ಸಿದ್ನೇಕೊಪ್ಪದಲ್ಲಿ ಶೌಚಕ್ಕೆ ಬಯಲೇ ಗತಿ

KannadaprabhaNewsNetwork |  
Published : Dec 13, 2024, 12:50 AM IST
12 | Kannada Prabha

ಸಾರಾಂಶ

ತಾಲೂಕಿನ ಸಿದ್ನೇಕೊಪ್ಪ ಗ್ರಾಮದಲ್ಲಿ ಶೌಚಕ್ಕೆ ಇನ್ನೂ ಬಯಲೇ ಗತಿಯಾಗಿದೆ

ತಂಬಿಗೆ ಹಿಡಿದುಕೊಂಡು ಅಲೆದಾಡುವ ಮಹಿಳೆಯರು । ಇದ್ದ ಸಾರ್ವಜನಿಕ ಶೌಚಾಲಯವು ನೆಲಸಮ

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನ ಸಿದ್ನೇಕೊಪ್ಪ ಗ್ರಾಮದಲ್ಲಿ ಶೌಚಕ್ಕೆ ಇನ್ನೂ ಬಯಲೇ ಗತಿಯಾಗಿದೆ!

ಗ್ರಾಮದಲ್ಲಿ ಸುಲಭ ಶೌಚಾಲಯ ಇಲ್ಲವಾಗಿದ್ದರಿಂದ ರಸ್ತೆ ಪಕ್ಕದಲ್ಲೇ ಶೌಚ ಮಾಡುವಂತಹ ಪರಿಸ್ಥಿತಿ ಮಹಿಳೆಯರಿಗೆ ಬಂದಿದೆ. ಯಾವುದಾದರೂ ವಾಹನ ಬಂದರೆ ಎದ್ದು ನಿಲ್ಲಬೇಕು. ಹೀಗೆ ಮಹಿಳೆಯರಿಗೆ ಶೌಚಕ್ಕೆ ಅನಾನುಕೂಲತೆ ಉಂಟಾಗಿದೆ.

ಗ್ರಾಮದಲ್ಲಿ 310ಕ್ಕೂ ಹೆಚ್ಚು ಮನೆಗಳಿದ್ದು, 1100ಕ್ಕೂ ಹೆಚ್ಚು ಜನರಿದ್ದಾರೆ. 250 ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಆದರೆ ಬಹುತೇಕ ಜನರು ಇನ್ನೂ ಶೌಚಕ್ಕೆ ಹೊರಗಡೆಯೇ ತೆರಳುತ್ತಿದ್ದಾರೆ. ಈ ಬಗ್ಗೆ ಗ್ರಾಪಂನವರು ವೈಯಕ್ತಿಕ ಶೌಚಾಲಯ ಬಳಸಿಕೊಳ್ಳಲು ಹಲವಾರು ಬಾರಿ ಮನವಿ ಸಹ ಮಾಡಿದ್ದಾರೆ. ಆದರೆ ಜನರು ವೈಯಕ್ತಿಕ ಶೌಚಾಲಯ ಬಳಸದೆ ಸುಲಭ ಶೌಚಾಲಯ ಬಳಸುತ್ತಿದ್ದರು. ಆದರೆ ಅದು ನೆಲಸಮ ಆದ ಕಾರಣ ಬಯಲಿಗೆ ತೆರಳುವಂತಾಗಿದೆ.

೨೫ ವರ್ಷಗಳ ಹಿಂದೆ ಗ್ರಾಮದ ಮಹಿಳೆಯರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ರಸ್ತೆ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿತ್ತು. ಇತ್ತೀಚೆಗೆ ಸ್ಥಳೀಯ ಒಬ್ಬ ವ್ಯಕ್ತಿ ನಮ್ಮ ಮನೆಗೆ ಶೌಚಾಲಯದ ವಾಸನೆ ಬರುತ್ತದೆ. ಇದರಿಂದ ನಮಗೆ ವಾಸ ಮಾಡಲು ತೊಂದರೆಯಾಗುತ್ತದೆ ಎನ್ನುವ ಉದ್ದೇಶದಿಂದ ಏಕಾಏಕಿ ಶೌಚಾಲಯ ಕೆಡವಿದ್ದಾನೆ. ಇದರಿಂದ ಮಹಿಳೆಯರು ರಸ್ತೆ ಪಕ್ಕದ ಬಯಲಿನಲ್ಲಿ ತಂಬಿಗೆ ಹಿಡಿದುಕೊಂಡು ಅಲೆದಾಡಬೇಕಾದ ಅನಿವಾರ್ಯತೆ ಬಂದಿದೆ. ಆ ಮಾರ್ಗದಲ್ಲಿ ಬರುವ ಬೈಕ್, ಕಾರು, ಬಸ್‌ಗಳ ಸಂಚಾರದಿಂದ ಮಹಿಳೆಯರು ಮುಜುಗರ ಪಡುವಂತಾಗಿದೆ.

ಮಹಿಳೆಯರಿಗಾಗಿ ಗ್ರಾಪಂ ಅಧಿಕಾರಿಗಳು, ಸದಸ್ಯರು ಒಂದು ಮಹಿಳಾ ಶೌಚಾಲಯವನ್ನು ನಿರ್ಮಿಸಬೇಕೆಂದು ಅರ್ಜಿ ಸಲ್ಲಿಸಿದರೂ ಇದುವರೆಗೂ ಯಾರೂ ಕ್ಯಾರೇ ಎನ್ನುತ್ತಿಲ್ಲ. ಪ್ರತಿನಿತ್ಯ ಬೆಳಗಾದರೆ ಸಾಕು ೧೦೦ರಿಂದ ೧೫೦ ಮಹಿಳೆಯರು ಶೌಚಾಲಯಕ್ಕೆ ಹೋಗಬೇಕಾದರೆ ಅವರಿಗೆ ಮಾನ, ಮರ್ಯಾದೆ ಹೋಗುವಂತಹ ಪರಿಸ್ಥಿತಿ ಬಂದಿದೆ. ತಾಪಂ ಅಧಿಕಾರಿಗಳು, ಗ್ರಾಪಂ ಆಡಳಿತ ಮಂಡಳಿಯವರು ಕೂಡಲೇ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಬೇಕೆಂದು ಮಹಿಳೆಯರು ಒತ್ತಾಯಿಸಿದ್ದಾರೆ.ಸಿದ್ನೇಕೊಪ್ಪ ಗ್ರಾಮದಲ್ಲಿ ಮಹಿಳೆಯರ ಶೌಚಕ್ಕೆ ಬಯಲಿಗೆ ತೆರಳುತ್ತಿರುವುದರ ಬಗ್ಗೆ ಗಮನಕ್ಕೆ ಬಂದಿದ್ದು, ಪಿಡಿಒ ಜೊತೆ ಚರ್ಚಿಸಿ ಶೀಘ್ರ ಸಮಸ್ಯೆ ಪರಹಾರಕ್ಕೆ ಸುಲಭ ಶೌಚಾಲಯ ನಿರ್ಮಿಸಲು ಸೂಚಿಸುತ್ತೇನೆ. ಗ್ರಾಮಸ್ಥರು ಮನೆಯಲ್ಲಿ ನಿರ್ಮಾಣ ಮಾಡಿಕೊಂಡಿರುವ ಶೌಚಾಲಯ ಬಳಕೆ ಮಾಡಬೇಕು. ಗ್ರಾಮದಲ್ಲಿ ಸುಲಭ ಶೌಚಾಲಯ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಾಪಂ ಇಒ ಸಂತೋಷ ಬಿರಾದಾರ ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ