ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲು
ಕನ್ನಡಪ್ರಭ ವಾರ್ತೆ, ಕಡೂರು
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿಯ ಮೀಸಲಾತಿ ಪ್ರಕಟವಾಗುತ್ತಿರುವ ಬೆನ್ನಲ್ಲೇ ಕಡೂರು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕುರಿತಂತೆ ಕಡೂರು ರಾಜಕೀಯ ಮೊಗಸಾಲೆಯಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳಲ್ಲಿ ಮಿಂಚಿನ ಸಂಚಾರ ಆರಂಭವಾಗಿದೆ.ಸುಮಾರು ಹದಿನೈದು ತಿಂಗಳ ಬಳಿಕ ವಿಧಾನಸಭಾ, ಲೋಕಸಭಾ ಮತ್ತು ವಿಧಾನ ಪರಿಷತ್ ಚುನಾವಣೆ ನಂತರ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಕಡೂರು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕಾರಣ ನಿರೀಕ್ಷೆಯಂತೆಯೇ ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಯುತ್ತಿದೆ.
ಇದೀಗ 2 ನೇ ಹಂತದ ಅಧ್ಯಕ್ಷ -ಉಪಾಧ್ಯಕ್ಷ ಗಾದಿಗೆ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನ ಮೂರು ಪಕ್ಷಗಳಲ್ಲೂ ಪೈಪೋಟಿ ಆರಂಭವಾಗಿದೆ.
ಮೊದಲ ಅವಧಿಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಪುರಸಭೆ ಆಡಳಿತ ನಡೆದಿತ್ತು. ಇದೀಗ 2ನೇ ಅವಧಿಯಲ್ಲೂ ಜೆಡಿಎಸ್- ಬಿಜೆಪಿ ಮೈತ್ರಿ ಮುಂದುವರಿಯುತ್ತದೆಯೇ ಅಥವಾ 7 ಸದಸ್ಯ ಬಲದ ಕಾಂಗ್ರೆಸ್ ಪಕ್ಷ ಪ್ರತಿ ತಂತ್ರಗಳನ್ನು ರೂಪಿಸುತ್ತದೆಯೇ ನೋಡಬೇಕು. ಕಾಂಗ್ರೆಸ್ ನಲ್ಲೂ ಅಧ್ಯಕ್ಷ ಉಪಾಧ್ಯಕ್ಷ ಗಾದಿಗೆ ಹೆಚ್ಚಿನ ಆಕಾಂಕ್ಷಿಗಳಿದ್ದು, ಹಾಲಿ ಶಾಸಕ ರಾದ ಕೆ.ಎಸ್. ಆನಂದ್ ಯಾವ ರೀತಿಯ ತಂತ್ರ ಹೆಣೆಯುವರೋ ನೋಡಬೇಕಿದೆ.
ಒಟ್ಟಾರೆ ಕಡೂರು ಪುರಸಭೆ ಎರಡನೇ ಅವಧಿ ಅಧಿಕಾರ ಗದ್ದುಗೆ ಬಿಜೆಪಿ- ಜೆಡಿಎಸ್ ಮೈತ್ರಿಗೋ ಅಥವಾ ಕಾಂಗ್ರೆಸ್ ನಿಂದ ಹೊಸ ಬೆಳವಣಿಗೆಯೋ ಎಂಬುದನ್ನು ನೋಡಬೇಕಾಗಿದೆ.