ್ ಹೀಗೆ ಜಿಲ್ಲೆಯಲ್ಲಿ ಕೇವಲ 7-8 ಜನರು ಪ್ರಮುಖ ಖರೀದಿದಾರರು ಇದ್ದು, ಇವರಿಗೆ ಮೇಲ್ಮಟ್ಟದಲ್ಲಿ ಉತ್ತಮ ದರದಲ್ಲಿ ಮಾರಿಕೊಳ್ಳುವ ಒಪ್ಪಂದವಾಗಿದ್ದು, ಈಗ ರೈತರ ಆವಕ ಹೆಚ್ಚಿಗೆ ಮಾರುಕಟ್ಟೆಗೆ ಬರುತ್ತಿರುವುದನ್ನು ಮನಗಂಡ ಈ ಖರೀದಿದಾರರು ಏಕಾಏಕಿ ಪ್ರತಿ ಕ್ವಿಂಟಲ್‌ಗೆ ಎಂ.ಎಸ್.ಪಿ. ದರಕ್ಕಿಂತ ಕಡಿಮೆ ಮಾಡಿ ₹2250 ಗಳಿಗೆ ಖರೀದಿ ಮಾಡುತ್ತಿರುವುದು ಕಂಡು ಬರುತ್ತಿದೆ. ರೈತ ಸಂಘದ ಮುಖಂಡರ ಸಭೆ ಕರೆದು ಮೆಕ್ಕೆಜೋಳಕ್ಕೆ ಉತ್ತಮ ದರ ನಿಗದಿಪಡಿಸಿ ಖರೀದಿ ಮಾಡಲು ಆದೇಶಿಸಬೇಕು ಎಂದು ರೈತರು ಆಗ್ರಹಿಸಿದರು.

ಜಿಲ್ಲೆಯಲ್ಲಿ ಈಗ ಉತ್ತಮ ಮಳೆಯಿಂದಾಗಿ ತೊಗರಿ ಬೆಳೆದಿರುವ ರೈತರು ಇನ್ನೊಂದು ವಾರದಲ್ಲಿ ಕಟಾವು ಪ್ರಾರಂಭ ಮಾಡಿ ಮಾರುಕಟ್ಟೆಗೆ ತರುವ ಹಂತದಲ್ಲಿದ್ದಾರೆ. ಈಗ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹8200 ದರ ಇದ್ದು, ಕೇಂದ್ರ ಸರ್ಕಾರದ ಎಂ.ಎಸ್.ಪಿ. ದರ ₹7550 ದರ ಇದೆ. ತೊಗರಿಯ ಆವಕ ಕಡಿಮೆ ಇರುವುದರಿಂದ ಈಗ ಉತ್ತಮ ದರ ಇದ್ದು, ಆವಕ ಹೆಚ್ಚಿಗೆ ಪ್ರಾರಂಭವಾದ ಕೂಡಲೇ ರೈತರು ತಾವು ಬೆಳೆದ ಬೆಳೆ ಹೆಚ್ಚಿನ ದಿನ ತಮ್ಮ ಮನೆಯಲ್ಲಿ ಇಡುವುದಿಲ್ಲವೆಂಬ ದೌರ್ಬಲ್ಯವನ್ನು ಅರಿತ ಈ ಖರೀದಿದಾರರು ಏಕಾಏಕಿ ಮಾರುಕಟ್ಟೆಯಲ್ಲಿ ದರ ಕಡಿಮೆ ಮಾಡುವ ಜಾಲವಿದ್ದು, ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಇಂತಹವರ ಮೇಲೆ ಹದ್ದಿನ ಕಣ್ಣಿಟ್ಟು ರೈತರಿಗೆ ಉತ್ತಮ ದರ ದೊರಕಿಸಿಕೊಡಲು ಸನ್ನದ್ಧರಾಗಬೇಕು ಎಂದು ಮನವಿ ಮಾಡಿದರು.

ಈ ವೇಳೆ ರೈತ ಸಂಘದ ಪ್ರಮುಖರಿದ್ದರು.

Share this article