ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಟಿ ರಮ್ಯಾ ಸ್ಪರ್ಧೆ ಬಯಸಿದರೆ ನನ್ನ ಮುಕ್ತ ಆಹ್ವಾನವಿದೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು. ೨೦೧೩ರಲ್ಲಿ ಕೇವಲ ೬ ತಿಂಗಳ ಅವಧಿಗೆ ಸಂಸದೆಯಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅವರು ಬಂದರೂ ನಮಗೆ ತೊಂದರೆ ಇಲ್ಲ. ರಮ್ಯಾ ಪರವಾಗಿ ಕೆಲಸ ಮಾಡುವುದಕ್ಕೆ ತಯಾರಿದ್ದೇವೆ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು. ಚುನಾವಣೆ ಸ್ಪರ್ಧೆಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪುತ್ರಿ ಶಾಂಭವಿ, ಎನ್.ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮೀ ಅಥವಾ ಸಚಿವ ಎನ್.ಚಲುವರಾಯಸ್ವಾಮಿ ಈ ಮೂವರಲ್ಲಿ ಯಾರಿಗಾದರೂ ಟಿಕೆಟ್ ನೀಡಲಿ. ಕಾಂಗ್ರೆಸ್ ಗೆಲುವು ಸುಲಭವಾಗುತ್ತದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗುವ ಸಾಧ್ಯತೆಗಳಿರುವುದರಿಂದ ಈ ಮೂವರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕೆನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಚುನಾವಣೆ ಪೂರ್ವಭಾವಿ ಸಭೆಯಲ್ಲೂ ನನ್ನ ನಿರ್ಧಾರ ತಿಳಿಸಿದ್ದೇನೆ ಎಂದು ತಿಳಿಸಿದರು.