ಪೋಕ್ಸೋ ಕಾಯ್ದೆ ಜಾಗೃತಿಗೆ ಶಾಲೆಗಳಲ್ಲಿ ತೆರೆದ ಮನೆ

KannadaprabhaNewsNetwork |  
Published : Jan 15, 2024, 01:52 AM ISTUpdated : Jan 15, 2024, 04:31 PM IST
ಟಚ್‌ | Kannada Prabha

ಸಾರಾಂಶ

ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಗುಡ್‌ ಟಚ್‌ ಬ್ಯಾಡ್‌ ಟಚ್‌ ಬಗ್ಗೆ ಪ್ರತಿದಿನ ಜಾಗೃತಿ ಮೂಡಿಸಲು ಶಾಲೆಗಳಿಗೆ ಸೂಚಿಸಲಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ, ಲೈಂಗಿಕ ಕಿರುಕುಳ ತಡೆಗಟ್ಟಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಮಕ್ಕಳಿಗೆ ಅವರ ಹಕ್ಕುಗಳ ರಕ್ಷಣೆ, ಕಾಯ್ದೆ, ಗುಡ್‌ ಟಚ್‌ ಬ್ಯಾಡ್‌ ಟಚ್‌ ಬಗ್ಗೆ ಪ್ರತಿದಿನ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. 

ಇದರೊಂದಿಗೆ ಪಾಲಕರು, ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಈ ಮೂಲಕ ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಲು ಮೊದಲ ಹೆಜ್ಜೆ ಇಟ್ಟಂತಾಗಿದೆ.

18 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ, ಅತ್ಯಾಚಾರಗಳಂತಹ ದುರ್ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಶಾಲೆಗಳಿಗೆ ಅಥವಾ ಎಲ್ಲಿಯಾದರೂ ಮಕ್ಕಳನ್ನು ಕಳುಹಿಸಬೇಕು ಎಂದರೆ ಪಾಲಕರು ಜೀವ ಕೈಹಿಡಿದುಕೊಂಡೇ ಕಳುಹಿಸಬೇಕಾದ ಪರಿಸ್ಥಿತಿ ಉಂಟಾಗಿದೆ. 

ಸಣ್ಣ ಸಣ್ಣ ಮಕ್ಕಳು ಸಹ ವಿಕೃತರ ಕಾಮಕ್ಕೆ ಬಲಿಯಾಗುವಂತಹ ಘಟನೆಗಳು ನಡೆಯುತ್ತಿವೆ. ಇದನ್ನು ತಡೆಗಟ್ಟಲು ಮಕ್ಕಳಿಗೆ ರಕ್ಷಣೆ , ಭದ್ರತೆ ಮತ್ತು ನ್ಯಾಯ ಒದಗಿಸಲು ಪೋಕ್ಸೋ ಕಾಯ್ದೆ 2012 ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದರ ಜಾಗೃತಿಗಾಗಿ ಇದೀಗ ರಾಜ್ಯ ಸರ್ಕಾರ ಮುಂದಾಗಿದೆ.

ಬ್ಯಾಡ್‌ ಟಚ್‌ ಜಾಗೃತಿ: ಮಕ್ಕಳಿಗೆ ಕಾಯ್ದೆಯಲ್ಲಿ ಏನಿದೆ. ಮಕ್ಕಳು ತಮ್ಮ ಮೇಲಿನ ದೌರ್ಜನ್ಯವನ್ನು ಹೇಗೆ ತಡೆಗಟ್ಟಬಹುದು. ಬ್ಯಾಡ್‌ ಟಚ್‌ ಅಂದರೇನು? ಗುಡ್‌ ಟಚ್‌ ಅಂದರೇನು? ಯಾರಾದಾರೂ ಬ್ಯಾಡ್‌ ಟಚ್‌ ಮಾಡಿದರೆ ಅದನ್ನು ಹೇಗೆ ಗುರುತಿಸಬೇಕು. 

ಅವುಗಳನ್ನು ತಡೆಗಟ್ಟಲು ಮಕ್ಕಳು ಏನು ಮಾಡಬೇಕು. ಶಿಕ್ಷಕರು, ಪಾಲಕರ ಗಮನಕ್ಕೆ ಹೇಗೆ ತರಬೇಕು? ಏಕೆ ತರಬೇಕು? ಎಂಬುದರ ಮಾಹಿತಿ ಮಕ್ಕಳಿಗೆ ನೀಡಬೇಕು. ಮಕ್ಕಳ ರಕ್ಷಣೆಯಲ್ಲಿ ಕಾನೂನು ಏನು ಹೇಳುತ್ತದೆ ಸೇರಿದಂತೆ ಮತ್ತಿತರರ ವಿಷಯಗಳ ಬಗ್ಗೆ ಶಿಕ್ಷಕರು ಅಧ್ಯಯನ ಮಾಡಬೇಕು. ಕಾಯ್ದೆ ಬಗ್ಗೆ ಪರಿಪೂರ್ಣವಾಗಿ ಅರಿತುಕೊಳ್ಳಬೇಕು.

ಪ್ರತಿದಿನ ಪ್ರಾರ್ಥನೆ, ಬಿಡುವಿನ ವೇಳೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ರಾಷ್ಟ್ರೀಯ ಹಬ್ಬ, ಸಾಂಸ್ಕೃತಿಕ ಚಟುವಟಿಕೆ, ವಾರ್ಷಿಕೋತ್ಸವ, ಕ್ರೀಡಾಕೂಟ ಸೇರಿದಂತೆ ಯಾವುದೇ ಕಾರ್ಯಕ್ರಮ ಇದ್ದರೂ ಅದರಲ್ಲಿ ಈ ವಿಷಯವನ್ನು ಸೇರಿಸಿಕೊಳ್ಳಬೇಕಿರುವುದು ಕಡ್ಡಾಯ. 

ಮಕ್ಕಳಿಗಷ್ಟೇ ಅಲ್ಲದೇ, ಪಾಲಕರ ಸಭೆ, ಎಸ್‌ಡಿಎಂಸಿ ಸಭೆಗಳಲ್ಲಿ ಕಡ್ಡಾಯವಾಗಿ ಪೋಕ್ಸೋ ಕಾಯ್ದೆ ಕುರಿತು ತಿಳಿಸಬೇಕು. ಇದಕ್ಕೆ "ತೆರೆದ ಮನೆ " ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ರಮಕ್ಕೆ ಪೊಲೀಸರ ನೆರವನ್ನು ಪಡೆಯಬಹುದು ಎಂದು ಸುತ್ತೊಲೆಯಲ್ಲಿ ತಿಳಿಸಲಾಗಿದೆ.

ಸರ್ಕಾರದ ಸುತ್ತೋಲೆ: ಜ. 8ರಂದು ಈ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಆಯಕ್ತರು ಹೊರಡಿಸಿದ್ದು, ಎಲ್ಲ ಡಿಡಿಪಿಐಗಳು ಈಗಾಗಲೇ ಬಿಇಒ, ಶಾಲೆಗಳ ಮುಖ್ಯೋಪಾಧ್ಯಾಯರ ಸಭೆಗಳನ್ನು ನಡೆಸಿದ್ದು ಆಗಿದೆ. ಇನ್ನೆರಡು ದಿನಗಳಲ್ಲಿ ಎಲ್ಲ ಶಾಲೆಗಳಲ್ಲಿ ತೆರೆದ ಮನೆ ಕಾರ್ಯಕ್ರಮ ಪ್ರಾರಂಭವಾಗಲಿದೆ.

ಈ ಹಿಂದೆ ಕೂಡ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ವರ್ಷದಲ್ಲಿ ಯಾವುದಾದರೂ ಒಂದು ಪೊಲೀಸ್‌ ಇಲಾಖೆ ಅಧಿಕಾರಿಗಳನ್ನೋ, ನ್ಯಾಯವಾದಿಗಳನ್ನೋ ಕರೆದು ಶಾಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. 

ಜಾಗೃತಿ ಜಾಥಾ ನಡೆಸಲಾಗುತ್ತಿತ್ತು. ಅದು ಅಷ್ಟರ ಮಟ್ಟಿಗೆ ಪರಿಣಾಮಕಾರಿಯಾಗುತ್ತಿರಲಿಲ್ಲ. ಅದರ ಬದಲಿಗೆ ಪ್ರತಿದಿನ ಪ್ರಾರ್ಥನೆ ವೇಳೆ ಮಕ್ಕಳಿಗೆ ತಿಳಿಸಿಕೊಡುವುದರಿಂದ ಮಕ್ಕಳ ಮನಪಟಲದಲ್ಲಿ ಅಚ್ಚಳಿಯದಂತೆ ಉಳಿಯುತ್ತದೆ. ಹೆಚ್ಚು ಪರಿಣಾಮಕಾರಿಯಾಗುತ್ತದೆ. 

ತಮ್ಮ ಮೇಲೆ ಯಾರಾದರೂ ದೌರ್ಜನ್ಯ ಎಸಗಲು ಆಗಮಿಸಿದರೆ ತಕ್ಷಣವೇ ಮಕ್ಕಳೇ ಜಾಗೃತರಾಗುತ್ತಾರೆ. ಆ ಬಗ್ಗೆ ಶಿಕ್ಷಕರೋ, ಪಾಲಕರಿಗೋ ತಿಳಿಸುತ್ತಾರೆ. ಈ ಮೂಲಕ ಮಕ್ಕಳ ದೌರ್ಜನ್ಯ ತಡೆಗಟ್ಟಬಹುದಾಗಿದೆ ಎಂಬ ಯೋಚನೆ ಸರ್ಕಾರದ್ದು.

ಮೆಚ್ಚುಗೆ: ಸರ್ಕಾರ ಮಕ್ಕಳಲ್ಲಿ ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಕೈಗೊಳ್ಳಲು ನಿರ್ಧಾರ ಕೈಗೊಂಡು ತೆರೆದ ಮನೆ ಕಾರ್ಯಕ್ರಮ ನಡೆಸಲು ಸಜ್ಜಾಗಿರುವುದಕ್ಕೆ ಶಿಕ್ಷಣ ಪ್ರೇಮಿಗಳು, ಪಾಲಕರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. 

ಆದರೆ ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅಂದುಕೊಂಡಂತೆ ಸರಿಯಾಗಿ ಜಾಗೃತಿ ಮೂಡಿಸಬೇಕು. ಅಂದಾಗ ಮಾತ್ರ ಪರಿಣಾಮಕಾರಿಯಾಗಬಲ್ಲದು ಎಂಬ ಅಭಿಪ್ರಾಯ ಸಾರ್ವಜನಿಕರದ್ದು.

ಈ ಕುರಿತು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌. ಕೆಳದಿಮಠ ಪ್ರತಿಕ್ರಿಯಿಸಿ, ಸರ್ಕಾರ ತೆರೆದ ಮನೆ ಎಂಬ ಕಾರ್ಯಕ್ರಮ ನಡೆಸಲು ಸೂಚನೆ ನೀಡಿದೆ. 

ಅದರಂತೆ ಈಗಾಗಲೇ ಒಂದು ಬಾರಿ ಮೀಟಿಂಗ್‌ ಮಾಡಲಾಗಿದೆ. ಮಕ್ಕಳು, ಪಾಲಕರಿಗೆ ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ. ಪ್ರಾರ್ಥನೆ ಸೇರಿದಂತೆ ಶಾಲೆಯ ಪ್ರತಿ ಚಟುವಟಿಕೆ ವೇಳೆಯಲ್ಲೂ ಜಾಗೃತಿ ಮೂಡಿಸಲು ಸರ್ಕಾರ ಸೂಚಿಸಿದೆ ಎಂದು ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ