ಕುಷ್ಟಗಿ: ರಾಜ್ಯ ಸರ್ಕಾರ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ. ಆದರೆ, ಮಾಹಿತಿ ಅಪ್‌ಲೋಡ್ ಮಾಡಲು ಸರ್ವರ್ ಸಮಸ್ಯೆ ಉಂಟಾಗುತ್ತಿರುವುದು ಅರ್ಹ ಫಲಾನುಭವಿಗಳು ಸರ್ಕಾರದ ಸವಲತ್ತುಗಳಿಂದ ವಂಚಿತರಾಗುವಂತಾಗಿದೆ.ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಇಲಾಖೆಯು ರಾಜ್ಯದ ಜನರಿಗೆ ತಮ್ಮ ಪಡಿತರ ಚೀಟಿ ತಿದ್ದುಪಡಿ ಹಾಗೂ ಹೊಸ ಹೆಸರು ಸೇರ್ಪಡೆಗೆ ಅವಕಾಶ ನೀಡಿದೆ.ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಬದಲಾಗಿ ರೇಷನ್ ಕಾರ್ಡಿನಲ್ಲಿ ಹೆಸರು ಸೇರ್ಪಡೆ, ಹೆಸರು ತೆಗೆದುಹಾಕುವುದು, ರೇಷನ್ ಅಂಗಡಿ ಬದಲಾವಣೆ, ಹೆಸರು ತಿದ್ದುಪಡಿ, ಫೋಟೋ, ಬಯೋಮೆಟ್ರಿಕ್‌ಗೆ ಅವಕಾಶ ಕಲ್ಪಿಸಿದೆ. ಆದರೆ, ಸರ್ವರ್ ಸಮಸ್ಯೆ ಉಂಟಾಗಿ ಫಲಾನುಭವಿಗಳು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.ಸರ್ವರ್ ಸಮಸ್ಯೆಗೆ ಕೊನೆ ಯಾವಾಗ?: ಸರ್ಕಾರದ ಯೋಜನೆಗಳ ಲಾಭ ಪಡೆಯಲು ಜನರು ಪಡಿತರ, ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪಡೆದುಕೊಳ್ಳಬೇಕು. ಆದರೆ, ಪ್ರತಿ ಬಾರಿಯೂ ಸರ್ವರ್ ಸಮಸ್ಯೆ ಎದುರಾಗುತ್ತಿದ್ದು, ದಾಖಲೆಗಳನ್ನು ಪಡೆದುಕೊಳ್ಳಲು ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಜನರ ಸಮಸ್ಯೆ ಅರಿತು ರಾಜ್ಯ ಸರ್ಕಾರ ಸರ್ವರ್ ಸಮಸ್ಯೆಗೆ ಪರಿಹಾರ ಒದಗಿಸಲು ಮುಂದಾಗಬೇಕೆಂದು ನೊಂದ ಫಲಾನುಭವಿಗಳು ಆಗ್ರಹಿಸಿದ್ದಾರೆ.ಸೇವಾ ಕೇಂದ್ರಗಳಿಗೆ ಯಜಮಾನಿ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿ ಮನೆಯ ಯಜಮಾನಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿ ಮತ್ತಿತರ ದಾಖಲೆ ಹಿಡಿದು ಯಜಮಾನಿಗೆ ₹2 ಸಾವಿರ ಘೋಷಿಸಿದೆ. ಯೋಜನೆಯ ಲಾಭ ಕೇಂದ್ರಗಳಿಗೆ ಪಡೆದುಕೊಳ್ಳಲು ಗೃಹಿಣಿಯರು ಯಜಮಾನಿಯಾಗಲು ಮುಂದಾಗಿದ್ದು, ಸೇವಾ ಕೇಂದ್ರದ ಕದ ತಟ್ಟುತ್ತಿರುವುದು ಸಾಮಾನ್ಯವಾಗಿದೆ. ಮಹಿಳೆಯರು ತಮ್ಮೆಲ್ಲ ಕೆಲಸ ಕಾರ್ಯ ಬಿಟ್ಟು ಪಡಿತರ ಅಂಗಡಿಗಳ ಮುಂಭಾಗ ಗಂಟೆಗಟ್ಟಲೇ ಸಾಲುಗಟ್ಟಿ ನಿಂತುಕೊಳ್ಳುವಂತಾಗಿದೆ.ಇಲಾಖೆ ವಿರುದ್ಧ ಆಕ್ರೋಶ: ಸರ್ಕಾರದ ಯೋಜನೆಗಳ ಲಾಭ ಪಡೆಯಲು ಫಲಾನುಭವಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಇಡೀ ದಿನ ಸೇವಾ ಕೇಂದ್ರಗಳ ಮುಂಭಾಗ ಸಾಲುಗಟ್ಟಿ ನಿಲ್ಲುವಂತಾಗಿದೆ. ಆದರೂ, ಸರ್ವರ್ ಸಮಸ್ಯೆಯಿಂದ ಯಾವುದೇ ಕಾರ್ಯಗಳಾಗದೇ ಮರಳಿ ಹೋಗುವಂತಾಗಿದ್ದು, ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಅ.13 ಕೊನೆ ದಿನ: ಜಿಲ್ಲೆಯಲ್ಲಿ ರೇಷನ್ ಕಾರ್ಡ್ ತಿದ್ದುಪಡಿ, ಸೇರ್ಪಡೆಗೆ ಅ.11ರಿಂದ ಅ.13ರವರೆಗೆ ಅವಕಾಶ ನೀಡಿದೆ. ನಾಳೆ ಕೊನೆಯ ದಿನವಾಗಿದ್ದು, ಸರ್ವರ್ ಏನು ಮಾಡುತ್ತೋ ಎಂಬ ಆತಂಕದಲ್ಲಿ ಜನರಿದ್ದಾರೆ.ಅವಧಿ ವಿಸ್ತರಿಸಿ: ನಾವು ಸುಮಾರು ಎರಡು ತಿಂಗಳಿಂದ ನಮ್ಮ ಅಕ್ಕನ ರೇಷನ್ ಕಾರ್ಡ್ ಮಾಡಿಸಲು ಅಂಗಡಿಗಳ ಬಾಗಿಲಿಗೆ ತಿರುಗಾಡುತ್ತಿದ್ದು ನೆಪಕ್ಕೆ ಮಾತ್ರ ಸರ್ಕಾರ ಒಂದೆರಡು ದಿನ ಅವಕಾಶ ಕೊಡುತ್ತಿದೆ. ಸರ್ವರ್ ಇರಲಾರದ ಕಾರಣ ಇನ್ನೂ ರೇಷನ್ ಕಾರ್ಡುಗಳಲ್ಲಿ ಮಕ್ಕಳ ಹೆಸರು ಸೇರ್ಪಡೆಯಾಗಿಲ್ಲ. ಕೊನೆ ದಿನಾಂಕ ಮುಂದುವರಿಸಬೇಕು ಎಂದು ಕೇಸೂರು ನಿವಾಸಿ, ಗ್ರಾಹಕ ಮರಿಯಪ್ಪ ಮನವಿ ಮಾಡಿದ್ದಾರೆ.ಅರ್ಜಿ ಸಲ್ಲಿಸಲು ಆಗುತ್ತಿಲ್ಲ: ಸರ್ಕಾರ ಹೆಸರು, ಫೋಟೋ, ರೇಷನ್ ಅಂಗಡಿ ಬದಲಾವಣೆ ಸೇರಿದಂತೆ ಇನ್ನಿತರ ತಿದ್ದುಪಡಿಗೆ ಅವಕಾಶ ನೀಡಿದೆ. ಆದರೆ, ಸರ್ವರ್ ಪ್ರಾಬ್ಲಮ್‌ನಿಂದ ಇಡೀ ದಿನ ಕಳೆದರೂ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಸರ್ವರ್ ಸಮಸ್ಯಗೆ ಪರಿಹಾರ ನೀಡಬೇಕು ಎನ್ನುತ್ತಾರೆ ಗ್ರಾಮ ಒನ್ ಕೇಂದ್ರದ ಆಪರೇಟರ್‌ಗಳು.
ಸರಿಪಡಿಸಲು ಕ್ರಮ: ರೇಷನ್ ಕಾರ್ಡ್ ಸರ್ವರ್ ಸಮಸ್ಯೆ ರಾಜ್ಯ ಮಟ್ಟದಲ್ಲಿದೆ. ಇದರಿಂದ ನಾವು ಸರ್ವರ್ ಸಮಸ್ಯೆ ಸರಿಪಡಿಸುವಂತೆ ಮೇಲಧಿಕಾರಿಗಳೊಂದಿಗೆ ಮಾತಾಡಿದ್ದೇವೆ. ಸರಿ ಮಾಡುವ ಪ್ರಯತ್ನ ನಡೆದಿದೆ. ದಿನಾಂಕ ಮುಂದುವರಿಸುವುದು ರಾಜ್ಯಮಟ್ಟದಲ್ಲಿ ನಡೆಯುವ ಪ್ರಕ್ರಿಯೆ ಎನ್ನುತ್ತಾರೆ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚಿದಾನಂದಪ್ಪ.